ADVERTISEMENT

ಮಂಡ್ಯದಲ್ಲಿ 1.8 ಕಿ.ಮೀ ರೋಡ್‌ ಶೋ: ಮೋದಿ ಮೇಲೆ ಅಭಿಮಾನದ ಹೂಮಳೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2023, 0:08 IST
Last Updated 13 ಮಾರ್ಚ್ 2023, 0:08 IST
ಬೆಂಗಳೂರು– ಮೈಸೂರು ದಶಪಥ ಉದ್ಘಾಟನೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಂಡ್ಯದಲ್ಲಿ ರೋಡ್‌ ಶೋ ನಡೆಸಿದಾಗ ಅವರ ಕಾರನ್ನು ಆವರಿಸಿದ್ದ ಹೂವಿನ ರಾಶಿ
ಬೆಂಗಳೂರು– ಮೈಸೂರು ದಶಪಥ ಉದ್ಘಾಟನೆ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಮಂಡ್ಯದಲ್ಲಿ ರೋಡ್‌ ಶೋ ನಡೆಸಿದಾಗ ಅವರ ಕಾರನ್ನು ಆವರಿಸಿದ್ದ ಹೂವಿನ ರಾಶಿ   

ಮಂಡ್ಯ: ನಗರದಲ್ಲಿ ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 1.8 ಕಿ.ಮೀ ರೋಡ್‌ ಶೋ ನಡೆಸಿ ಅಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿದರು. ತಮ್ಮ ಮೇಲೆ ಬಿದ್ದ ಅಭಿಮಾನದ ಹೂವಿನ ರಾಶಿಯನ್ನು ಮತ್ತೆ ಜನರೆಡೆಗೇ ಎರಚಿ ಸಂಭ್ರಮ ದುಪ್ಪಟ್ಟುಗೊಳಿಸಿದರು.

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಈ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ರೋಡ್‌ ಶೋ ಒಂದು ಬದಿಯಷ್ಟೇ ನಡೆದರೂ, ಎರಡೂ ಬದಿಯಲ್ಲಿ ಜನ ಬೆಳಿಗ್ಗೆಯಿಂದಲೇ ಕಾತರದಿಂದ ಬಿಸಿಲಿನಲ್ಲೇ ಕಾಯುತ್ತಿದ್ದರು.

ಶ್ವೇತವರ್ಣದ ಜುಬ್ಬಾ ಧರಿಸಿದ್ದ ಪ್ರಧಾನಿ ಹಸನ್ಮುಖರಾಗಿ ಜನರತ್ತ ಕೈಬೀಸುತ್ತಾ ಮುಂದೆ ಸಾಗಿದರು. ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ‘ಭಾರತ್‌ ಮಾತಾ ಕೀ ಜೈ’, ‘ಜೈ ಶ್ರೀ ರಾಮ್‌’ ಎಂದು ಘೋಷಣೆಗಳನ್ನು ಮೊಳಗಿಸಿದರು.

ADVERTISEMENT

ಬೆಳಿಗ್ಗೆ 11.40ಕ್ಕೆ ರೋಡ್‌ಶೋ ಆರಂಭಿಸಿದ ಅವರು 20 ನಿಮಿಷಗಳ ಕಾಲ ಜನರೊಂದಿಗಿದ್ದರು. ನಂದಾ ಟಾಕೀಸ್‌ ಬಳಿ ರೋಡ್‌ ಶೋ ಮುಗಿಯಿತು.

ದಶಪಥ ಉದ್ಘಾಟನೆಗೆ ಕೆಂಪುಹಾಸು: ಮಧ್ಯಾಹ್ನ 12 ಗಂಟೆಗೆ ನಗರದಿಂದ ಹೊರಟ ಪ್ರಧಾನಿ ಅಮರಾವತಿ ಹೋಟೆಲ್‌ ಬಳಿ ಬೆಂಗಳೂರು– ಮೈಸೂರು ದಶಪಥ ಹೆದ್ದಾರಿ ಪ್ರವೇಶಿಸಿದರು. ತಾಲ್ಲೂಕಿನ ಹನಕೆರೆ ಬಳಿ ಕಾರಿಳಿದು ಅವರು ನಡಿಗೆ ಮೂಲಕ ಹೆದ್ದಾರಿ ಉದ್ಘಾಟಿಸಲೆಂದೇ ಕೆಂಪು ಹಾಸು ಹಾಸಿದ್ದು ವಿಶೇಷವಾಗಿತ್ತು. 50 ಮೀಟರ್‌ಗಳವರೆಗೆ ಹೆಜ್ಜೆಹಾಕಿ ಅವರು ವಿಧ್ಯುಕ್ತವಾಗಿ ಬೆಂಗಳೂರು– ಮೈಸೂರು ದಶಪಥ ಹೆದ್ದಾರಿಗೆ ಚಾಲನೆ ನೀಡಿದರು.

ರಸ್ತೆಯ ಒಂದು ಬದಿಯಲ್ಲಿ ಪ್ರಧಾನಿ ನಡೆದರೆ ಇನ್ನೊಂದು ಬದಿಯಲ್ಲಿ ಜಾನಪದ ಕಲಾ ತಂಡಗಳು ಪ್ರದರ್ಶನ ನೀಡಿದ್ದು ಗಮನ ಸೆಳೆಯಿತು.

ಬಳಿಕ ಮದ್ದೂರು ತಾಲ್ಲೂಕು ಗೆಜ್ಜಲಗೆರೆ ಕಾಲೊನಿ ಬಳಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡರು.

ಪರದಾಡಿದ ವಿದ್ಯಾರ್ಥಿಗಳು: ಪ್ರಧಾನಿ ರೋಡ್‌ ಶೋ ಅಂಗವಾಗಿ ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ರಸ್ತೆಯುದ್ದಕ್ಕೂ ಎರಡೂ ಬದಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರಿಂದ, ಹಳೇ ಮುನಿಸಿಪಲ್‌ ಶಾಲೆಯಲ್ಲಿ ನಿಗದಿಯಾಗಿದ್ದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗೆಂದು ಬಂದ ವಿದ್ಯಾರ್ಥಿಗಳು, ಪೋಷಕರು ಹೆದ್ದಾರಿಯಲ್ಲೇ ಸಿಲುಕಿದ್ದರು.

ಬ್ಯಾರಿಕೇಡ್‌ ತೆರೆಯುವಂತೆ ಪೋಷಕರು ಒತ್ತಾಯಿಸಿದರು. ನಂತರ ಜಿಲ್ಲಾ ಕ್ರೀಡಾಂಗಣದ ಬಳಿಯ ಬದಲಿ ಮಾರ್ಗದ ಮೂಲಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ತಲುಪಿದರು.

ಗಾಜಿನ ಪೆಟ್ಟಿಗೆಯೊಳಗಿನ ಪೇಢಾ!
ಧಾರವಾಡ: ‘ಧಾರವಾಡದ ಪೇಢಾ ಒಮ್ಮೆ ಸವಿದರೆ ಮತ್ತೊಮ್ಮೆ ತಿನ್ನಬೇಕೆನಿಸುತ್ತದೆ. ಸಿಹಿ ತಿನ್ನುವ ಆಸೆಗೆ ಮಿತಿ ಹೇರಲು, ನನ್ನ ಆರೋಗ್ಯದ ಕಾಳಜಿ ಮಾಡಲೆಂದೇ ಮಿತ್ರ ಪ್ರಲ್ಹಾದ ಜೋಶಿ, ಗಾಜಿನ ಪೆಟ್ಟಿಗೆಯಲ್ಲಿ ಇಟ್ಟು ಕೊಟ್ಟಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಪೇಢಾ ಸ್ವೀಕರಿಸಿ, ನಗೆ ಚಟಾಕಿ ಹಾರಿಸಿದರು.

ಧಾರವಾಡದ ಕರಕುಶಲ ವಸ್ತುಗಳ ಉಡುಗೊರೆಯನ್ನೇ ಪ್ರಧಾನಿಗೆ ನೀಡಲಾಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಸಖಿ ಸಾಫಲ್ಯದ ಕಸೂತಿ ಶಾಲನ್ನು ಹೊದಿಸಿ, ಧಾರವಾಡದ ಪೇಢಾವನ್ನು ಗಾಜಿನ ಪೆಟ್ಟಿಗೆಯಲ್ಲಿಟ್ಟು ನೀಡಿ ಅಭಿನಂದಿಸಿದರು.

ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾವೇರಿಯ ಚಂದ್ರಾಪಟ್ಟಣದ ಹಾಜಿ ಉಸ್ಮಾನ್‌ಸಾಬ್ ಪಟವೇಗಾರ ಸಿದ್ಧಪಡಿಸಿದ ಏಲಕ್ಕಿ ಪೇಟ ತೊಡಿಸಿ, ಏಲಕ್ಕಿ ಹಾರ ಹಾಕಿದರು.

ಸಚಿವ ಗೋವಿಂದ ಕಾರಜೋಳ ಅವರು ಐಐಟಿಯ ಶಾಲನ್ನು ಹೊದಿಸಿದರು. ಸಚಿವರಾದ ಸೋಮಣ್ಣ ಹಾಗೂ ಸಿ.ಸಿ.ಪಾಟೀಲ ಅವರು ಹುಬ್ಬಳ್ಳಿ ವಿಜಯನಗರದ ವಿನಾಯಕ ದೇವದಾಸ ಅವರು ಸಿದ್ಧಪಡಿಸಿದ ಬೆಳ್ಳಿಯ ಸಿದ್ಧಾರೂಢ ಮೂರ್ತಿಯನ್ನು ನೀಡಿದರು.

ಜಿಲ್ಲೆಯ ಬಿಜೆಪಿ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಕಲಾವಿದರಾದ ಮಾರುತಿ ಬಡಿಗೇರ ಹಾಗೂ ಶ್ರೀಧರ ಸಾವುಕಾರ ಸಿದ್ಧಪಡಿಸಿದ ನೈಸರ್ಗಿಕ ಬಣ್ಣದ ಕಲಘಟಗಿ ತೊಟ್ಟಿಲಿನ ಪ್ರತಿಕೃತಿಯನ್ನು ನೀಡಿದರು.

ಹೆದ್ದಾರಿ ಪ್ರತಿಕೃತಿ, ಸಾವಯವ ಬೆಲ್ಲದ ಕೊಡುಗೆ: ಮಂಡ್ಯದಲ್ಲಿ ಪ್ರಧಾನಿಯನ್ನು ಸನ್ಮಾನಿಸುವ ಸಂದರ್ಭದಲ್ಲಿ ಸಂಸದೆ ಸುಮಲತಾ ಅವರು ಸಾವಯವ ಬೆಲ್ಲದ ಬುಟ್ಟಿಯನ್ನು ಕೊಡುಗೆಯಾಗಿ ನೀಡಿದರೆ, ಸಚಿವ ಗೋಪಾಲಯ್ಯ ಅವರು ಹೆದ್ದಾರಿಯ ಪ್ರತಿಕೃತಿ ನೀಡಿ ಗಮನ ಸೆಳೆದರು. ಸಂಸದ ಪ್ರತಾಪಸಿಂಹ ಮೈಸೂರು ಪೇಟ ತೊಡಿಸಿದರು.

ಮಂಡ್ಯ ಈಸ್‌ ಇಂಡಿಯಾ..
ಪ್ರಧಾನಿಗೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ’ಮಂಡ್ಯ ಈಸ್‌ ಇಂಡಿಯಾ‘ ಎಂದು ಬಣ್ಣಿಸಿದಾಗ, ಜನ ಹರ್ಷೋದ್ಗಾರ ಮಾಡಿದರು.

‘ರಾಷ್ಟ್ರೀಯ ಹೆದ್ದಾರಿ ಮೂಲಕ ಮಂಡ್ಯ ಇಡೀ ಭಾರತವನ್ನೇ ಸಂಪರ್ಕಿಸುತ್ತಿದೆ. ಇದೇ ವರ್ಷ ಮಂಡ್ಯದ ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಲು ₹ 100 ಕೋಟಿ ಅನುದಾನ ನೀಡಲಾಗಿದೆ’ ಎಂದರು.

‘2014ರಲ್ಲಿ ಪ್ರಧಾನಿ ಮೋದಿ ಹೆದ್ದಾರಿ ನಿರ್ಮಾಣಕ್ಕೆ ಚಾಲನೆ ನೀಡಿದರು. 2023ರಲ್ಲಿ ಅವರೇ ಉದ್ಘಾಟಿಸುತ್ತಿದ್ದಾರೆ. ಆದರೆ, ಇದನ್ನು ನಾವು ಮಾಡಿದ್ದು ಎಂದು ಕೆಲವರು ಹೇಳುತ್ತಿದ್ದಾರೆ. ಅವರ ಮಾತು, ಪಕ್ಕದ ಮನೆಯಲ್ಲಿ ಗಂಡು ಹಡೆದರೆ ಇವನು ಪೇಢಾ ಕೊಡ್ತಾನೆ ಎಂಬ ನಮ್ಮ ಕಡೆಯ ಗಾದೆ ಮಾತಿನಂತೆ ಆಗಿದೆ’ ಎಂದು ವ್ಯಂಗ್ಯವಾಡಿದರು. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ‌ ಸಚಿವ ನಿತಿನ್‌ ಗಡ್ಕರಿ, ’ಬೆಂಗಳೂರು–ಚೆನ್ನೈ–ಸೂರತ್‌ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಅರ್ಧದಷ್ಟು ನಡೆದಿದ್ದು, ಇದೇ ವರ್ಷ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.