ADVERTISEMENT

ಪರಿಷತ್‌ ಕಾರ್ಯಕಲಾಪ ಕಾಗದ ರಹಿತ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 21:29 IST
Last Updated 22 ಜೂನ್ 2021, 21:29 IST
ಸಭಾಪತಿ ಬಸವರಾಜ ಹೊರಟ್ಟಿ ವರ್ಚುವಲ್ ಸಂವಾದದಲ್ಲಿ ವಿಷಯ ಮಂಡಿಸಿದರು
ಸಭಾಪತಿ ಬಸವರಾಜ ಹೊರಟ್ಟಿ ವರ್ಚುವಲ್ ಸಂವಾದದಲ್ಲಿ ವಿಷಯ ಮಂಡಿಸಿದರು   

ಬೆಂಗಳೂರು: ವಿಧಾನಪರಿಷತ್ತಿನ ಕಾರ್ಯಚಟುವಟಿಕೆ ಮತ್ತು ಸದನದ ಕಾರ್ಯಕಲಾಪವನ್ನು ಅತಿ ಶೀಘ್ರವೇ ಕಾಗದ ರಹಿತ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

114 ವರ್ಷಗಳ ಇತಿಹಾಸ ಹೊಂದಿರುವ ವಿಧಾನಪರಿಷತ್ತಿನ ಆಮೂಲಾಗ್ರ ಬದಲಾವಣೆ ಮಾಡಲಾಗುವುದು ಎಂದು ಅವರು ಸಂಸದೀಯ ಕಾರ್ಯವಿಧಾನಗಳ ಕುರಿತು ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಮಂಗಳವಾರ ಹಮ್ಮಿಕೊಂಡಿದ್ದ ವಿಧಾನಮಂಡಲಗಳ ಸಭಾಪತಿ ಮತ್ತು ಸಭಾಧ್ಯಕ್ಷರ ವರ್ಚುವಲ್‌ ಸಂವಾದದಲ್ಲಿ ಹೇಳಿದರು.

ರಾಜ್ಯ ವಿಧಾನಪರಿಷತ್ತನ್ನು ಮಾದರಿ ವಿಧಾನಪರಿಷತ್ತನ್ನಾಗಿ ಮಾಡುವ ಸಂಕಲ್ಪದೊಂದಿಗೆ ಹಲವು ವಿನೂತನ ಕ್ರಮ ಕೈಗೊಳ್ಳಲಾಗುತ್ತಿದೆ. ಇ–ವಿಧಾನ ಕಾರ್ಯಕ್ರಮದಡಿ ವಿಧಾನಪರಿಷತ್ತನ್ನು ಕಾಗದ ರಹಿತವಾಗಿ ಮಾಡುವ ನಿಟ್ಟಿನಲ್ಲಿ ಈಗಾಗಲೇ ಕ್ರಮ ಜರುಗಿಸಲಾಗುತ್ತಿದೆ. ಸದನದ ಕಾರ್ಯಕಲಾಪ ಮತ್ತು ಪ್ರಶ್ನೋತ್ತರಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಕಳೆದ ಬಜೆಟ್‌ ಅಧಿವೇಶನದ ಸಂದರ್ಭದಲ್ಲಿ ವಿಧಾನಪರಿಷತ್‌ ಕಾರ್ಯ ಕಲಾಪಗಳನ್ನು ರಾಜ್ಯಸಭೆಯ ಮಾದರಿಯಲ್ಲಿ ಮಾಡಲಾಗುತ್ತಿದೆ. ನಿಗದಿತ ವೇಳೆ ಮತ್ತು ಅವಧಿಯಲ್ಲಿಯೇ ಪ್ರಶ್ನೋತ್ತರ, ಶೂನ್ಯ ವೇಳೆ ಸೇರಿದಂತೆ ವಿವಿಧ ಕಾರ್ಯಕಲಾಪಗಳನ್ನು ರಾಜ್ಯಸಭೆಯ ಮಾದರಿಯಲ್ಲಿ ನಡೆಸಲಾಗುತ್ತಿದೆ ಎಂದು ಹೊರಟ್ಟಿ ವಿವರಿಸಿದರು.

ಕೋವಿಡ್‌ ಸಂದರ್ಭದಲ್ಲಿಯೂ ಸರ್ಕಾರದ ಸೂಕ್ತ ನಿರ್ದೇಶನಗಳನ್ನು ಪಾಲಿಸಿ ಯಶಸ್ವಿಯಾಗಿ ಸದನದ ಕಾರ್ಯ ಕಲಾಪಗಳನ್ನು ನಡೆಸಲಾಗಿದೆ. ಕೋವಿಡ್‌ ಬಗ್ಗೆ ನಾಗರಿಕರಲ್ಲಿ ಜನಜಾಗೃತಿ ಮೂಡಿಸುವಲ್ಲೂ ರಾಜ್ಯದ ವಿಧಾನಪರಿಷತ್‌ ಸದಸ್ಯರ ಪಾತ್ರ ಅನುಕರಣೀಯವಾಗಿದೆ ಎಂದು ಹೊರಟ್ಟಿ ತಿಳಿಸಿದರು.
ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಮಾತನಾಡಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ದೇಶದ ವಿವಿಧ ರಾಜ್ಯಗಳ ಸಭಾಧ್ಯಕ್ಷರು ಮತ್ತು ಸಭಾಪತಿಗಳು ಭಾಗವಹಿಸಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.