ADVERTISEMENT

POCSO Case: ಕಲಾವಿದೆ ಅರ್ಚನಾ ಪಾಟೀಲ ವಿರುದ್ಧ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

ಪಿಟಿಐ
Published 11 ಅಕ್ಟೋಬರ್ 2025, 15:26 IST
Last Updated 11 ಅಕ್ಟೋಬರ್ 2025, 15:26 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಪೋಕ್ಸೊ ಪ್ರಕರಣದಲ್ಲಿ ಬೆಂಗಳೂರಿನ ಕಲಾವಿದೆ ಅರ್ಚನಾ ಪಾಟೀಲ ವಿರುದ್ಧ ವಿಚಾರಣಾ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ. 

‘ಪೋಕ್ಸೊ ಕಾಯ್ದೆಗೆ ಬಾಲಕ–ಬಾಲಕಿ ಎಂಬ ಲಿಂಗಬೇಧವಿಲ್ಲ. ಹೂವಿನಂತೆ ಅರಳಬೇಕಾದ ವಯೋಮಾನದಲ್ಲಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳನ್ನು ತಡೆಯಲು ರೂಪಿಸಿರುವ ಕಠಿಣ ಶಾಸನವಾಗಿದೆ’ ಎಂದು ಪೋಕ್ಸೊ ಕಾಯ್ದೆಯನ್ನು ವಿಶದಪಡಿಸಿದ್ದ ಹೈಕೋರ್ಟ್‌, ದೇಶದಲ್ಲೇ ಮೊದಲು ಎನ್ನಬಹುದಾದ ಪ್ರಕರಣವೊಂದರಲ್ಲಿ ಮಹಿಳೆಯ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ರದ್ದುಪಡಿಸಲು ಆಗಸ್ಟ್‌ 18ರಂದು ನಿರಾಕರಿಸಿತ್ತು. 

ಪ್ರಕರಣದ ಆರೋಪಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌ ಹಾಗೂ ಸತೀಶ್ ಚಂದ್ರ ಶರ್ಮಾ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಲು ನಿರ್ದೇಶನ ನೀಡಿದೆ. 

ADVERTISEMENT

ಆರೋಪಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ ಲೂತ್ರಾ, ‘ಪೋಕ್ಸೊ ಕಾಯ್ದೆಯ ಸೆಕ್ಷನ್ 3(1)(ಎ) ರಿಂದ 3(1)(ಸಿ) ವರೆಗಿನ ಸೆಕ್ಷನ್‌ಗಳು ನಿರ್ದಿಷ್ಟ ಲಿಂಗದವರಿಗೆ ಅನ್ವಯವಾಗುತ್ತದೆ. ಈ ಪ್ರಕರಣಕ್ಕೆ ಅನ್ವಯ ಆಗುವುದಿಲ್ಲ‘ ಎಂದು ವಾದಿಸಿದರು. 

ಚಿತ್ರಕಲೆ ಹೇಳಿಕೊಡುವುದಾಗಿ ಮನೆಗೆ ಕರೆಸಿಕೊಂಡು 13 ವರ್ಷದ ಮಗನ ಮೇಲೆ ಅರ್ಚನಾ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ಬಾಲಕನ ತಾಯಿ ಎಚ್‌ಎಎಲ್‌ ಠಾಣೆಗೆ 2024ರ ಜೂನ್‌ 6ರಂದು ದೂರು ನೀಡಿದ್ದರು. ‘ನನ್ನ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಆರೋಪಿತ ಮಹಿಳೆಯು ಹೈಕೋರ್ಟ್‌ ಮೆಟ್ಟಿಲೇರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.