ADVERTISEMENT

ಲೋಕಸಭೆ ಚುನಾವಣೆ: ಕನಕಪುರ ವ್ಯಾಪ್ತಿ ಬಿಟ್ಟು ಇತರೆಡೆ ಸ್ಪರ್ಧಿಸಲು ಸಿದ್ಧ– ಸಿಂಧ್ಯ

75ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಿ.ಜಿ.ಆರ್. ಸಿಂಧ್ಯ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2023, 13:12 IST
Last Updated 19 ಸೆಪ್ಟೆಂಬರ್ 2023, 13:12 IST
ಕನಕಪುರ ಕಲ್ಲಹಳ್ಳಿ ಶ್ರೀನಿವಾಸ ದೇವಾಲಯದಲ್ಲಿ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ ಪಿಜಿಆರ್‌ ಸಿಂಧ್ಯ ಅವರನ್ನು ದೇವಾಲಯದ ಅರ್ಚಕರು ಸನ್ಮಾನಿಸಿದರು.
ಕನಕಪುರ ಕಲ್ಲಹಳ್ಳಿ ಶ್ರೀನಿವಾಸ ದೇವಾಲಯದಲ್ಲಿ ಜನ್ಮದಿನದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ ಪಿಜಿಆರ್‌ ಸಿಂಧ್ಯ ಅವರನ್ನು ದೇವಾಲಯದ ಅರ್ಚಕರು ಸನ್ಮಾನಿಸಿದರು.   

ಕನಕಪುರ: ಸಕ್ರಿಯ ರಾಜಕಾರಣದಿಂದ ದೂರವಿದ್ದರೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕನಕಪುರ ವ್ಯಾಪ್ತಿ ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರ ಕೊಟ್ಟರೂ ಸ್ಪರ್ಧಿಸುವುದಾಗಿ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಜಿ.ಆರ್‌. ಸಿಂಧ್ಯ ತಿಳಿಸಿದರು.

ತಾಲ್ಲೂಕಿನ ಕಲ್ಲಹಳ್ಳಿ ಶ್ರೀನಿವಾಸ ದೇವಾಲಯದಲ್ಲಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ ನೇತೃತ್ವದಲ್ಲಿ ಏರ್ಪಡಿಸಿದ್ದ ತಮ್ಮ 75ನೇ ವರ್ಷದ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕನಕಪುರ ತಾಲ್ಲೂಕಿನ ಜನತೆ ತಮಗೆ ರಾಜಕೀಯ ಜನ್ಮ ಮತ್ತು ಜೀವನ ನೀಡಿದ್ದು ರಾಜಕೀಯವಾಗಿ ಎಲ್ಲಾ ಅವಕಾಶಗಳನ್ನು ಕೊಟ್ಟಿದ್ದಾರೆ. ಐವರು ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ನಾಲ್ಕು ದಶಕಗಳ ಕಾಲ ರಾಜಕಾರಣದಲ್ಲಿ ಸಕ್ರಿಯವಾಗಿದ್ದೇನೆ ಎಂದರೆ ಅದು ತಾಲ್ಲೂಕಿನ ಜನತೆ ಆಶೀರ್ವಾದ ಎಂದರು.

ಕಾಂಗ್ರೆಸ್‌ ಪಕ್ಷ 136 ಸ್ಥಾನದಲ್ಲಿ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಆದರೆ ತಾವು ಕಾಂಗ್ರೆಸ್‌ ಪಕ್ಷ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಸೇರ್ಪಡೆಗೊಂಡಿದ್ದು, ಸಕ್ರಿಯ ಚುನಾವಣಾ ರಾಜಕಾರಣದಿಂದ ದೂರವಿದ್ದು ಅವಕಾಶ ಸಿಕ್ಕರೆ ಖಂಡಿತವಾಗಿಯು ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದರು.

ರಾಜಕೀಯದಲ್ಲಿ ಯಾವುದು ಶಾಶ್ವತವಲ್ಲ. ಅನಿವಾರ್ಯದಲ್ಲಿ ಬೇರೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ. ಅದರ ಬಗ್ಗೆ ತಾವು ಏನೂ ಮಾತನಾಡುವುದಿಲ್ಲವೆಂದು ಜೆಡಿಎಸ್‌– ಬಿಜೆಪಿ ಹೊಂದಾಣಿಕೆಯ ಬಗ್ಗೆ ಸೂಚ್ಯವಾಗಿ ಹೇಳಿದರು.

ರಾಜ್ಯದಲ್ಲಿ ಈ ಬಾರಿ ಮಳೆಯ ಕೊರತೆಯಿಂದ ಬರಗಾಲ ಸೃಷ್ಟಿಯಾಗಿದೆ. ಕೆಆರ್‌ಎಸ್‌ನಲ್ಲಿ ನೀರಿನ ಕೊರತೆಯಿದೆ. ಆದರೂ ತಮಿಳುನಾಡಿನವರು ನೀರು ಕೇಳುವುದು ಸರಿಯಲ್ಲ. ಇತ್ತ ಮೇಕೆದಾಟು ಜಲಾಶಯ ನಿರ್ಮಾಣಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಜಲಾಶಯ ನಿರ್ಮಾಣವಾದರೆ ಕರ್ನಾಟಕದ ಜೊತೆಗೆ ತಮಿಳುನಾಡಿಗೂ ಅನುಕೂಲವಾಗಲಿದೆ. ವಿದ್ಯುತ್‌ ಸೇರಿದಂತೆ ನೀರಿನ ಅಭಾವ ನಿವಾರಣೆಯಾಗಿಲಿದೆ. ಈ ಬಾರಿ ಕಾಂಗ್ರೆಸ್‌ ಸರ್ಕಾರ ಕಾವೇರಿ ಸಮಸ್ಯೆಗಳನ್ನು ನಿವಾರಣೆ ಮಾಡಿ ಜಲಾಶಯ ನಿರ್ಮಾಣ ಮಾಡಲಿದೆ. ಇದಕ್ಕೆ ಕೇಂದ್ರ ಸರ್ಕಾರವೂ ಸಹಕಾರ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಜನತೆ ಕೊಟ್ಟ ಭರವಸೆಯ 5 ಗ್ಯಾರಂಟಿಗಳನ್ನು ಈಡೇರಿಸಿದ್ದಾರೆ. ಶಿವಕುಮಾರ್‌ ಅವರು ಕಾದು ಉಪ ಮುಖ್ಯಮಂತ್ರಿಗಳಾಗಿದ್ದಾರೆ. ಮುಖ್ಯಮಂತ್ರಿ ಆಗಲು ಕಾಯಬೇಕು, ಕಾದು ಅವರು ಮುಂದೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದರು.

ಶಿವಕುಮಾರ್‌ ಅವರು ಮುಖ್ಯಮಂತ್ರಿಗಳಾದರೆ ಕನಕಪುರ ಕ್ಷೇತ್ರಕ್ಕೂ ಹೆಚ್ಚಿನ ಅನುಕೂಲ ಆಗಲಿದೆ. ಈಗ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.  ಮೆಡಿಕಲ್‌ ಕಾಲೇಜು, ಇಂಜಿನಿಯರ್‌ ಕಾಲೇಜು ನಿರ್ಮಾಣವಾಗಲಿವೆ  ಹೇಳಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎನ್‌.ನಾಗರಾಜು, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಪುರುಷೋತ್ತಮ್‌, ನಗರಸಭೆ ಸದಸ್ಯ ಸ್ಟುಡಿಯೋ ಚಂದ್ರು, ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ, ನಿರ್ದೇಶಕ ಜೆ.ನಟರಾಜು, ಮುಖಂಡರಾದ ಅಂಬಯ್ಯ, ನಾಗರಾಜು, ಶಂಕರ್‌, ನಾಗೇಶ್‌, ನಟೇಶ್‌, ಬಸವರಾಜು, ರವಿ, ವಿಜಿ, ಮರಿಯಣ್ಣ, ವಿಶಾಲ, ಜೈಶಂಕರ್‌, ಕಾಳೇಗೌಡ ಮೊದಲಾದವರು ಉಪಸ್ಥಿತರಿದ್ದರು. 

ಕನಕಪುರ ಕಲ್ಲಹಳ್ಳಿ ಶ್ರೀನಿವಾಸನ ದೇವಾಲಯದಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಪಿಜಿಆರ್‌ ಸಿಂಧ್ಯ ಮಾತನಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.