ADVERTISEMENT

ಕಳ್ಳರು, ಸುಳ್ಳರಿಂದ ಫೋನ್‌ ಕದ್ದಾಲಿಕೆ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 12:06 IST
Last Updated 18 ಆಗಸ್ಟ್ 2019, 12:06 IST
   

ಬಳ್ಳಾರಿ: ‘ರಾಜ್ಯದಲ್ಲಿ ನಡೆದ ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಸಿ.ಬಿ.ಐ. ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ. ಹಿಂದಿನ ಸರ್ಕಾರದಲ್ಲಿದ್ದ ಕಳ್ಳರು, ಸುಳ್ಳರು ಸೇರಿಕೊಂಡು ಫೋನ್‌ ಕದ್ದಾಲಿಸಿದ್ದಾರೆ’ ಎಂದು ಶಾಸಕ ಬಿ. ಶ್ರೀರಾಮುಲು ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆಫೋನ್ ಕದ್ದಾಲಿಸಿದ್ದ ಪ್ರಕರಣದಲ್ಲಿ ರಾಮಕೃಷ್ಣ ಹೆಗಡೆಯವರ ಸರ್ಕಾರ ಬಿದ್ದಿತ್ತು. ಸರ್ಕಾರ ಉಳಿಸಿಕೊಳ್ಳಲು ಎಚ್.ಡಿ.ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದಾರೆ.ಪ್ರಕರಣವನ್ನು ಸಿ.ಬಿ.ಐ.ಗೆ ವಹಿಸಿದ ಬಳಿಕ ಉಲ್ಟಾ ಹೊಡೆಯುತ್ತಿದ್ದಾರೆ’ ಎಂದರು.

‘ರಾಷ್ಟ್ರಮಟ್ಟದ ನಾಯಕರ ಕರೆಗಳನ್ನು ಸಹ ಕದ್ದಾಲಿಸಲಾಗಿದೆ. ಇದರಲ್ಲಿ ಕೆಲ ಅಧಿಕಾರಿಗಳ ಕೈವಾಡವೂ ಇದೆ. ಹೀಗಾಗಿಯೇ ಪ್ರಕರಣವನ್ನು ಸಿ.ಬಿ.ಐ. ತನಿಖೆಗೆ ವಹಿಸಲಾಗಿದೆಯೇ ಹೊರತು ರಾಜಕೀಯ ಉದ್ದೇಶವಿಲ್ಲ’ ಎಂದು ಮುಖ್ಯಮಂತ್ರಿಗಳ ನಿರ್ಧಾರವನ್ನು ಸಮರ್ಥಿಸಿಕೊಂಡರು.

ADVERTISEMENT

‘ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು, ಅವರಿಗೆ ರಾಜಕೀಯ ಮರುಜನ್ಮ ನೀಡಿದ, ನೆರೆಯಿಂದ ಪ್ರಭಾವಿತಗೊಂಡಿರುವ ಬಾದಾಮಿ ಕ್ಷೇತ್ರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ಕಣ್ಣು ನೋವುಎಂದು ದೆಹಲಿಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದಾರೆ. ಹೀಗಾಗಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.