ಬೆಂಗಳೂರು: ‘ಬಾಲಕಿಯ ಶರ್ಟ್ ಒಳಗೆ ಯಾಕೆ ಕೈ ಹಾಕಿದ್ದಿರಿ ಎಂದು ಕೇಳಿದ್ದಕ್ಕೆ, ಅವಳ ಮೇಲೆ ರೇಪ್ ನಡೆದಿದೆಯೊ ಇಲ್ಲವೊ ಎಂಬುದನ್ನು ಚೆಕ್ ಮಾಡಲು ಹಾಕಿದ್ದೆ ಎಂದು ಯಡಿಯೂರಪ್ಪನವರೇ ಹೇಳಿದ್ದಾರೆ. ಅವರ ಈ ನಡೆಯಿಂದಲೇ ಲೈಂಗಿಕ ದೌರ್ಜನ್ಯ ಎಸಗಿರುವುದು ಸ್ಪಷ್ಟ...’
‘ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ದಾಖಲಾಗಿರುವ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ–2012) ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಬುಧವಾರ ವಿಚಾರಣೆ ನಡೆಸಿದರು.
ಈ ವೇಳೆ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಆದ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೆರೆದ ನ್ಯಾಯಾಲಯದಲ್ಲಿ ಓದಿದ ದೋಷಾರೋಪ ಪಟ್ಟಿಯಲ್ಲಿನ ಪ್ರಮುಖ ಅಂಶವಿದು.
‘ರೇಪ್ ನಡೆದಿದೆಯೊ ಇಲ್ಲವೊ ಎಂದು ಪರಿಶೀಲಿಸಲು ಬಾಲಕಿಯ ಶರ್ಟ್ ಒಳಕೆ ಕೈ ಹಾಕಿದ್ದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅವರ ಈ ಕೃತ್ಯ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯವಲ್ಲವೇ’ ಎಂದು ಪ್ರಶ್ನಿಸಿದ ರವಿವರ್ಮಕುಮಾರ್ ‘ಲೈಂಗಿಕ ದೌರ್ಜನ್ಯ ನಡೆದಿರುವುದು ಸುಸ್ಪಷ್ಟ, ಹಾಗಾಗಿ, ಪ್ರಕರಣ ರದ್ದುಪಡಿಸುವಂತೆ ಕೋರಿರುವ ಯಡಿಯೂರಪ್ಪನವರ ಅರ್ಜಿ ವಜಾಗೊಳಿಸಬೇಕು’ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಈ ವಾದವನ್ನು ಅಲ್ಲಗಳೆದ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಸಂತ್ರಸ್ತ ಬಾಲಕಿಯ ತಾಯಿ ಈ ಪ್ರಕರಣದಲ್ಲಿ ದೂರುದಾರರು (ಅವರು ಈಗ ಬದುಕಿಲ್ಲ). ಒಂದೂವರೆ ತಿಂಗಳ ನಂತರ ಪ್ರಕರಣ ದಾಖಲಿಸಲಾಗಿದೆ. ಯಡಿಯೂರಪ್ಪ ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂಬ ಬಾಲಕಿಯ ಹೇಳಿಕೆ ಇದೆ. ವಾಸ್ತವವನ್ನು ಗಮನಿಸಿದಾಗ, ಹಲವು ಜನರ ಸಮ್ಮುಖದಲ್ಲಿ ಇಂತಹ ಘಟನೆ ನಡೆಯಲು ಸಾಧ್ಯವಿತ್ತೇ’ ಎಂದು ಪ್ರಶ್ನಿಸಿದರಲ್ಲದೆ, ‘ಬಾಲಕಿಯ ಹೇಳಿಕೆ ಆಧರಿಸಿ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ’ ಎಂದರು.
ಇದಕ್ಕೆ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ಕೋರ್ಟ್ ಈ ಹಂತದಲ್ಲಿ ಬಾಲಕಿಯ 164ರ ಹೇಳಿಕೆಯನ್ನು ಪರಿಗಣಿಸಬೇಕಲ್ಲವೇ’ ಎಂದು ಪ್ರಶ್ನಿಸಿದರು. ಇದಕ್ಕೆ ನಾಗೇಶ್, ‘ಯಡಿಯೂರಪ್ಪನವರಿಗೆ 82 ವರ್ಷವಾಗಿದ್ದು, ಕೈ ನಡುಗುತ್ತವೆ. ಲೈಟ್ ಸ್ವಿಚ್ ಹಾಕಲೂ ನಮಗೆ ಹೇಳುತ್ತಾರೆ ಎಂದು ಅವರ ಮನೆಯ ಕೆಲಸದವರ ಹೇಳಿಕೆಯಿದೆ. ರೂಮಿಗೆ ಬಾಲಕಿ ಹೋಗಿರಲಿಲ್ಲ ಎಂಬ ಸಾಕ್ಷಿಯ ಹೇಳಿಕೆ ಇದೆ. ಅಂಗರಕ್ಷಕರು ಯಡಿಯೂರಪ್ಪನವರ ಆಜುಬಾಜಿನಲ್ಲೇ ಇರುತ್ತಾರೆ. ಅಲ್ಲಿದ್ದ ಎಲ್ಲ ಸಾಕ್ಷಿಗಳೂ ಇಂತಹ ಘಟನೆ ನಡೆದಿಲ್ಲ, ಯಡಿಯೂರಪ್ಪ ಹಾಲ್ ಬಿಟ್ಟು ಎಲ್ಲೂ ಹೋಗಿರಲಿಲ್ಲವೆಂದು ಹೇಳಿದ್ದಾರೆ. ಆದರೂ, ತನಿಖಾಧಿಕಾರಿ ಬಾಲಕಿಯ ಹೇಳಿಕೆ ಆಧರಿಸಿ ದೋಷಾರೋಪ ಪಟ್ಟಿ ದಾಖಲಿಸಿದ್ದಾರೆ. ಮಹಿಳೆ ದೂರು ನೀಡುವ ಮುನ್ನ ರಾಜಕಾರಣಿಯೊಬ್ಬರನ್ನು ಭೇಟಿ ಮಾಡಿ ಠಾಣೆಗೆ ಬಂದಿದ್ದರು. ಹೀಗಾಗಿ, ಇದರ ಹಿಂದೆ ಕಾಣದ ಹಿತಾಸಕ್ತಿ ಅಡಗಿದೆ’ ಎಂದು ಪುನುರಚ್ಚರಿಸಿದರು.
ಇದೇ ವೇಳೆ ರವಿವರ್ಮ ಕುಮಾರ್ ದೋಷಾರೋಪ ಪಟ್ಟಿಯ ಮತ್ತಷ್ಟು ಅಂಶಗಳನ್ನು ಓದಲು ಮುಂದಾದಾಗ ಅವರನ್ನು ಅಲ್ಲಿಗೇ ತಡೆದು ನಿಲ್ಲಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು, ‘ಈಗ ದಿನದ ಕಲಾಪ ಮುಕ್ತಾಯದ ಹಂತದಲ್ಲಿದ್ದು, ಬೇರೆ ಪ್ರಕರಣಗಳ ವಿಚಾರಣೆಗೆ ಅನುವು ಮಾಡಿಕೊಡೋಣ. ನಿಮ್ಮ ಪ್ರಕರಣವನ್ನು ನಾಳೆ ಮುಂದುವರಿಸೋಣ’ ಎಂದು ವಿಚಾರಣೆಯನ್ನು ಗುರುವಾರಕ್ಕೆ (ಡಿ.19) ಮುಂದೂಡಿದರು. ಪ್ರಾಸಿಕ್ಯೂಟರ್ ಅಶೋಕ್ ಎನ್.ನಾಯಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.