ADVERTISEMENT

ದೂರವಾಣಿ ಕರೆಗಳ ಕದ್ದಾಲಿಕೆ: ಎಚ್‌ಡಿಕೆ ಆಪ್ತರ ವಿಚಾರಣೆ ಸಂಭವ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 20:16 IST
Last Updated 30 ಸೆಪ್ಟೆಂಬರ್ 2019, 20:16 IST
   

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ದೂರವಾಣಿ ಕರೆಗಳ ಕದ್ದಾಲಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂ‌ತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಆಪ್ತರಾಗಿರುವ ಸತೀಶ್‌ ಹಾಗೂ ರಘು ಅವರನ್ನು ಸಿಬಿಐ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಈ ವಿವಾದದ ಕೇಂದ್ರ ಬಿಂದುವಾದ ಕೆಎಸ್‌ಆರ್‌ಪಿಯ ಎಡಿಜಿಪಿ ಅಲೋಕ್‌ ಕುಮಾರ್‌ ಅವರ ವಿಚಾರಣೆ ಬಳಿಕ ಸತೀಶ್‌ ಹಾಗೂ ರಘು ಅವರನ್ನು ವಿಚಾರಣೆಗೆ ಕರೆಸುವ ಕುರಿತು ಸಿಬಿಐ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. ಆದರೆ, ಇದನ್ನು ಸಿಬಿಐ ಮೂಲಗಳು ಖಚಿತಪಡಿಸಲೂ ಇಲ್ಲ, ನಿರಾಕರಿಸಲೂ ಇಲ್ಲ.

ಕದ್ದಾಲಿಕೆ ಮಾಡಿರುವ ಕೆಲವು ದೂರವಾಣಿ ಸಂಖ್ಯೆಗಳನ್ನು ಈ ಇಬ್ಬರೂ ವಾಟ್ಸ್ಆ್ಯಪ್‌ಗಳಲ್ಲಿ ಅಲೋಕ್‌ಕುಮಾರ್‌ಗೆ ಕಳುಹಿಸಿದ್ದು, ಅವುಗಳನ್ನು ಹೊರತೆಗೆಯಲು ತನಿಖಾಧಿಕಾರಿಗಳು ‍ಪ್ರಯತ್ನಿಸುತ್ತಿದ್ದಾರೆ. ಅಲೋಕ್‌ ಕುಮಾರ್‌ ಮನೆಯ ಮೇಲೆ ಕಳೆದ ವಾರ ದಾಳಿ ನಡೆಸಿದ್ದ ಸಿಬಿಐ ಅಧಿಕಾರಿಗಳು ದೂರವಾಣಿ ಸಂಭಾಷಣೆಯನ್ನು ಡೌನ್‌ಲೋಡ್‌ ಮಾಡಿದ್ದ ಪೆನ್‌ಡ್ರೈವ್‌ಗಾಗಿ ಹುಡುಕಾಡಿದ್ದರು. ಈ ಸಮಯದಲ್ಲಿ ಕೆಲವು ಮಹತ್ವದ ಸುಳಿವು ಸಿಕ್ಕಿವೆ ಎನ್ನಲಾಗಿದೆ.

ADVERTISEMENT

ಕುಮಾರಸ್ವಾಮಿ ಅವರ ನೇತೃತ್ವದ ಜೆಡಿಎಸ್‌– ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರು, ಅನೇಕ ಅಧಿಕಾರಿಗಳು ಹಾಗೂ ಮಠಾಧೀಶರ ಫೋನ್‌ ಕರೆಗಳನ್ನು ಕದ್ದಾಲಿಸಲಾಗಿತ್ತು ಎಂಬ ಆರೋಪ ಕುರಿತು ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಈಗಾಗಲೇ ಸಿಸಿಬಿ ತಾಂತ್ರಿಕ ವಿಭಾಗದ ಪೊಲೀಸ್‌ ಇನ್‌ಸ್ಪೆಕ್ಟರ್‌ಗಳು ಮತ್ತು ಸಿಬ್ಬಂದಿ, ಎಸಿಪಿಗಳೂ ಸೇರಿದಂತೆ ಬಹಳಷ್ಟು ಅಧಿಕಾರಿಗಳನ್ನು ವಿಚಾರಣೆ ನಡೆಸಲಾಗಿದೆ.

ಸೋಮವಾರ ಸಿಬಿಐ ಅಧಿಕಾರಿಗಳು ಸಿಸಿಬಿಯ ಎಸಿಪಿ ರಾಮಚಂದ್ರಯ್ಯ ಅವರನ್ನು ವಿಚಾರಣೆ ನಡೆಸಿತು.

ಹೆದರಿ ಓಡಿಹೋಗುವುದಿಲ್ಲ: ‘ನಾನು ನನ್ನ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ನನ್ನ ಪಾತ್ರವಾಗಲೀ ಅಥವಾ ರಘು ಮತ್ತು ಸತೀಶ್‌ ಅವರ ಪಾತ್ರವಾಗಲೀ ಇಲ್ಲ’ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

‘ಈ ಬಗ್ಗೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ‍ಪ್ರಚಾರದಿಂದ ಹೆದರಿ ಓಡಿಹೋಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.