ADVERTISEMENT

ಚಿತ್ರದುರ್ಗ: ಭಾರಿ ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರ ವಶ

ಬಾಲಕ ಸೇರಿ ಐವರು ಬೇಟೆಗಾರರ ಬಂಧನ, ಇಬ್ಬರು ಪರಾರಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2020, 15:45 IST
Last Updated 12 ಅಕ್ಟೋಬರ್ 2020, 15:45 IST
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಬಂಧಿಸಿದ ಬೇಟೆಗಾರರು ಹಾಗೂ ಅವರಿಂದ ವಶಕ್ಕೆ ಪಡೆದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿ ಬಂಧಿಸಿದ ಬೇಟೆಗಾರರು ಹಾಗೂ ಅವರಿಂದ ವಶಕ್ಕೆ ಪಡೆದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು.   

ಚಿತ್ರದುರ್ಗ: ವನ್ಯಜೀವಿ ಬೇಟೆಗೆ ಹೊಂಚು ಹಾಕಿದ್ದ ತಂಡದ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದು, ₹ 20 ಲಕ್ಷಕ್ಕೂ ಹೆಚ್ಚು ಮೌಲ್ಯದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಶಿವಮೊಗ್ಗದ ಇಕ್ಷುಧನ್ವ (50), ಬೆಂಗಳೂರಿನ ಪ್ರತಾಪ್‌ (42), ವಿನೋದ್‌ (38), ವಾಸುದೇವ್‌ ಶೆಟ್ಟಿ (42) ಬಂಧಿತರು. ಮೂಲತಃ ಅಸ್ಸಾಂನ 17 ವರ್ಷದ ಬಾಲಕ ಬಂಧಿತರು. ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರು ವೃತ್ತಿಯಲ್ಲಿ ಉದ್ಯಮಿಗಳು ಹಾಗೂ ಎಸ್ಟೇಟ್ ಮಾಲೀಕರಾಗಿದ್ದಾರೆ.

ಒಂದು ಸ್ನೈಪರ್‌ ಸೇರಿ ನಾಲ್ಕು ಅತ್ಯಾಧುನಿಕ ಬಂದೂಕು, ಒಂದು ಪಿಸ್ತೂಲ್‌, ಹೈ ಫ್ಲಾಶ್‌ ಲೈಟ್ಸ್‌, 50 ಬಗೆಯ ಚಾಕು, ಬಿಲ್ಲು ಮತ್ತು ಬಾಣ, ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ADVERTISEMENT

ಹಿರಿಯೂರು ತಾಲ್ಲೂಕಿನ ಹುಳಿಯಾರು ಮಾರ್ಗದ ಸೋಮೆನಹಳ್ಳಿಯ ಫಾರ್ಮ್‌ಹೌಸ್‌ ಸಮೀಪ ಬೇಟೆಗೆ ಹೊಂಚು ಹಾಕಿದ ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಬಂಧಿತರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

‘ಚಿತ್ರದುರ್ಗ ವ್ಯಾಪ್ತಿಯಲ್ಲಿ ಸಿಗುವ ಜಿಂಕೆ ಹಾಗೂ ಕಾಡುಹಂದಿ ಬೇಟೆಗೆ ಬಂದಿರುವ ಸಾಧ್ಯತೆ ಇದೆ. ಬಂಧಿತರ ಬಳಿ ಸಿಕ್ಕರುವ ಶಸ್ತ್ರಾಸ್ತ್ರಗಳು ವನ್ಯಜೀವಿ ಬೇಟೆಗೆ ತಂದಿದ್ದವು ಎಂಬುದು ಗೊತ್ತಾಗಿದೆ. ಈ ತಂಡ ರಾಜ್ಯದ ಹಲವೆಡೆ ಬೇಟೆ ಆಡಿದೆ. ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ’ ಎಂದು ಉಪ ಅರಣ್ಯಾಧಿಕಾರಿ ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

ವನ್ಯಜೀವಿ ಪಾರಿಪಾಲಕ ಎಚ್‌.ಜಿ.ರಘುರಾಮ್, ಹಿರಿಯೂರು ವಲಯ ಅರಣ್ಯಾಧಿಕಾರಿ ಶ್ರೀಹರ್ಷ ಹಾಗೂ ಉಪ ವಲಯ ಅರಣ್ಯಾಧಿಕಾರಿ ಪ್ರದೀಪ್‌ ಕೇಸರಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೇಟೆಗಾರರನ್ನು ಬಂಧಿಸಿದ ತಂಡವನ್ನು ಬಳ್ಳಾರಿ ವಲಯದ ಸಿಸಿಎಫ್‌ ಲಿಂಗರಾಜು ಅಭಿನಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.