ADVERTISEMENT

ಸತತ 9 ದಿನಗಳ ಜೀವನ್ಮರಣ ಹೋರಾಟ ನಡೆಸಿದ ಪೇಜಾವರ ಶ್ರೀ ನಿಧನ: ಯಾವಾಗ ಏನಾಯಿತು?

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 5:42 IST
Last Updated 29 ಡಿಸೆಂಬರ್ 2019, 5:42 IST
   

ಉಡುಪಿ: ತೀವ್ರ ಉಸಿರಾಟದ ಸಮಸ್ಯೆ ಹಾಗೂ ನ್ಯುಮೋನಿಯಾದಿಂದ ಬಳಲುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ (88) ಭಾನುವಾರ ಪೇಜಾವರ ಮಠದಲ್ಲಿ ನಿಧನರಾದರು. ಸತತ 9 ದಿನಗಳಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು.

ಸಾವಿಗೂ ಮುನ್ನ ತಿಮ್ಮಪ್ಪನ ದರ್ಶನ

ಪೇಜಾವರ ಶ್ರೀಗಳಿಗೆ ಸಾವು ಹತ್ತಿರವಾಗುತ್ತಿದ್ದಂತೆ ಇಷ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಭ್ರಮಿಸಿದ್ದರು. ಡಿ.17ರಂದು ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದ ಶ್ರೀಗಳು ಡಿ.18ರಂದು ಬೆಂಗಳೂರಿನ ವಿದ್ಯಾಪೀಠಕ್ಕೆ ಬಂದಿದ್ದರು. ಶ್ರೀಗಳ ಬಹಳ ಇಷ್ಟದ ಸ್ಥಳಗಳಲ್ಲಿ ವಿದ್ಯಾಪೀಠವೂ ಒಂದು. ಡಿ.19ರಂದು ಹಾಸನದ ರಾಘವೇಂದ್ರ ಮಠಕ್ಕೆ ಭೇಟಿ ನೀಡಿದ್ದರು. ರಾಘವೇಂದ್ರ ಮಠವೂ ಅವರಿಗೆ ಬಹಳ ಪ್ರಿಯವಾದ ಜಾಗ. ಅಲ್ಲಿಂದ ನೇರವಾಗಿ ಹುಟ್ಟೂರು ರಾಮಕುಂಜಕ್ಕೆ ಭೇಟಿ ನೀಡಿ, ಕಲಿತ ಶಾಲಾ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಬಾಲ್ಯದ ನೆನಪುಗಳನ್ನು ಸ್ಮರಿಸಿದ್ದರು. ಅಲ್ಲಿಂದ ನೇರವಾಗಿ ಶ್ರೀಗಳ ಕನಸಿನ ಕೂಸಾದ ಪಾಜಕಕ್ಕೆ ಬಂದಿಳಿದರು. ಇಲ್ಲಿ ಗುರುಕುಲ ಮಾದರಿಯ ಜತೆಗೆ, ಕಾನ್ವೆಂಟ್‌ ಶಿಕ್ಷಣವೂ ದೊರೆಯುವುದು ವಿಶೇಷ. ಅಲ್ಲಿಂದ ನೇರವಾಗಿ ಪೇಜಾವರ ಮಠಕ್ಕೆ ಬಂದು ಸಂಜೆ ರಾಜಾಂಗಣದಲ್ಲಿ 15 ನಿಮಿಷ ಪ್ರವಚನ ಮಾಡಿದರು. ಅಷ್ಟೊತ್ತಿಗೆ ಅವರ ಆರೋಗ್ಯ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ADVERTISEMENT

‘ಆರೋಗ್ಯ ನಿರ್ಲಕ್ಷ್ಯಿಸಿದ ಶ್ರೀಗಳು’

ಡಿಸೆಂಬರ್ 19 ರಂದು ರಾತ್ರಿ 9.30ಕ್ಕೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನ್ಯುಮೋನಿಯಾ ಇದೆ, ತಕ್ಷಣ ಚಿಕಿತ್ಸೆ ಆರಂಭಿಸಬೇಕು ಎಂದು ವೈದ್ಯರು ಸೂಚಿಸಿದರೂ ಶ್ರೀಗಳು ಅಲಕ್ಷ್ಯಿಸಿದರು. ಬೆಳಗ್ಗೆ ಬೇಗ ದೇವರ ಪೂಜೆ ಮುಗಿಸಿ ಬರುತ್ತೇನೆ ಎಂದು ಮಠಕ್ಕೆ ಹಿಂದಿರುಗಿದ ಶ್ರೀಗಳು, ಬೆಳಗ್ಗೆ ಅದೇ ಆಸ್ಪತ್ರೆಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಂದಿದ್ದರು. ಆವೇಳೆಗಾಗಲೇ ಅವರ ಆರೋಗ್ಯ ಗಂಭೀರವಾಗಿತ್ತು. ರಾತ್ರಿಯೇ ಶ್ರೀಗಳು ದಾಖಲಾಗಿದ್ದರೆ, ಬಹುಶಃ ಬದುಕುಳಿಯುವ ಸಾಧ್ಯತೆ ಹೆಚ್ಚಿತ್ತು ಎನ್ನುತ್ತಾರೆ ಅವರ ಆಪ್ತರು.

ಯಾವಾಗ ಏನಾಯ್ತು?

– ಡಿ.20ರಂದು ನಸುಕಿನ 3 ಗಂಟೆಗೆ ಪೇಜಾವರ ಶ್ರೀಗಳು ಅಸ್ವಸ್ಥ

– ಕೆಎಂಸಿಗೆ ದಾಖಲು, ನ್ಯುಮೋನಿಯಾ ಸೋಂಕು ಪತ್ತೆ

– ಶ್ರೀಗಳ ಆರೋಗ್ಯ ಗಂಭೀರ, ವೆಂಟಿಲೇಟರ್ ಅಳವಡಿಕೆ

– ಡಾ. ಸುಧಾ ವಿದ್ಯಾಸಾಗರ ನೇತೃತ್ವದ ವೈದ್ಯರ ತಂಡದಿಂದ ಚಿಕಿತ್ಸೆ

- ಡಿಸೆಂಬರ್ 21ರಂದು ಚಿಕಿತ್ಸೆಗೆ ಸ್ಪಂದಿಸಿದ ಶ್ರೀಗಳು, ಆರೋಗ್ಯ ಸ್ಥಿರ

- ಡಿಸೆಂಬರ್ 22ರಂದು ಬೆಂಗಳೂರಿನ ಮಣಿಪಾಲ್ ವೈದ್ಯರ ಆಗಮನ

- ಡಿಸೆಂಬರ್ 23ರಂದು ರಕ್ತದೊತ್ತಡ ನಿಯಂತ್ರಣ, ಏಮ್ಸ್‌ ವೈದ್ಯರ ನೆರವು

- ಡಿಸೆಂಬರ್ 24ರಂದು ಚಿಕಿತ್ಸೆಗೆ ಅಲ್ಪ ಸ್ಪಂದನೆ; ಸ್ವಲ್ಪ ಚೇತರಿಕೆ

- ಡಿಸೆಂಬರ್ 25ರಂದು ಶ್ವಾಸಕೋಶ ನಿಧಾನವಾಗಿ ಚೇತರಿಕೆ, ಪ್ರಜ್ಞಾಹೀನ ಸ್ಥಿತಿ

- ಡಿಸೆಂಬರ್ 26ರಂದು ಆರೋಗ್ಯ ದಿಢೀರ್ ಏರುಪೇರು, ಗಂಭೀರ

- ಡಿಸೆಂಬರ್ 27ರಂದು ಆರೋಗ್ಯ ತೀರಾ ಗಂಭೀರ, ದೇಹಸ್ಥಿತಿ ಇಳಿಮುಖ

- ಡಿಸೆಂಬರ್ 28ಕ್ಕೆ ಮಿದುಳು ನಿಷ್ಕ್ರಿಯತೆ, ಚಿಕಿತ್ಸೆಗೆ ಸ್ಪಂದಿಸದ ಶ್ರೀಗಳು

- ಡಿಸೆಂಬರ್ 29ರಂದು ಮಠಕ್ಕೆ ಶ್ರೀಗಳ ಸ್ಥಳಾಂತರ. ಬೆಳಗ್ಗೆ 9.20ಕ್ಕೆ ನಿಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.