ADVERTISEMENT

ಜೀವ ರಕ್ಷಕ ವ್ಯವಸ್ಥೆಯೊಂದಿಗೆ ಪೇಜಾವರ ಶ್ರೀ ನಾಳೆ ಮಠಕ್ಕೆ ಸ್ಥಳಾಂತರ: ಕಿರಿಯ ಯತಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 20:07 IST
Last Updated 28 ಡಿಸೆಂಬರ್ 2019, 20:07 IST
ಪೇಜಾವರ ಶ್ರೀ
ಪೇಜಾವರ ಶ್ರೀ   

ಉಡುಪಿ: ಪೇಜಾವರ ಶ್ರೀಗಳ ಆರೋಗ್ಯ ಚೇತರಿಕೆಯಾಗುವ ಯಾವ ಲಕ್ಷಣಗಳು ಕಾಣುತ್ತಿಲ್ಲವಾದ್ದರಿಂದ ಶ್ರೀಗಳ ಅಂತಿಮ ಆಸೆಯಂತೆ ಭಾನುವಾರ ಅವರನ್ನು ಮಠಕ್ಕೆ ಕರೆದೊಯ್ಯಲಾಗುವುದುಎಂದು ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ‘ಶ್ರೀಗಳು ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಹಾಗಾಗಿ, ಆಸ್ಪತ್ರೆಯಲ್ಲಿಟ್ಟುಕೊಳ್ಳುವ ಬದಲು ಮಠಕ್ಕೆ ಸ್ಥಳಾಂತರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಶ್ರೀಗಳು ಬದುಕಿರುವಷ್ಟು ದಿನಗಳು ಕೃಷ್ಣಮಠದ ಆವರಣದಲ್ಲಿ ಇರಲಿ ಎಂಬುದು ಎಲ್ಲರ ಅಪೇಕ್ಷೆ. ಅಗತ್ಯ ಜೀವರಕ್ಷಕಗಳ ವ್ಯವಸ್ಥೆಯೊಂದಿಗೆ ಗುರುಗಳನ್ನು ಮಠಕ್ಕೆ ಸಾಗಿಸಲಾಗುವುದು. ಅಲ್ಲಿಯೇ ತಜ್ಞ ವೈದ್ಯರು ಚಿಕಿತ್ಸೆ ಮುಂದುವರಿಸಲಿದ್ದಾರೆ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.‌

ADVERTISEMENT

ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಕರೆದೊಯ್ಯುವುದಿಲ್ಲ. ಈಗಾಗಲೇ ದೆಹಲಿಯ ಏಮ್ಸ್‌ ಹಾಗೂ ಕೆಎಂಸಿ ತಜ್ಞ ವೈದ್ಯರು ಶಕ್ತಿಮೀರಿ ಪ್ರಯತ್ನಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಿದುಳು ನಿಷ್ಕ್ರಿಯ:ಪೇಜಾವರ ಶ್ರೀಗಳ ಮಿದುಳು ನಿಷ್ಕ್ರಿಯ ಹಂತ ತಲುಪಿದ್ದು ಪರಿಸ್ಥಿತಿ ತೀರಾ ಗಂಭೀರವಾಗಿದೆ. ಶ್ರೀಗಳ ಆರೋಗ್ಯ ಸುಧಾರಿಸುವ ಲಕ್ಷಣಗಳು ತೋರುತ್ತಿಲ್ಲ. ಪ್ರಜ್ಞಾಹೀನ ಸ್ಥಿತಿ ಮುಂದುವರಿದಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಣಿಪಾಲದ ಕೆಎಂಸಿ ವೈದ್ಯರು ತಿಳಿಸಿದ್ದಾರೆ.

ಭಾನುವಾರ ಉಡುಪಿಯಲ್ಲಿ ಉಳಿಯಲಿರುವ ಸಿಎಂ
ಪೇಜಾವರ ಶ್ರೀಗಳ ಆರೋಗ್ಯ ಗಂಭೀರವಾಗುತ್ತಿದ್ದ ಮಾಹಿತಿ ಸಿಗುತ್ತಿದ್ದಂತೆ, ಬೈಂದೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ದಿಢೀರ್ ಉಡುಪಿಗೆ ದೌಡಾಯಿಸಿದರು. ಬೈಂದೂರಿನಿಂದ ಹೆಲಿಕಾಪ್ಟರ್‌ ಮೂಲಕ ಆದಿ ಉಡುಪಿಯ ಹೆಲಿಪ್ಯಾಡ್‌ಗೆ ಬಂದಿಳಿದು, ರಸ್ತೆ ಮಾರ್ಗವಾಗಿ ಮಣಿಪಾಲ ಆಸ್ಪತ್ರೆ ತಲುಪಿದರು.

ಸುಮಾರು ಅರ್ಧತಾಸು ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಮುಖ್ಯಮಂತ್ರಿ, ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಶ್ರೀಗಳ ಆರೋಗ್ಯ ಕ್ಷಣಕ್ಷಣಕ್ಕೆ ಕ್ಷೀಣಿಸುತ್ತಾ ಹೋಗುತ್ತಿದೆ. ಶ್ರೀಕೃಷ್ಣನೇ ಶ್ರೀಗಳನ್ನು ಕಾಪಾಡಬೇಕು. ನಾಳೆ ಉಡುಪಿಯಲ್ಲಿಯೇ ತಂಗಲಿದ್ದೇನೆ ಎಂದರು.

ಶ್ರೀಗಳ ಶಿಷ್ಯೆ ಹಾಗೂ ಮಾಜಿ ಕೇಂದ್ರ ಸಚಿವೆಯೂ ಆಗಿರುವ ಉಮಾಭಾರತಿ ಕೂಡ ಆಸ್ಪತ್ರೆಗೆ ಭೇಟಿ ನೀಡಿದರು. ಬಳಿಕ ಮಾತನಾಡಿದ ಅವರು, ಪೇಜಾವರ ಶ್ರೀಗಳು ಸಂತ ಶ್ರೇಷ್ಠರು. ನನಗೆ ಗುರುಮಾತ್ರವಲ್ಲ, ತಂದೆ ಸಮಾನರು. ಶ್ರೀಗಳ ಅಗತ್ಯತೆ ಸಮಾಜಕ್ಕೆ ಬೇಕಿರುವುದರಿಂದ ಕೊನೆಕ್ಷಣದವರೆಗೂ ದೇವರಲ್ಲಿ ಪ್ರಾರ್ಥಿಸುತ್ತೇನೆ. 7 ದಿನಗಳಿಂದ ಉಡುಪಿಯಲ್ಲಿಯೇ ತಂಗಿದ್ದೇನೆ. ಎಲ್ಲ ಮುಗಿಯುವವರೆಗೂ ಇಲ್ಲಿಯೇ ಇರುತ್ತೇನೆ ಎಂದರು.

ಧರ್ಮಸ್ಥಳದ ಧರ್ಮದರ್ಶಿ ವೀರೇಂದ್ರ ಹೆಗ್ಗಡೆ ಅವರು ಆಸ್ಪತ್ರೆಗೆ ಭೇಟಿನೀಡಿ ಮಾತನಾಡಿ, ಪೇಜಾವರ ಶ್ರೀಗಳ ದೇಹದ ವಿವಿಧ ಭಾಗಗಳನ್ನು ಯಂತ್ರಗಳ ಸಹಾಯದಿಂದ ನಿಯಂತ್ರಿಸಲಾಗುತ್ತಿದೆ. ಭಾನುವಾರ ವೈದ್ಯರು ಮುಂದಿನ ಚಿಕಿತ್ಸಾ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

‘ಸಹಪಂಕ್ತಿ ಊಟ ಮಾಡಲಿ’
ಬಾಗಲಕೋಟೆ:
‘ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಮುಂದಾಗಿರುವ ಆರ್‌ಎಸ್‌ಎಸ್‌ನವರು ಉಡುಪಿ ಪೇಜಾವರ ಮಠದಲ್ಲಿ ಪ್ರಧಾನಿ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಹಪಂಕ್ತಿಯಲ್ಲಿ ಕೂಡಿಸಿ ಊಟ ಮಾಡಿಸಲಿ’ ಎಂದು ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ ಸವಾಲು ಹಾಕಿದರು. ‘ಹಿಂದು ರಾಷ್ಟ್ರ ಕಟ್ಟಲು ಮುಂದಾಗಿರುವವರು ಮೊದಲು ಅಸ್ಪ್ರಶ್ಯತೆ ನಿವಾರಣೆಗೆ ಮುಂದಾಗಲಿ. ಬಿಜೆಪಿ, ಆರ್‌ಎಸ್‌ಎಸ್‌ನಲ್ಲಿರುವ ದಲಿತರು ಹೊರಬರಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.