ADVERTISEMENT

ಚಾಮುಂಡಿ ಬೆಟ್ಟಕ್ಕೆ ಆಗಮಿಸಿ ನಾಡದೇವತೆ ದರ್ಶನ ಪಡೆದ ಪ್ರಧಾನಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2022, 16:31 IST
Last Updated 20 ಜೂನ್ 2022, 16:31 IST
   

ಮೈಸೂರು: ಚಾಮುಂಡಿ ಬೆಟ್ಟಕ್ಕೆ ಸೋಮವಾರ ರಾತ್ರಿ 8.30ಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಾಡದೇವತೆ ಚಾಮುಂಡೇಶ್ವರಿಯ ದರ್ಶನ ಪಡೆದರು.

ಬೆಟ್ಟದ ರಸ್ತೆ ಹಾಗೂ ದೇವಾಲಯವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ಪ್ರಧಾನಿ ಅವರನ್ನು ದೇಗುಲದ ಮುಖ್ಯ ಅರ್ಚಕ ಎನ್‌.ಶಶಿಶೇಖರ ದೀಕ್ಷಿತ್‌ ಸ್ವಾಗತಿಸಿದರು. ನಂತರ ದೇವಾಲಯದ ಮುಖ್ಯ ದ್ವಾರದಲ್ಲಿರುವ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸಿದರು.

ರೇಷ್ಮೆಯ ಕೇಸರಿ ಶಾಲು, ಪಂಚೆ ಧರಿಸಿ ದೇವಾಲಯದ ಹೆಬ್ಬಾಗಿಲಿನಲ್ಲಿರುವ ಚಾಮುಂಡಿ ದೇವಿಯ ಪಾದಗಳಿಗೆ ನಮಿಸಿ ದೇಗುಲದ ನವರಂಗವನ್ನು ಪ್ರವೇಶಿಸಿದರು. ಗರ್ಭಗುಡಿಯ ಬಳಿ ಆಸೀನರಾಗಿ ಸಂಕಲ್ಪ ಪೂಜೆ ಸಲ್ಲಿಸಿದರು. ನಂತರ ಪ್ರಸಾದ ಸ್ವೀಕರಿಸಿದರು.

ADVERTISEMENT

ಶಶಿಶೇಖರ್‌ ದೀಕ್ಷಿತ್‌ ಪ್ರಧಾನಿ ಅವರಿಗೆ ಶ್ವೇತ ವಸ್ತ್ರವನ್ನು ಹೊದಿಸಿ ಫಲವನ್ನು ನೀಡಿದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಇದ್ದರು.

ರಾತ್ರಿ 9ಕ್ಕೆ ನಗರಕ್ಕೆ ವಾಪಸಾದ ಮೋದಿ ರ‍್ಯಾಡಿಸನ್‌ಬ್ಲ್ಯೂ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದರು. ಜೂನ್ 21ರಂದು ಅರಮನೆಯಲ್ಲಿ ನಡೆಯುವ ಅಂತರರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.