ADVERTISEMENT

‘ವ್ಯಕ್ತಿತ್ವ ಪರೀಕ್ಷೆ’: 102 ಅಭ್ಯರ್ಥಿಗಳು ಔಟ್‌!

ಮುಖ್ಯೋಪಾಧ್ಯಾಯರ ಹುದ್ದೆ: ‘ಅರ್ಹ’ರಿದ್ದೂ ಅನರ್ಹಗೊಳಿಸಿದ ಕೆಪಿಎಸ್‌ಸಿ– ಆಕ್ರೋಶ

ರಾಜೇಶ್ ರೈ ಚಟ್ಲ
Published 22 ನವೆಂಬರ್ 2020, 20:25 IST
Last Updated 22 ನವೆಂಬರ್ 2020, 20:25 IST
   

ಬೆಂಗಳೂರು: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಮೌಲನಾ ಆಜಾದ್ ಮಾದರಿ ಶಾಲೆಗಳಲ್ಲಿನ ಮುಖ್ಯೋಪಾಧ್ಯಾಯರ 100 ಹುದ್ದೆಗಳ (ಗ್ರೂಪ್ ‘ಬಿ’) ನೇಮಕಾತಿಗೆ 1:3 ಅನುಪಾತದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾದ 264 ಅಭ್ಯರ್ಥಿಗಳ ಪೈಕಿ, 102 ಮಂದಿಯನ್ನು ಮೂಲ ದಾಖಲಾತಿಗಳ ಪರಿಶೀಲನೆಯ ಬಳಿಕ ಕರ್ನಾಟಕ‌ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕೈಬಿಟ್ಟಿದೆ.

ಹುದ್ದೆಗೆ ಸ್ನಾತಕೋತ್ತರ ಪದವಿಯ ಜೊತೆಗೆ ಸ್ನಾತಕೋತ್ತರ ಪಡೆದ ವಿಷಯಕ್ಕೆ ಸಂಬಂಧಿಸಿದ ಟೀಚಿಂಗ್ ಮೆಥಡ್‌ನಲ್ಲಿ ಬಿ.ಎಡ್ ಪದವಿ ಪಡೆದಿರಬೇಕು. ಈ ವಿದ್ಯಾರ್ಹತೆ ಇಲ್ಲ ಎಂಬ ಕಾರಣ ನೀಡಿ 102 ಅಭ್ಯರ್ಥಿಗಳನ್ನು ವ್ಯಕ್ತಿತ್ವ ಪರೀಕ್ಷೆಯ ಪಟ್ಟಿಯಿಂದ ಹೊರಗಿಟ್ಟು, 162 ಅಭ್ಯರ್ಥಿಗಳ ಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿದೆ.

1:3 ಆಯ್ಕೆ ಪಟ್ಟಿಯಲ್ಲಿದ್ದರೂ ಸ್ನಾತಕೋತ್ತರ ಪದವಿ ಪಡೆದ ವಿಷಯದ ಟೀಚಿಂಗ್ ಮೆಥಡ್‌ನಲ್ಲಿ ಬಿ.ಎಡ್‌ ಪದವಿ ಪಡೆದಿರಬೇಕೆಂಬ ‘ವಿದ್ಯಾರ್ಹತೆ’ಯ ನಿಯಮದ ಕಾರಣಕ್ಕೆ ವ್ಯಕ್ತಿತ್ವ ಪರೀಕ್ಷೆಗೆ ಅನರ್ಹಗೊಂಡ ಅಭ್ಯರ್ಥಿಗಳು, ‘ವಿದ್ಯಾರ್ಹತೆ ವಿಷಯವನ್ನು ಕೆಪಿಎಸ್‌ಸಿ ತಪ್ಪಾಗಿ ಅರ್ಥೈಸಿಕೊಂಡಿದೆ. ಇದರಿಂದ ಅನ್ಯಾಯವಾಗಿದೆ’ ಎಂದು ಅವರು ದೂರಿದ್ದಾರೆ.

ADVERTISEMENT

ನಿಗದಿಪಡಿಸಿದ ವಿದ್ಯಾರ್ಹತೆಯಂತೆ, ಸ್ನಾತಕೋತ್ತರ ಪದವಿಯಲ್ಲಿ ಇತಿಹಾಸ ವಿಷಯ ಅಧ್ಯಯನದ ಜೊತೆಗೆ ಬಿ.ಎಡ್ ಪದವಿಯ ಪ್ರಮಾಣ ಪತ್ರದಲ್ಲಿ ಇತಿಹಾಸ ಟೀಚಿಂಗ್ ಮೆಥಡ್ ಇದ್ದವರನ್ನು ಮಾತ್ರ ವ್ಯಕ್ತಿತ್ವ ಪರೀಕ್ಷೆಗೆ ಕೆಪಿಎಸ್‌ಸಿ ಆಯ್ಕೆ ಮಾಡಿದೆ.

‘ಕೆಎಸ್ಒಯು, ಇಗ್ನೊ ಮುತಾದ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಬಿ.ಎಡ್ ಟೀಚಿಂಗ್ ಮೆಥಡ್‌ನಲ್ಲಿ ಸಮಾಜ ವಿಜ್ಞಾನ ಅಧ್ಯಯನ ಮಾಡಿದ ಅನೇಕ ಅಭ್ಯರ್ಥಿಗಳು, ಇತಿಹಾಸದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡಿದ್ದಾರೆ. ಬಿ.ಎಡ್‌ನಲ್ಲಿ ಇತಿಹಾಸ ವಿಷಯದ ಪದ ಇಲ್ಲ ಎಂಬ ಕಾರಣಕ್ಕೆ ಅಂಥವರನ್ನುಪಟ್ಟಿಯಿಂದ ಕೈ ಬಿಡಲಾಗಿದೆ’ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.

‘ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಬಿ.ಎಡ್‌ನಲ್ಲಿ ಟೀಚಿಂಗ್ ಆಫ್ ಸೈನ್ಸ್ ವಿಷಯದಡಿಯಲ್ಲಿ ಭೌತವಿಜ್ಞಾನ ಮೆಥಡಾಲಜಿ ಅಧ್ಯಯನ ಮಾಡಿದವರ ಅಂಕಪಟ್ಟಿಯಲ್ಲಿ ಭೌತವಿಜ್ಞಾನ ಪದ ಇಲ್ಲವೆಂಬ ಕಾರಣಕ್ಕೆ ಆಯ್ಕೆ ಮಾಡಿಲ್ಲ. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಸ್ಯ ವಿಜ್ಞಾನ, ಪ್ರಾಣಿ ವಿಜ್ಞಾನ ಮುಂತಾದ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿ, ಬಿ.ಎಡ್‌ ಪದವಿ ಪ್ರಮಾಣ ಪತ್ರದಲ್ಲಿ ಆಯಾ ವಿಷಯದ ಪದಗಳು ಇಲ್ಲದ ಕಾರಣಕ್ಕೆ ವ್ಯಕ್ತಿತ್ವ ಪರೀಕ್ಷೆಯಿಂದ ಅನರ್ಹಗೊಳಿಸಲಾಗಿದೆ’ ಎಂದೂ ಹೇಳಿದ್ದಾರೆ.

ಕರ್ನಾಟಕವೂ ಸೇರಿದಂತೆ ದೇಶದಲ್ಲಿ ಅನೇಕ ವಿಶ್ವವಿದ್ಯಾಲಯಗಳು ಒಂದು ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯದ ಶೀರ್ಷಿಕೆಯಡಿಯಲ್ಲಿ ಬಿ.ಎಡ್‌ ಪದವಿಯಲ್ಲಿ ಟೀಚಿಂಗ್ ಮೆಥಡ್ ವಿಷಯಗಳನ್ನು ನೀಡುತ್ತಿವೆ. ಇತಿಹಾಸ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಬಿ.ಎಡ್ ಪದವಿ ಸಮಾಜ ವಿಜ್ಙಾನ ವಿಷಯದಲ್ಲಿ ಮತ್ತು ಭೌತವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರೂ ಬಿ.ಎಡ್‌ ಪದವಿಯ ವಿಜ್ಞಾನ ವಿಷಯದಲ್ಲಿ ಬರುತ್ತದೆ ಎಂಬ ಅರಿವು ಇಲ್ಲದ ಕಾರಣದಿಂದ, ಹುದ್ದೆ ಪಡೆಯುವ ಅರ್ಹತೆ ಇದ್ದರೂ 102 ಅಭ್ಯರ್ಥಿಗಳನ್ನು ಪಟ್ಟಿಯಿಂದ ಕೆಪಿಎಸ್‌ಸಿ ಹೊರಗಿಟ್ಟಿದೆ. ಇದರಿಂದಾಗಿ ಬಿ.ಎಡ್‌ ಪದವಿಗೆ ಮಾನ್ಯತೆ ಇಲ್ಲದಂತಾಗಿದೆ’ ಎಂದಿದ್ದಾರೆ.

‘ಅರ್ಹರಿದ್ದೂ ಅನರ್ಹರು ಎಂದು ಗುರುತಿಸಿರುವ ಅಭ್ಯರ್ಥಿಗಳ ದಾಖಲಾತಿಗಳನ್ನು ಮತ್ತೊಮ್ಮೆ ಪರಿಶೀಲಿಸಿ ಇದೇ 30 ರಿಂದ ಡಿ. 2ರವರೆಗೆ ನಡೆಯಲಿರುವ ವ್ಯಕ್ತಿತ್ವ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು’ ಎಂದೂ ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.

**

ನಿಯಮಾನುಸಾರ ವಿದ್ಯಾರ್ಹತೆ ಹೊಂದಿಲ್ಲದ ಅಭ್ಯರ್ಥಿಗಳ ಅಭ್ಯರ್ಥಿತ್ವ ತಿರಸ್ಕರಿಸಲಾಗಿದೆ. ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾದವರ ಪಟ್ಟಿ ಮಾತ್ರ ಪ್ರಕಟಿಸಲಾಗಿದೆ.
-ಸತ್ಯವತಿ ಜಿ., ಕಾರ್ಯದರ್ಶಿ, ಕೆಪಿಎಸ್‌ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.