ADVERTISEMENT

ದೌರ್ಜನ್ಯ ಪ್ರಶ್ನಿಸಿದ್ದಕ್ಕೆ ಅವಮಾನಿಸಿದರು

ಭಾಗವತ ಪಟ್ಲ ಸತೀಶ್‌ ಶೆಟ್ಟಿ ಆರೋಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:50 IST
Last Updated 25 ನವೆಂಬರ್ 2019, 19:50 IST
ಪಟ್ಲ ಸತೀಶ್‌ ಶೆಟ್ಟಿ
ಪಟ್ಲ ಸತೀಶ್‌ ಶೆಟ್ಟಿ   

ಮಂಗಳೂರು: ‘ಕಟೀಲು ಯಕ್ಷಗಾನ ಮೇಳದಲ್ಲಿ ಕಲಾವಿದರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಶ್ನಿಸಿದ್ದು ಮತ್ತು ತೊಂದರೆಗೊಳಗಾದ ಕಲಾವಿದರ ಪರ ನಿಂತಿದ್ದಕ್ಕಾಗಿಯೇ ನನ್ನನ್ನು ಮೇಳದಿಂದ ಹೊರಹಾಕಿ ಅವಮಾನಿಸಲಾಗಿದೆ’ ಎಂದು ಭಾಗವತ ಪಟ್ಲ ಸತೀಶ್‌ ಶೆಟ್ಟಿ ಆರೋಪಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೇಳದ ಸಂಚಾಲಕ ದೇವಿಪ್ರಸಾದ್‌ ಶೆಟ್ಟಿ ಮತ್ತು ಅವರ ಬೆಂಬಲಿಗರು ನಿರಂತರವಾಗಿ ಕಲಾವಿದರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. 2017ರಲ್ಲಿ ನನ್ನನ್ನು ತಮ್ಮ ಮೇಳಕ್ಕೆ ನಿಯೋಜಿಸುವಂತೆ ಒತ್ತಾಯಿಸಿದ ಏಳು ಕಲಾವಿದರನ್ನು ಕೈಬಿಡಲಾಗಿತ್ತು. ಅವರ ಪರವಾಗಿ ನಾನು ಧ್ವನಿ ಎತ್ತಿದ್ದೆ. ಆ ಬಳಿಕ ನಿರಂತರವಾಗಿ ಅಪಪ್ರಚಾರ ಮಾಡುತ್ತಿದ್ದರು. ಈಗ ರಂಗಸ್ಥಳದಿಂದ ಹಿಂದಕ್ಕೆ ಕರೆಸಿ ಅವಮಾನಿಸಿದ್ದಾರೆ’ ಎಂದರು.

19 ವರ್ಷ ಮೇಳದಲ್ಲಿ ಕೆಲಸ ಮಾಡಿದ್ದು, ಇತ್ತೀಚಿನ ಕೆಲವು ವರ್ಷಗಳಿಂದ ಕಹಿ ಘಟನೆಗಳೇ ಹೆಚ್ಚಿವೆ. ಆರಂಭದಲ್ಲಿ ಎರಡನೇ ಮೇಳದಲ್ಲಿದ್ದ ತಮ್ಮನ್ನು, 2010ರಲ್ಲಿ ದೇವಿಪ್ರಸಾದ್‌ ಶೆಟ್ಟಿ ಐದನೇ ಮೇಳಕ್ಕೆ ಕಳುಹಿಸಿದರು. 2013ರಲ್ಲಿ ಆರನೇ ಮೇಳಕ್ಕೆ ಕಳುಹಿಸಿದರು. ಅತಿಥಿ ಭಾಗವತನಾಗಿ ಹೊರಗಿದ್ದುಕೊಂಡು ಕಟೀಲಿನ ಎಲ್ಲ ಮೇಳಗಳಿಗೂ ಹಾಡುವಂತೆ 2016ರಲ್ಲಿ ಸೂಚಿಸಿದ್ದರು. ಅದನ್ನು ನಿರಾಕರಿಸಿದ್ದ ದಿನದಿಂದಲೇ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಾ ಬಂದರು ಎಂದು ದೂರಿದರು.

ADVERTISEMENT

ಬಹಿರಂಗ ಚರ್ಚೆಗೆ ಸಿದ್ಧ: ‘ನಾನು ಯಾವತ್ತೂ ಮೇಳದ ಶಿಸ್ತು ಉಲ್ಲಂಘಿಸಿಲ್ಲ. ಯಾವ ಸಂದರ್ಭದಲ್ಲೂ ಮೇಳದ ಚಟುವಟಿಕೆಗೆ ನನ್ನಿಂದ ತೊಂದರೆ ಆಗಿಲ್ಲ. ಈವರೆಗೆ ಅಂತಹ ಯಾವ ವಿಷಯವನ್ನೂ ಮೇಳದ ಸಂಚಾಲಕರಾಗಲೀ, ದೇವಸ್ಥಾನದ ಆಡಳಿತ ಮಂಡಳಿ ಪ್ರತಿನಿಧಿಗಳಾಗಲೀ ಚರ್ಚಿಸಿಲ್ಲ. ಈಗ ಏಕಾಏಕಿ ಆರೋಪ ಮಾಡುತ್ತಿದ್ದಾರೆ. ಈ ಕುರಿತು ಯಾವುದೇ ಸ್ಥಳದಲ್ಲಿ ಬಹಿರಂಗ ಚರ್ಚೆಗೆ ನಾನು ಸಿದ್ಧ’ ಎಂದು ಸತೀಶ್‌ ಶೆಟ್ಟಿ ಸವಾಲು ಹಾಕಿದರು.

ಇದೇ 22ರಂದು ಪ್ರಥಮ ಸೇವೆಯಾಟದ ದಿನ ಮೇಳದ ಪ್ರಧಾನ ಭಾಗವತರು ತಮ್ಮೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು. ಅವರಿಗೆ ತಿಳಿಸಿಯೇ ಸಕಾಲಕ್ಕೆ ಕಟೀಲು ತಲುಪಿ, ಚೌಕಿಯಲ್ಲಿ ಪ್ರಸಾದ ಸ್ವೀಕರಿಸಲಾಗಿತ್ತು. ಜಾಗಟೆ ಮತ್ತು ಪುಸ್ತಕವನ್ನು ಹಿರಿಯ ಮುಖ್ಯ ಭಾಗವತರಿಂದಲೇ ಸ್ವೀಕರಿಸಿ ರಂಗಸ್ಥಳ ಪ್ರವೇಶಿಸಲಾಗಿತ್ತು. ಮೇಳದಿಂದ ಕೈಬಿಡುವ ಕುರಿತು ಮೊದಲೇ ಸೂಚನೆ ನೀಡಲಾಗಿತ್ತು ಎಂಬ ದೇವಿಪ್ರಸಾದ್‌ ಶೆಟ್ಟಿಯವರ ಹೇಳಿಕೆ ಅಪ್ಪಟ ಸುಳ್ಳು. ಈ ಬಗ್ಗೆ ಎಲ್ಲಿ ಬೇಕಾದರೂ ಪ್ರಮಾಣಕ್ಕೆ ತಾವು ಸಿದ್ಧ ಎಂದರು.

‘ಆ ದಿನ ಏನು ನಡೆಯಿತು ಎಂಬುದನ್ನು ಸಾವಿರಾರು ಮಂದಿ ಪ್ರತ್ಯಕ್ಷವಾಗಿ ನೋಡಿದ್ದಾರೆ. ದೇವಿಪ್ರಸಾದ್‌ ಶೆಟ್ಟಿ ಅವರೇ ರಂಗಸ್ಥಳದ ಮೇಲೆ ಹತ್ತಿ ಬಂದು ಕೆಳಕ್ಕೆ ಇಳಿಯುವಂತೆ ನನಗೆ ತಾಕೀತು ಮಾಡಿದರು. ಮೇಳದ ಚಟುವಟಿಕೆಗೆ ಅಡ್ಡಿ ಆಗಬಾರದೆಂದು ನಾನು ಇಳಿದುಬಂದೆ. ಪೇಟವನ್ನು ಕಟೀಲು ದೇವಸ್ಥಾನದ ಬಾಗಿಲಿನ ಎದುರು ಇರಿಸಿ ‍ಪ್ರಾರ್ಥಿಸಿ ಹೊರಬಂದೆ. ಈಗ ಸುಳ್ಳು ಹೇಳಿ ಜನರನ್ನು ದಿಕ್ಕುತಪ್ಪಿಸಲು ಯತ್ನಿಸುತ್ತಿದ್ದಾರೆ’ ಎಂದು ದೂರಿದರು.

ಜನಪ್ರಿಯತೆ ಸಹಿಸುತ್ತಿಲ್ಲ:

‘ನನ್ನ ಜನಪ್ರಿಯತೆಯನ್ನು ದೇವಿಪ್ರಸಾದ್‌ ಶೆಟ್ಟಿ ಮತ್ತು ಬಳಗ ಸಹಿಸಿಕೊಳ್ಳುತ್ತಿಲ್ಲ. ಇದೇ ಕಾರಣದಿಂದ 2016ರಲ್ಲೇ ಮೇಳದಿಂದ ಹೊರಗಿಡಲು ಯತ್ನಿಸಿದ್ದರು. ಅವರ ಸಂಬಂಧಿಕರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ವಿರುದ್ಧ ಬರಹಗಳನ್ನೂ ಪ್ರಸಾರ ಮಾಡಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಮೇಳದಲ್ಲಿ ಕಡಿಮೆ ವೇತನ ನೀಡಲಾಗುತ್ತಿದೆ ಎಂದು ಕೆಲವು ಕಲಾವಿದರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಅವರನ್ನು ಇದೇ 22ರಂದು ಕಟೀಲಿನ ಸೌಂದರ್ಯ ಹೋಟೆಲ್‌ಗೆ ಕರೆಸಿಕೊಂಡ‌ ಸಂಚಾಲಕರು, ಬೆದರಿಸಿ ತಮ್ಮ ಪರವಾಗಿ ಹೇಳಿಕೆಗಳನ್ನು ಬರೆಸಿಕೊಂಡಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.