ರಾಮನಗರ: ‘ಆತ್ಮೀಯ ಸ್ನೇಹಿತ ಹಾಗೂ ನನ್ನ ತಾಲ್ಲೂಕಿನವರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮುಖ್ಯಮಂತ್ರಿಯಾಗಲು ಒಮ್ಮೆ ಅವಕಾಶ ಸಿಗಬೇಕು ಎಂಬುದು ನನ್ನ ಹಾಗೂ ಇಡೀ ಜಿಲ್ಲೆಯ ಜನರ ಆಸೆಯಾಗಿದೆ’ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ.ಜಿ.ಆರ್. ಸಿಂಧ್ಯ ಹೇಳಿದರು.
ಕಾರ್ಯಕ್ರಮವೊಂದರ ನಿಮಿತ್ತ ನಗರಕ್ಕೆ ಗುರುವಾರ ಭೇಟಿ ನೀಡಿದ್ದ ಅವರು ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಪೂರೈಸಿರುವ ಸಿದ್ದರಾಮಯ್ಯ ಅಧಿಕಾರ ಹಸ್ತಾಂತರಿಸಬೇಕೇ ಅಥವಾ ಮುಂದುವರಿಯಬೇಕೇ ಎಂಬುದನ್ನು ಪಕ್ಷದ ನಾಯಕರು ನಿರ್ಧರಿಸಬೇಕು’ ಎಂದರು.
‘ಬೆಂಕಿ ಇಲ್ಲದೆ ಹೊಗೆ ಬರಲು ಸಾಧ್ಯವಿಲ್ಲ. ಹೊಗೆ ಬಂದಿದೆ. ಮುಂದೆನಾಗುತ್ತದೊ ನೋಡೋಣ. ಆದರೆ, ಮುಖ್ಯಮಂತ್ರಿ ಯಾರಾಗಬೇಕು ಎಂಬುದು ಪಕ್ಷದ ಆಂತರಿಕ ವಿಚಾರ. ಅದು ಪಕ್ಷದ ವೇದಿಕೆಯಲ್ಲಿ ಬಗೆಹರಿಯಬೇಕೇ ವಿನಾ ಬೇರೆ ವೇದಿಕೆಗಳ ದುರುಪಯೋಗ ಆಗಬಾರದು. ಇವೆಲ್ಲದರ ನಡುವೆ ಸಿ.ಎಂ ಮತ್ತು ಡಿಸಿಎಂ ಒಟ್ಟಿಗೆ ಉಪಾಹಾರ ಸೇವಿಸಿ, ನಾವಿಬ್ಬರೂ ಒಗ್ಗಟ್ಟಿನಿಂದ ಹೋಗಬೇಕು ಎಂಬ ನಿರ್ಧಾರಕ್ಕೆ ಬಂದಿರುವುದು ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ’ ಎಂದರು.
ಹಗ್ಗಜಗ್ಗಾಟ ಸಾಮಾನ್ಯ:
‘ರಾಜಕಾರಣವೆಂದರೆ ಹಗ್ಗಜಗ್ಗಾಟ ಸಾಮಾನ್ಯ. ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ ಸೇರಿದಂತೆ ಎಲ್ಲರ ಕಾಲದಲ್ಲೂ ಅಧಿಕಾರದ ಹಗ್ಗಜಗ್ಗಾಟವಿತ್ತು. ಸದ್ಯ ಮುಖ್ಯಮಂತ್ರಿ ವಿಷಯ ಕುರಿತು ಪಕ್ಷದೊಳಗೆ ಗೊಂದಲವಿರುವುದು ನಿಜ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
‘ಪಕ್ಷದ ವರಿಷ್ಠ ವೇಣುಗೋಪಾಲ್ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗೊಂದಲ ಬಗೆಹರಿಸಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಸ್ವಲ್ಪಮಟ್ಟಿಗೆ ಯಶಸ್ಸಾಗಿದ್ದಾರೆ. ರಾಜ್ಯದ ಜನ ನಮಗೆ ಬಹುಮತ ಕೊಟ್ಟಿದ್ದಾರೆ. ಅದನ್ನು ಉಳಿಸಿಕೊಂಡು ಗೊಂದಲಕ್ಕೆ ಅವಕಾಶವಿಲ್ಲದಂತೆ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುವುದು ಆದ್ಯತೆಯಾಗಬೇಕು’ ಎಂದರು.
‘ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸೇರಿದಂತೆ ಪಕ್ಷಕ್ಕಾಗಿ ದುಡಿದಿರುವ ಕೆಲ ನಾಯಕರು ಮುಖ್ಯಮಂತ್ರಿ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಯಾರನ್ನು, ಯಾವ ಸಂದರ್ಭದಲ್ಲಿ ಮುಖ್ಯಮಂತ್ರಿ ಮಾಡಬೇಕು ಎಂಬ ವಿಷಯ ಪಕ್ಷದ ನಾಯಕರಿಗೆ ಬಿಟ್ಟಿದ್ದು. ಈ ವಿಷಯದಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ’ ಎಂದು ಹೇಳಿದರು.
ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೇಕೆದಾಟು ಅಣೆಕಟ್ಟೆ ವಿಷಯದಲ್ಲಿ ತಮಿಳುನಾಡು ವಿರುದ್ದ ಕೋರ್ಟ್‌ನಲ್ಲಿ ಹೋರಾಡಿ ಗೆದ್ದಿದ್ದಾರೆ. ಈ ಕಾರಣಕ್ಕೆ ಅವರಿಗೆ ನಾವೆಲ್ಲರೂ ಅಭಿನಂದನೆ ಸಲ್ಲಿಸಬೇಕು.– ಪಿ.ಜಿ.ಆರ್. ಸಿಂಧ್ಯ, ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.