ADVERTISEMENT

ಮೇ 4ರಿಂದ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ, ಷರತ್ತುಗಳು ಅನ್ವಯ!

​ಪ್ರಜಾವಾಣಿ ವಾರ್ತೆ
Published 2 ಮೇ 2020, 16:24 IST
Last Updated 2 ಮೇ 2020, 16:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದಾದ್ಯಂತ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಯಲು ಲಾಕ್‌ಡೌನ್ ಜಾರಿಯಲ್ಲಿದ್ದು, ಅಂದಿನಿಂದಲೂ ಮದ್ಯ ಮಾರಾಟಕ್ಕೆ ತಡೆ ಹಿಡಿಯಲಾಗಿದೆ. ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್‌ ಮಾರ್ಗಸೂಚಿಗಳು ಮೇ 3ಕ್ಕೆ ಕೊನೆಯಾಗಲಿದ್ದು, ಮೇ 4ರಿಂದ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಕೇಂದ್ರದ ಮಾರ್ಗಸೂಚಿಯನ್ವಯ ರಾಜ್ಯ ಸರ್ಕಾರವು ಕೂಡ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಮಾರ್ಗಸೂಚಿಗಳನ್ವಯ ಕಂಟೈನ್‌ಮೆಂಟ್ ವಲಯಗಳನ್ನು ಹೊರತುಪಡಿಸಿ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿದೆ.

ಈ ಕುರಿತು ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದು, ಮೇ 4 ರಿಂದ ಸಿಎಲ್-2, ಸಿಎಲ್ 11-ಸಿ (ಎಂಎಸ್‌ಐಎಲ್ ಮದ್ಯದ ಮಳಿಗೆಗಳು) ಮತ್ತು ಕೆಎಸ್‌ಬಿಸಿಎಲ್ ಡಿಪೊಗಳು ಕಾರ್ಯ ನಿರ್ವಹಿಸಲು ಅನುಮತಿ ನೀಡಿದ್ದು, ಇವುಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಂಗಡಿಗಳು ಕಾರ್ಯನಿರ್ವಹಿಸುವಂತಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ಈ ವೇಳೆ ಕೆಲ ಷರತ್ತುಗಳೊಂದಿಗೆ ಮದ್ಯ ಮಾರಾಟ ಮಾಡಲು ತಿಳಿಸಿದೆ. ಕಂಟೈನ್‌ಮೆಂಟ್ ಝೋನ್‌ಗಳಲ್ಲಿನ ಯಾವುದೇ ಮದ್ಯದ ಅಂಗಡಿಗಳು ತೆರೆಯುವಂತಿಲ್ಲ. ಎಲ್ಲ ಮಳಿಗೆಗಳಲ್ಲೂ ಬೆಳಗ್ಗೆ 9ಗಂಟೆಯಿಂದ ಸಂಜೆ 7ಗಂಟೆವರೆಗೆ ಮಾತ್ರ ಕಾರ್ಯನಿರ್ವಹಿಸಬೇಕು. ಮದ್ಯದ ಮಳಿಗೆಗಳಲ್ಲಿ ಕೇವಲ ಐದು ಗ್ರಾಹಕರು ಮಾತ್ರ ಇರಬೇಕು. ಮದ್ಯ ಖರೀದಿಸುವಾಗ 6 ಅಡಿ ಅಂತರ ಕಾಯ್ದುಕೊಳ್ಳಬೇಕು. ನೌಕರರು ಮತ್ತು ಖರೀದಿಗೆ ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಸ್ಥಳದಲ್ಲಿ ಸ್ಯಾನಿಟೈಸರ್ ಬಳಸಬೇಕು.
ಮಾಲ್‌ಗಳು ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಮದ್ಯ ಇದ್ದಲ್ಲಿ ಮಾರಾಟ ಮಾಡಲು ಅವಕಾಶವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.