ADVERTISEMENT

ವಿದ್ಯುತ್ ಚಾಲಿತ ಸ್ಕೂಟರ್‌ಗಳ ನೋಂದಣಿ ಬಗ್ಗೆ ಅರ್ಜಿ: ಕೇಂದ್ರ, ರಾಜ್ಯಕ್ಕೆ ನೋಟಿಸ್

ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ನೋಂದಣಿ ಕಡ್ಡಾಯ ಕೋರಿ ಪಿಐಎಲ್

​ಪ್ರಜಾವಾಣಿ ವಾರ್ತೆ
Published 12 ಜುಲೈ 2020, 3:24 IST
Last Updated 12 ಜುಲೈ 2020, 3:24 IST

ಬೆಂಗಳೂರು: ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ನೋಂದಾಯಿಸದೆ ಉಪಯೋಗಿಸುತ್ತಿರುವುದನ್ನು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ನಗರದ ವಕೀಲ ಕೆ.ಆರ್.ಪ್ರಸಾದ್ ರಾವ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆಟೊಮೋಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಸೇರಿದಂತೆ ಒಂಬತ್ತು ಜನ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿದೆ.

ADVERTISEMENT

'ವಿದ್ಯುತ್ ಅಥವಾ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳು ಪ್ರತಿ ಗಂಟೆಗೆ 25 ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸುವುದಿಲ್ಲ
ಎಂದು ಆಟೊಮೋಟಿವ್ ರೀಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಮಾಣಪತ್ರ ನೀಡುತ್ತಿದೆ. ವಾಸ್ತವದಲ್ಲಿ ಈ ದ್ವಿಚಕ್ರ ವಾಹನಗಳು ಗಂಟೆಗೆ 45ಕ್ಕೂ ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತವೆ. ಹಾಗಾಗಿ ನೋಂದಣಿ ಮಾಡದೇ ಇರುವುದು ಕಾನೂನು ಬಾಹಿರ' ಎಂಬುದು ಅರ್ಜಿದಾರರ ಅಕ್ಷೇಪ.

'ವಿದ್ಯುತ್ ಅಥವಾ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನ ಬಳಕೆದಾರರು ಮೋಟಾರು ವಾಹನ ಕಾಯ್ದೆ-1989ರ ನಿಯಮ 2 (ಯು)ರ
ಅಡಿಯಲ್ಲಿ ಬರುವ ಮಾನದಂಡಗಳನ್ನು ಪಾಲಿಸಬೇಕು. ಈ ವಾಹನಗಳ ಬಳಕೆದಾರರು ನೋಂದಣಿ ಶುಲ್ಕ ಪಾವತಿಯಿಂದ ತಪ್ಪಿಸಿಕೊಳ್ಳಬಾರದು. ಇದರಿಂದ ಬೊಕ್ಕಸಕ್ಕೆ ನಷ್ಟ ಉಂಟಾಗುವುದನ್ನು ತಪ್ಪಿಸಬೇಕು. ಆದ್ದರಿಂದ, ಈ ವಾಹನಗಳ ಬಳಕೆದಾರರು ಕಡ್ಡಾಯ ನೋಂದಣಿ ಮಾಡಿಸಿಕೊಳ್ಳಲು ನಿರ್ದೇಶಿಸಬೇಕು' ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.