ADVERTISEMENT

ಉತ್ಪನ್ನಗಳ ಪ್ರದರ್ಶನಕ್ಕೆ ಶಾಶ್ವತ ‘ಯೂನಿಟಿ ಮಾಲ್‌’: ಸಚಿವ ಶರಣಬಸಪ್ಪ

ಸಚಿವ ಶರಣಬಸಪ್ಪ ದರ್ಶನಾಪುರ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2023, 15:39 IST
Last Updated 6 ಅಕ್ಟೋಬರ್ 2023, 15:39 IST
<div class="paragraphs"><p>ಸಚಿವ ಶರಣಬಸಪ್ಪ ದರ್ಶನಾಪುರ</p></div>

ಸಚಿವ ಶರಣಬಸಪ್ಪ ದರ್ಶನಾಪುರ

   

ಬೆಂಗಳೂರು: ಭಾರತದ ಎಲ್ಲ ರಾಜ್ಯಗಳು, ಕರ್ನಾಟಕದ ಎಲ್ಲ ಜಿಲ್ಲೆಯ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಮೈಸೂರಿನಲ್ಲಿ ಶಾಶ್ವತ ‘ಯೂನಿಟಿ ಮಾಲ್‌’ ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಸುದ್ದಿಗಾರರ ಜತೆ ಶುಕ್ರವಾರ ಮಾತನಾಡಿದ ಅವರು, ರಾಜ್ಯದ ಒಂದು ಜಿಲ್ಲೆ ಒಂದು ಉತ್ಪನ್ನ ಹಾಗೂ ಕರಕುಶಲ ಉತ್ಪನ್ನಗಳಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿ ‘ಯೂನಿಟಿ ಮಾಲ್‌’ ಕಾರ್ಯನಿರ್ವಹಿಸಲಿದೆ. ದೇಶದ ಪಾರಂಪರಿಕ, ಸಾಂಸ್ಕೃತಿಕ ತಾಣವಾಗಿ ಅಭಿವೃದ್ಧಿಗೊಳ್ಳುವ ಮೂಲಕ ದೇಶ ಹಾಗೂ ವಿದೇಶಗಳ ಪ್ರವಾಸಿಗರನ್ನು ಸೆಳೆಯಲಿದೆ ಎಂದರು.

ADVERTISEMENT

ಕೇಂದ್ರ ಸರ್ಕಾರ ವಿಶೇಷ ನೆರವು ಯೋಜನೆಯಲ್ಲಿ ₹ 193 ಕೋಟಿ ಸಾಲದ ನೆರವು ನೀಡಿದೆ. ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಈಗಾಗಲೇ 6.5 ಎಕರೆ ಜಾಗ ಗುರುತಿಸಲಾಗಿದೆ. ಪ್ರತಿ ರಾಜ್ಯಗಳಿಗೆ ಒಂದು, ರಾಜ್ಯದ ಪ್ರತಿ ಜಿಲ್ಲೆಗಳಿಗೆ ಒಂದರಂತೆ ಒಟ್ಟು 175 ವಾಣಿಜ್ಯ ವಿಭಾಗಗಳನ್ನು ನಿರ್ಮಾಣ ಮಾಡಲಾಗುವುದು. ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಖಾಸಗಿ– ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲಾಗುವುದು ಎಂದು ಹೇಳಿದರು.

ಅತ್ಯಾಧುನಿಕ ಫುಡ್‌ಕೋರ್ಟ್‌, ಮನರಂಜನಾ ಕೇಂದ್ರಗಳು, ಬ್ಲಾಕ್‌ಚೈನ್‌ ಡಿಜಿಟಲ್‌ ತಾಣಗಳು, ಶಿಶುವಿಹಾರ, ಆಟದ ಸ್ಥಳಗಳನ್ನೂ ಒಳಗೊಂಡಿರುತ್ತದೆ ಎಂದರು.

ರಾಜ್ಯದ 7 ಸ್ಥಳಗಳಲ್ಲಿ ಸಣ್ಣ ಕೈಗಾರಿಕಾ ವಲಯ ನಿರ್ಮಾಣಕ್ಕೆ ಈಗಾಗಲೇ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಅವುಗಳ ಜತೆಗೆ ಗದಗ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ 200 ಎಕರೆ ಪ್ರದೇಶ ಗುರುತಿಸುವ ಕೆಲಸ ನಡೆದಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.