ಬೆಂಗಳೂರು: ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಯಡಿ 23.19 ಲಕ್ಷ ಫಲಾನುಭವಿ ಗಳನ್ನು ಅನರ್ಹ ರೆಂದು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ಇಲಾಖೆ ಗುರುತಿಸಿದೆ.
ಅನರ್ಹ ಫಲಾನುಭವಿಗಳ ಪಿಂಚಣಿ ರದ್ದುಪಡಿಸಲು ದಾಖಲೆ ಪತ್ರಗಳ ಪರಿಶೀಲನೆ ನಡೆಸಿ ನಿಯಮಾನುಸಾರ ಅಗತ್ಯ ಕ್ರಮ ತೆಗೆದು ಕೊಳ್ಳಬೇಕು. ಅನರ್ಹ ಫಲಾನುಭವಿಗಳ ವಿರುದ್ಧ ಕೈಗೊಂಡ ಕ್ರಮದ ವಿವರವನ್ನೂ ಕಳಿಸಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಇಲಾಖೆ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಇದೇ 6ರಂದು ಪತ್ರ ಬರೆದಿದ್ದಾರೆ.
‘ಯೋಜನೆಯಡಿ 21.87 ಲಕ್ಷ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ 31.33 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಆಯುಕ್ತರು ವಿವರಿಸಿದ್ದಾರೆ.
ಅನರ್ಹ ಫಲಾನುಭವಿಗಳ ಪಟ್ಟಿಯನ್ನು ಶೀಘ್ರ ಸಲ್ಲಿಸುವಂತೆ ಅವರು ತಹಶೀಲ್ದಾರರಿಗೆ ತಿಳಿಸಿದ್ದಾರೆ.
ಈ ಫಲಾನುಭವಿಗಳ ವಿವರಗಳನ್ನು ಕುಟುಂಬದ ದತ್ತಾಂಶದ ಮಾಹಿತಿಯೊಂದಿಗೆ ವಯಸ್ಸು, ಆದಾಯ ಮಿತಿ, ಆದಾಯ ತೆರಿಗೆ ಪಾವತಿ, ಎಚ್‌ಆರ್‌ಎಂಎಸ್ ವಿವರಗಳನ್ನು ಸಂಯೋಜಿಸಿ ನೋಡಿದಾಗ, ವೃದ್ಧಾಪ್ಯ ಯೋಜನೆ ಅಡಿ ಸುಮಾರು 9.04 ಲಕ್ಷ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯಡಿ ಅಂದಾಜು 14.15 ಲಕ್ಷ ಅನರ್ಹ ಫಲಾನುಭವಿಗಳು ಇರುವುದನ್ನು ಗುರುತಿಸಲಾಗಿದೆ’ ಎಂದು ಆಯುಕ್ತರು ವಿವರಿಸಿದ್ದಾರೆ.
ಆದ ಕಾರಣ ಗ್ರಾಮವಾರು, ತಾಲ್ಲೂಕುವಾರು ಮತ್ತು ಜಿಲ್ಲಾವಾರು ಫಲಾನುಭವಿಗಳ ವಿವರಗಳನ್ನು ಎಲ್ಲ ತಹಶೀಲ್ದಾರರಿಗೆ ಒದಗಿಸಲಾಗಿದೆ. ಈ ಫಲಾನುಭವಿಗಳ ವಯಸ್ಸು, ಆದಾಯ ಮಿತಿ, ಎಪಿಎಲ್, ಆದಾಯ ತೆರಿಗೆ ಪಾವತಿ ಮತ್ತು ಎಚ್‌ಆರ್‌ಎಂಎಸ್ ಮಾನದಂಡಗಳನ್ನು ಭೌತಿಕವಾಗಿ ಪರಿಶೀಲಿಸಬೇಕು. ಅನರ್ಹ ಫಲಾನುಭವಿಗಳ ಪಿಂಚಣಿಯನ್ನು ರದ್ದುಪಡಿಸಲು ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕು. ಅನರ್ಹ ಫಲಾನುಭವಿಗಳ ವಿವರಗಳನ್ನು ಇದೇ 11ರ ಒಳಗೆ ಆಯುಕ್ತರ ಕಚೇರಿಗೆ ಮಾಹಿತಿ ಒದಗಿಸಲು ಎಲ್ಲ ತಹಶೀಲ್ದಾರ್ ಮತ್ತು ಅಧೀನ ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಹೇಳಿದ್ದಾರೆ.
65 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ಹಿರಿಯ ವ್ಯಕ್ತಿಗಳು ಆರ್ಥಿಕ ಸಂಕಷ್ಟದಲ್ಲಿದ್ದರೆ ಅವರ ನೆರವಿಗಾಗಿ ಈ ಯೋಜನೆ ಆರಂಭಿಸಲಾಯಿತು. ಸಣ್ಣ ರೈತರು, ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ನೇಕಾರರು,ಮೀನುಗಾರರು ಮತ್ತು ಅಸಂಘಟಿತ ವಲಯದ ಕಾರ್ಮಿಕರು (ಕಟ್ಟಡ ಕಾರ್ಮಿಕರನ್ನು ಹೊರತುಪಡಿಸಿ) ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ. ಪಿಂಚಣಿ ಮೊತ್ತ ತಿಂಗಳಿಗೆ ₹1,200.
ಬಡತನ ರೇಖೆಗಿಂತ (ಬಿಪಿಎಲ್) ಕೆಳಗಿರುವ 60 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವಯೋಮಾನದ ಹಿರಿಯ ನಾಗರಿಕರು ಈ ಯೋಜನೆ ಅಡಿ ಮಾಸಾಶನ ಪಡೆಯಲು ಅರ್ಹರು. ಇವರ ವಾರ್ಷಿಕ ಆದಾಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ₹32,000ಕ್ಕಿಂತ ಕಡಿಮೆ ಇರಬೇಕು. ಫಲಾನುಭವಿಗಳು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ ಸೇರಿ ಯಾವುದೇ ರೀತಿಯ ಪಿಂಚಣಿಯನ್ನು ಸಾರ್ವಜನಿಕ ಅಥವಾ ಖಾಸಗಿ ಮೂಲಗಳಿಂದ ಪಡೆಯುತ್ತಿರಬಾರದು.
60ರಿಂದ 64 ವರ್ಷದೊಳಗಿನ ಹಿರಿಯ ನಾಗರಿಕರಿಗೆ ತಿಂಗಳಿಗೆ ₹600, 65 ವರ್ಷ ಮೇಲ್ಪಟ್ಟವರಿಗೆ ₹1,200 ನೀಡಲಾಗುತ್ತದೆ.
ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಯೋಜನೆಯಡಿ ಒಬ್ಬನೇ ಒಬ್ಬ ಅರ್ಹ ಫಲಾನುಭವಿಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಈ ಯೋಜನೆ ಅಡಿ ದೊಡ್ಡ ಸಂಖ್ಯೆಯಲ್ಲಿ ಅನರ್ಹರೂ ಸೇರಿಕೊಂಡಿದ್ದಾರೆ. ಭೌತಿಕವಾಗಿ ಪರಿಶೀಲಿಸಿ, ಅನರ್ಹರನ್ನು ಗುರುತಿಸುವ ಉದ್ದೇಶದಿಂದ ಅಧಿಕಾರಿಗಳು ಸುತ್ತೋಲೆ ಅಥವಾ ಪತ್ರ ಬರೆದಿರಬಹುದು. ಅನರ್ಹರನ್ನು ರದ್ದುಪಡಿಸುವ ಸಂಬಂಧ ಈವರೆಗೆ ಯಾವುದೇ ಆದೇಶ ಹೊರಡಿಸಿಲ್ಲ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು. ಬಹಳ ಪ್ರಕರಣಗಳಲ್ಲಿ ಯೋಜನೆಗೆ ನಿಗದಿ ಮಾಡಿದ ವಯಸ್ಸಿಗಿಂತ ನಾಲ್ಕರಿಂದ ಐದು ವರ್ಷಗಳು ವ್ಯತ್ಯಾಸವಿರುತ್ತದೆ. ಒಂದು ಅಥವಾ ಎರಡು ವರ್ಷ ವ್ಯತ್ಯಾಸವಿದ್ದರೆ ಪರವಾಗಿಲ್ಲ. ದೊಡ್ಡ ಅಂತರವಿದ್ದರೆ ಯೋಜನೆಗೆ ಅರ್ಹರಾಗುವುದಿಲ್ಲ. ಆಧಾರ್ ಅನ್ನು ಜತೆ ತಾಳೆ ಮಾಡಿ ನಿರ್ಧರಿಸಲಾಗುತ್ತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.