ADVERTISEMENT

ಯಾವುದೇ ಕಾರಣಕ್ಕೂ ಹುಲಿ ಕೊಲ್ಲುವುದಿಲ್ಲ: ಅರಣ್ಯ ಇಲಾಖೆ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 16:55 IST
Last Updated 9 ಅಕ್ಟೋಬರ್ 2019, 16:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಚೌಡಹಳ್ಳಿಯಲ್ಲಿ ರೈತನನ್ನು ಬಲಿ ಪಡೆದ ಹುಲಿಯನ್ನು ಯಾವುದೇ ಕಾರಣಕ್ಕೂ ಕೊಲ್ಲುವುದಿಲ್ಲ’ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ವನ್ಯಜೀವಿ ವಿಭಾಗ) ಸಂಜಯ್‌ ಮೋಹನ್ ಸ್ಪಷ್ಟಪಡಿಸಿದರು.

‘ಹುಲಿ ಕೊಲ್ಲಲು ಯಾವುದೇ ಆದೇಶವನ್ನು ಅರಣ್ಯ ಇಲಾಖೆ ನೀಡಿಲ್ಲ, ನೀಡುವುದೂ ಇಲ್ಲ. ಜೀವಂತವಾಗಿ ಸೆರೆ ಹಿಡಿಯಲಾಗುತ್ತದೆ’ ಎಂದು ಅವರು ಸುದ್ದಿಗಾರರಿಗೆ ಮಂಗಳವಾರ ತಿಳಿಸಿದರು.

‘ಬಂಡಿಪುರ ವ್ಯಾಪ್ತಿಯಲ್ಲಿ 120 ಹುಲಿಗಳಿವೆ. ಒಂದೆರಡು ಹುಲಿಗಳಿಂದ ಸಮಸ್ಯೆ ಉಂಟಾಗಿದೆ. ಕಳೆದ ಬಾರಿ 60 ವರ್ಷದ ವೃದ್ಧನ ಮೇಲೆ ಹುಲಿಯೊಂದು ದಾಳಿ ನಡೆಸಿತ್ತು. ಅದೇ ಹುಲಿ ಇರಬಹುದು ಎಂಬ ಸಂಶಯ ಇದೆ. ಮೊದಲು ಹುಲಿ ಯಾವುದು ಎಂಬುದನ್ನು ಪತ್ತೆ ಹಚ್ಚಿ ಬಳಿಕ ಅದನ್ನು ಸೆರೆ ಹಿಡಿಯಲಾಗುತ್ತದೆ’ ಎಂದರು.

ADVERTISEMENT

‘ಪ್ರತಿ ವರ್ಷ ಎರಡೆರಡು ಬಾರಿ ಕ್ಯಾಮೆರಾ ಇಡಲಾಗುತ್ತದೆ. ಕ್ಯಾಮೆರಾ ಮೂಲಕ ಪ್ರತಿಯೊಂದು ಹುಲಿ ವಿವರ ತಿಳಿಯಲಾಗುತ್ತದೆ. ಆ ಪ್ರದೇಶದಲ್ಲಿ ಓಡಾಡುವ ಹುಲಿ ಯಾವುದು? ಅದರ ಗಾತ್ರ ಎಷ್ಟು? ಎಂಬ ವಿವರ ತಿಳಿದ ಬಳಿಕ ಯಾವ ಹುಲಿ ದಾಳಿ ಮಾಡಿರಬಹುದು ಎಂಬುದು ಗೊತ್ತಾಗಲಿದೆ. ಆ ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ಮೈಸೂರು ಅಥವಾ ಬನ್ನೇರುಘಟ್ಟ ರಕ್ಷಣಾ ಶಿಬಿರದಲ್ಲಿ ಇಡಲಾಗುವುದು’ ಎಂದೂ ಅವರು ಹೇಳಿದರು.

‘ಮಹಾರಾಷ್ಟ್ರದಿಂದ ತಜ್ಞ ಶೂಟರ್‌ಗಳನ್ನು ನಾವು ಕರೆಸಿಲ್ಲ. ಅವರು ಬಂದಿದ್ದರೆ ವಾಪಸ್ ಕಳುಹಿಸಲಾಗುವುದು. ಕಾರ್ಯಾಚರಣೆಯಲ್ಲಿ ಸೇರಿಸಿಕೊಳ್ಳುವುದಿಲ್ಲ. ನಮ್ಮ ರಾಜ್ಯದಲ್ಲೇ ವನ್ಯಜೀವಿಗಳ ವೈದ್ಯರು ಇದ್ದಾರೆ. ಹುಲಿ ಸೆರೆ ಹಿಡಿಯುವ ಕೆಲಸ ಭರದಿಂದ ಸಾಗಿದೆ’ ಎಂದು ಅವರು ತಿಳಿಸಿದರು.

‘ಬಂಡಿಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಯುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ರಾತ್ರಿ ಸಂಚಾರಕ್ಕಾಗಿ 8 ವರ್ಷಗಳಿಂದ ಕೇರಳ ಒತ್ತಡ ಹೇರುತ್ತಿದೆ. ಯಾವುದೇ ಕಾರಣಕ್ಕೂ ನಿರ್ಬಂಧವನ್ನು ನಾವು ಸಡಿಲಿಸುವುದಿಲ್ಲ. ಹೈಕೋರ್ಟ್ ಕೂಡ ಇದೇ ಆದೇಶ ನೀಡಿರುವ ಕಾರಣ ನಮ್ಮ ನಿರ್ಧಾರ ಅಚಲ’ ಎಂದರು.

‘ಹಗಲು ಹೊತ್ತಿನ ಸಂಚಾರವನ್ನೂ ನಿರ್ಬಂಧಿಸಲಾಗುತ್ತದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆ ರೀತಿ ಏನೂ ಇಲ್ಲ, ಹಗಲು ಸಂಚಾರಕ್ಕೆ ಅವಕಾಶ ಮುಂದುವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.