ADVERTISEMENT

ಲೋಕಸಭೆ ಸೀಟು ಹಂಚಿಕೆ: ವಿ ಆರ್‌ ನಾಟ್‌ ಬೆಗ್ಗರ್ಸ್– ಕುಮಾರಸ್ವಾಮಿ ಗರಂ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2019, 9:28 IST
Last Updated 19 ಫೆಬ್ರುವರಿ 2019, 9:28 IST
   

ಮೈಸೂರು: ‘ಲೋಕಸಭಾ ಚುನಾವಣೆ ಸೀಟು ಹಂಚಿಕೆ ಸಂಬಂಧ ಕಾಂಗ್ರೆಸ್‌ ನಾಯಕರು ನಮ್ಮ ಜತೆ ಚರ್ಚಿಸಿಲ್ಲ. ಜೆಡಿಎಸ್‌ಗೆ ಇಂತಿಷ್ಟು ಸೀಟು ಬಿಟ್ಟುಕೊಡಬೇಕು ಎಂದು ಅವರು ಕೈಗೊಂಡ ತೀರ್ಮಾನದ ಬಗ್ಗೆ ನಾನರಿಯೆ. ಏಳೋ, ಐದೋ, ಮೂರೋ... ಎಷ್ಟು ಬಿಟ್ಟುಕೊಡುತ್ತಾರೋ ಗೊತ್ತಿಲ್ಲ. ವಿ ಆರ್‌ ನಾಟ್‌ ಬೆಗ್ಗರ್ಸ್ (ನಾವು ಭಿಕ್ಷುಕರಲ್ಲ)’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಹೇಳಿದರು.

ಮೈಸೂರಿನಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಒಟ್ಟಾಗಿ ಚುನಾವಣೆ ಎದುರಿಸಿ ರಾಷ್ಟ್ರದ ರಾಜಕಾರಣದಲ್ಲಿ ಒಂದು ಸಂದೇಶ ಕೊಡಬೇಕು ಎಂಬುದು ನಮ್ಮ ಭಾವನೆ. ಆದ್ದರಿಂದ ಸೀಟು ಹಂಚಿಕೆ ವಿಚಾರದಲ್ಲಿ ಜತೆಯಾಗಿ ಕುಳಿತು ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು ಎಂದು ಸ್ಪಷ್ಟಪಡಿಸಿದರು.

‘ಮೈತ್ರಿ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡುವುದರತ್ತ ಮಾತ್ರ ಗಮನ ಹರಿಸಿದ್ದೇನೆ. ಇದನ್ನು ಹಲವು ಸಲ ಹೇಳಿದ್ದೇನೆ. ಸೀಟು ಹೊಂದಾಣಿಕೆ ವಿಷಯದಲ್ಲಿ ಎರಡೂ ಪಕ್ಷಗಳ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದುನೋಡೋಣ’ ಎಂದರು.

ADVERTISEMENT

ಬಿಜೆಪಿಯು ಇದೇ 21 ರಿಂದ ನಡೆಸಲು ಉದ್ದೇಶಿಸಿರುವ ‘ಮೋದಿ ವಿಜಯಸಂಕಲ್ಪ ಯಾತ್ರೆ’ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲ ಪಕ್ಷಗಳಿಗೂ ಅದರದ್ದೇ ಆದ ಜವಾಬ್ದಾರಿ ಇರುತ್ತವೆ. ಅದರಂತೆ ಬಿಜೆಪಿಯವರು ಯಾತ್ರೆ ನಡೆಸುತ್ತಿದ್ದಾರೆ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.