ADVERTISEMENT

‘ಡಿಜಿಪಿ ಬೇಡವೆಂದರೂ ಪಿಎಫ್‌ಐ ಪ್ರಕರಣ ಹಿಂಪಡೆದಿದ್ದ ಸಿದ್ದರಾಮಯ್ಯ’: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 19:34 IST
Last Updated 3 ಅಕ್ಟೋಬರ್ 2022, 19:34 IST
   

ಬೆಂಗಳೂರು: ‘ಪಿಎಫ್‌ಐ ನಿಷೇಧಿಸುವಂತೆ ನಾನೇ ಒತ್ತಾಯಿಸಿದ್ದೆ ಎಂದು ಈಗ ಹೇಳುವ ಸಿದ್ದರಾಮಯ್ಯ, ಹಿಂದೆ 1,600 ಪಿಎಫ್ಐ ಕಾರ್ಯಕರ್ತರು ಭಾಗಿಯಾಗಿದ್ದ ವಿಧ್ವಂಸಕ ಕೃತ್ಯಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆದಿದ್ದರು’ ಎಂದು ಕಂದಾಯ ಸಚಿವ ಆರ್. ಅಶೋಕ ದೂರಿದರು.

‘ಸಿದ್ದರಾಮಯ್ಯ ಪಿಎಫ್‌ಐ ಭಾಗ್ಯ’ ಹೆಸರಿನಲ್ಲಿ ಭಿತ್ತಿಪತ್ರವನ್ನು ಸೋಮವಾರ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಹಿಂದೆ ತನ್ವೀರ್ ಸೇಠ್ ಪತ್ರ ಬರೆದು ಪಿಎಫ್‌ಐ ಕಾರ್ಯಕರ್ತರು ಅಮಾಯಕರು, ಅವರ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದಾರೆ. ಕೇಸ್ ವಾಪಸ್ ಪಡೆಯಬೇಕು ಎಂದು ಮನವಿ ಮಾಡಿದ್ದರು. ಆದರೆ, ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್ ಪಡೆಯಬಾರದೆಂದು ಅಂದಿನ ಡಿಜಿಪಿ,ಕಾನೂನು ಕಾರ್ಯದರ್ಶಿ ಸರ್ಕಾರಕ್ಕೆ ಸಲಹೆ ನೀಡಿದ್ದರು‌. ಆದರೂ, ಪಿಎಫ್‌ಐ ಏನು ತಪ್ಪುಮಾಡಿದೆ ರೀ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು’ ಎಂದು ಅಶೋಕ ಹೇಳಿದರು.

ಪ್ರಾಯಶ್ಚಿತ್ತದ ಯಾತ್ರೆ: ‘ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೊ ಪಾದಯಾತ್ರೆ ಪ್ರಾಯಶ್ಚಿತ್ತದ ಯಾತ್ರೆ. ನಾವು (ಕಾಂಗ್ರೆಸ್‌) ಭಾರತ ಒಡೆದವರು. ನಮ್ಮನ್ನು ಕ್ಷಮಿಸಿ ಬಿಡಿ ಎಂದು ಅವರು ಪ್ರಾಯಶ್ಚಿತ್ತದ ಯಾತ್ರೆ ನಡೆಸುತ್ತಿದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಭಾರತದಲ್ಲಿ ಎರಡು ಧ್ವಜ ಹಾರಿಸಿದ್ದು ಕಾಂಗ್ರೆಸ್. ಕಾಶ್ಮೀರದಲ್ಲಿ ಹಿಂದುಗಳ ಕೊಲೆ ಆದಾಗ ಕಂಬಳಿ ಹೊದ್ದು ಮಲಗಿದ್ದು ಕಾಂಗ್ರೆಸ್‌ನವರು. ನೆಹರು ಅವರು ಪ್ರಧಾನಿ ಆಗಬೇಕು ಎನ್ನುವ ಕಾರಣಕ್ಕೆ ಭಾರತ ಒಡೆದವರೂ ಕಾಂಗ್ರೆಸ್‌ನವರು. ಕಾಶ್ಮೀರದ ಲಾಲ್‌ಚೌಕ್‌ನಲ್ಲಿ ಧ್ವಜ ಹಾರಿಸಲು ಯೋಗ್ಯತೆ ಇಲ್ಲದ ಅವರು ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ’ ಎಂದೂ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.