ADVERTISEMENT

ಕನ್ನಡ ಭಾಷೆಯ ಕಸುವು ಹೆಚ್ಚಿಸಿದವರು ಶರಣರು: ಶಿವಾಚಾರ್ಯ ಸ್ವಾಮೀಜಿ

ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಪಂಡಿತಾರಾಧ್ಯ ಶ್ರೀ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 0:15 IST
Last Updated 3 ಆಗಸ್ಟ್ 2020, 0:15 IST
‘ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 2ನೇ ದಿನದ ಕಾರ್ಯಕ್ರಮ ಭಾನುವಾರ ನಡೆಯಿತು
‘ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 2ನೇ ದಿನದ ಕಾರ್ಯಕ್ರಮ ಭಾನುವಾರ ನಡೆಯಿತು   

ಹೊಸದುರ್ಗ: ‘ಶರಣರು ಮನದೆರೆದು ಆಡಿದ ಅಮೃತ ನುಡಿಗಳೇ ವಚನಗಳು. ಅವು ಕೇವಲ ಸಾಹಿತ್ಯ ರಚನೆಗಾಗಿ ಬರೆದವುಗಳಲ್ಲ. ಬದುಕಿನ ಅನುಭವ, ಅನುಭಾವಗಳ ರಸಪಾಕ’ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಜಗದ್ಗುರು ಶಾಖಾ ಮಠದಿಂದ ಆಯೋಜನೆಗೊಂಡಿರುವ ‘ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 2ನೇ ದಿನದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

‘ವಚನಗಳು ಲಿಂಗಾಯತ ಧರ್ಮ, ಶರಣ ಪರಂಪರೆ, ಕನ್ನಡ ಸಂಸ್ಕೃತಿಗೆ ಹಿಡಿದ ಕನ್ನಡಿ. ಕನ್ನಡ ಭಾಷೆಯ ಕಸುವು, ಬನಿ, ಬೆಡಗು ಹೆಚ್ಚಿಸಿದವರು ಶರಣರು. ಬಸವಾದಿ ಶಿವಶರಣರು ತಮ್ಮ ಆಚಾರ, ವಿಚಾರಗಳನ್ನು ಮೂಡಿಸಿದ್ದು ಕನ್ನಡ ಭಾಷೆಯಲ್ಲಿ. ಈ ಭಾಷೆಯ ಗೌರವ ಹೆಚ್ಚಿಸಿದವರು ಸಂಸ್ಕೃತ ಬಲ್ಲ ವಿದ್ವಾಂಸರಲ್ಲ, ಸಂಸ್ಕೃತವೇ ಗೊತ್ತಿಲ್ಲದ ಅತ್ಯಂತ ತಳವರ್ಗದಿಂದ ಬಂದವರು. ಬಸವಾದಿ ಶಿವಶರಣರ ಮೂಲ ಉದ್ದೇಶ ವೈದಿಕ ಪರಂಪರೆಗೆ ಎದುರಾಗಿ ಶರಣ ಪರಂಪರೆಯನ್ನು ಬೆಳೆಸುವುದಾಗಿತ್ತು. ಶರಣ ಪರಂಪರೆ ಜೀವಪರವಾದುದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ವಚನ ಸಾಹಿತ್ಯ ಕನ್ನಡದ ಉಸಿರು’ ವಿಷಯ ಕುರಿತು ಬೀದರ್‌ನ ಮೇನಕಾ ನರೇಂದ್ರ ಪಾಟೀಲ್ ಉಪನ್ಯಾಸ ನೀಡಿ, ‘ವಚನ ಸಾಹಿತ್ಯವು ವಿಶ್ವ ಸಾಹಿತ್ಯಕ್ಕೇ ಒಂದು ಕಿರೀಟವಿದ್ದಂತೆ. ಬಸವಪೂರ್ವ ಯುಗದಲ್ಲಿ ಪುರೋಹಿತಷಾಹಿಗಳಿಗೆ ಭಾಷೆಯೂ ಶೋಷಣೆಯ ದೊಡ್ಡ ಅಸ್ತ್ರವಾಗಿತ್ತು’ ಎಂದು ವಿವರಿಸಿದರು.

ಶಿವಸಂಚಾರದ ಕಲಾವಿದರಾದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್‌.ಎಸ್.ನಾಗರಾಜ್ ವಚನಗೀತೆ ಹಾಡಿದರು. ವಾಟ್ಸ್‌ಆ್ಯಪ್‌ ಮೂಲಕ ಕೇಳಿದ ಹಲವು ಪ್ರಶ್ನೆಗಳಿಗೆ ಪಂಡಿತಾರಾಧ್ಯ ಶ್ರೀಗಳು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.