ADVERTISEMENT

ಎಸಿಬಿ ರದ್ದತಿ ವಿರುದ್ಧ ಅರ್ಜಿ: ವಿಚಾರಣೆಗೆ ‘ಸುಪ್ರೀಂ’ ನಕಾರ

ಎಸಿಬಿ ರದ್ದು ವಿರುದ್ಧ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 21:59 IST
Last Updated 5 ಸೆಪ್ಟೆಂಬರ್ 2022, 21:59 IST
.
.   

ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕನಕರಾಜು ಎಂಬುವರು ಸುಪ್ರೀಂ ಕೋರ್ಟ್‌ಗೆ ಆಗಸ್ಟ್‌ 23ರಂದು ಮೇಲ್ಮನವಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ಪೀಠವು ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿತ್ತು.

ಸೋಮವಾರ ಈ ಪ್ರಕರಣವು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಹಾಗೂ ಹಿಮಾ ಕೊಹ್ಲಿ ಅವರನ್ನು ಒಳಗೊಂಡ ಪೀಠದ ಎದುರು ಬಂತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್‌ ರೊಹಟಗಿ ಅವರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ‘ಕನಕರಾಜು ಅವರ ಮನವಿಯನ್ನು ನ್ಯಾಯಾಲಯ ಏಕೆ ಪರಿಗಣಿಸಬೇಕು’ ಎಂದು ಕೇಳಿದರು.

ADVERTISEMENT

ರೊಹಟಗಿ ವಾದ ಮಂಡಿಸಿ, ‘ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ಬೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಕನಕರಾಜು ಅವರು ಎಸಿಬಿಯಲ್ಲಿ ದೂರು ಸಲ್ಲಿಸಿದ್ದರು. ಅವರು ದೂರುದಾರರಾಗಿದ್ದಾರೆ. ಜತೆಗೆ, ಹೈಕೋರ್ಟ್‌ ಆದೇಶವನ್ನು ಕರ್ನಾಟಕ ಸರ್ಕಾರ ಸಹ ಪ್ರಶ್ನಿಸಿದೆ ಎಂದು ಕನಕರಾಜು ಹೇಳಿದ್ದಾರೆ’ ಎಂದರು.

ಆಗ ನ್ಯಾಯಮೂರ್ತಿಗಳು, ‘ಹಾಗಿದ್ದರೆ ರಾಜ್ಯ ಸರ್ಕಾರದ ಅರ್ಜಿಯೊಂದಿಗೆ ಪ್ರಕರಣದ ವಿಚಾರಣೆಯನ್ನು ಮುಂದೂಡುತ್ತೇವೆ’ ಎಂದು ತಿಳಿಸಿದರು.

ಸಾರ್ವಜನಿಕ ಸೇವೆಯಲ್ಲಿರುವ ಸರ್ಕಾರಿ ನೌಕರರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಗಳ ತನಿಖೆ ನಡೆಸಲು 2016ರಲ್ಲಿ ರಚಿಸಲಾಗಿದ್ದ ಎಸಿಬಿಯನ್ನು 2022ರ ಆಗಸ್ಟ್‌ 11ರಂದು ರದ್ದುಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.