ADVERTISEMENT

ವಿಶೇಷ ಮಕ್ಕಳ ಶಾಲಾ ಶಿಕ್ಷಕರಿಗೆ ಪಿಂಚಣಿ: ಶೀಘ್ರ ನಿರ್ಧಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 17:09 IST
Last Updated 22 ಮಾರ್ಚ್ 2021, 17:09 IST
ಸಚಿವೆ ಶಶಿಕಲಾ ಜೊಲ್ಲೆ
ಸಚಿವೆ ಶಶಿಕಲಾ ಜೊಲ್ಲೆ   

ಬೆಂಗಳೂರು: ರಾಜ್ಯದಲ್ಲಿರುವ ವಿಶೇಷ ಮಕ್ಕಳ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಪಿಂಚಣಿ ಸೌಲಭ್ಯ ಒದಗಿಸುವ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ಜೆಡಿಎಸ್‌ನ ಮರಿತಿಬ್ಬೇಗೌಡ ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದರು. ಬಳಿಕ ನಡೆದ ಚರ್ಚೆಗೆ ಉತ್ತರಿಸಿದ ಸಚಿವೆ, ‘ಹಣಕಾಸು ಇಲಾಖೆಯು 2019ರ ಜುಲೈ 17ರಂದು ಹೊರಡಿಸಿರುವ ಆದೇಶದಲ್ಲಿ ಕೆಲವು ತೊಡಕುಗಳಿವೆ. ಅವುಗಳನ್ನು ನಿವಾರಿಸಲು ಮುಂದಿನ ಎರಡು ಸಂಪುಟ ಸಭೆಗಳ ಒಳಗಾಗಿ ಸೂಕ್ತ ನಿರ್ಣಯ ಅಂಗೀಕರಿಸಲಾಗುವುದು’ ಎಂದರು.

ಸಮಸ್ಯೆ ಪರಿಹಾರಕ್ಕೆ ಸಭೆ: ಅನುದಾನಿತ ಶಾಲೆಗಳು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರಗೊಳ್ಳಲು ತ್ವರಿತವಾಗಿ ಅನುಮತಿ ನೀಡುವುದಕ್ಕೆ ಪೂರಕವಾಗಿ ಶೀಘ್ರದಲ್ಲಿ ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರದ ಸದಸ್ಯರ ಜತೆ ಸಭೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್ ಕುಮಾರ್ ಭರವಸೆ ನೀಡಿದರು.

ADVERTISEMENT

ಬಿಜೆಪಿಯ ಅರುಣ್ ಶಹಾಪುರ ಅವರು ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ, ಸಮಸ್ಯೆ ಕುರಿತು ಮಾತನಾಡಿದ ಬಳಿಕ ಉತ್ತರಿಸಿದ ಅವರು, ‘ಪೂರ್ವಾನುಮತಿಯೊಂದಿಗೆ ಶಾಲೆಗಳ ಸ್ಥಳಾಂತರ ಮಾಡಲು ಅನುಸರಿಸಬೇಕಾದ ನಿಯಮಗಳ ಕುರಿತು ಈಗಾಗಲೇ ಆದೇಶ ಹೊರಡಿಸಲಾಗಿದೆ. ಸಮಸ್ಯೆಗಳು ಮುಂದುವರಿದಿದ್ದಲ್ಲಿ ಶೀಘ್ರದಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗುವುದು’ ಎಂದರು.

ಬಿಜೆಪಿಯ ಶಶಿಲ್‌ ಜಿ. ನಮೋಶಿ, ಜೆಡಿಎಸ್‌ನ ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ ಸೇರಿದಂತೆ ಹಲವು ಸದಸ್ಯರು, ‘ಅನುದಾನಿತ ಶಾಲೆಗಳು ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ಸ್ಥಳಾಂತರ ಹೊಂದಲು ಅನುಮತಿ ನೀಡುವಾಗ ಶಿಕ್ಷಣ ಇಲಾಖೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.