ADVERTISEMENT

ವರವರ ರಾವ್ ಬಂಧನವಿಲ್ಲ: ಹೈಕೋರ್ಟ್‌ಗೆ ರಾಜ್ಯ ಪ್ರಾಸಿಕ್ಯೂಷನ್‌ ಸ್ಪಷ್ಟನೆ

ಪಾವಗಡ ನಕ್ಸಲರ ದಾಳಿ ಪ್ರಕರಣ: ಅರ್ಜಿ ವಿಲೇವಾರಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 20:21 IST
Last Updated 25 ಮಾರ್ಚ್ 2022, 20:21 IST
   

ಬೆಂಗಳೂರು: ‘ಭೀಮಾ–ಕೋರೆಗಾಂವ್ ಪ್ರಕರಣದಲ್ಲಿ ಜಾಮೀನು ಪಡೆದಿರುವ ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್‌ (82) ಅವರ ಜಾಮೀನು ಷರತ್ತು ಸಡಿಲಿಸುವಂತೆ ಕೋರಿ ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವ ತನಕ ರಾಜ್ಯ ಪೊಲೀಸರು ಅವರನ್ನು ಬಂಧಿಸುವುದಿಲ್ಲ’ ಎಂದು ರಾಜ್ಯ ಪ್ರಾಸಿಕ್ಯೂಷನ್‌ ಹೈಕೋರ್ಟ್‌ಗೆ ತಿಳಿಸಿದೆ.

ಮಧುಗಿರಿಯ 4ನೇ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ 2022ರ ಫೆಬ್ರುವರಿ 11ರಂದು ಹೊರಡಿಸಿರುವ ಜಾಮೀನು ರಹಿತ ಬಂಧನದ ವಾರೆಂಟ್‌ ರದ್ದುಕೋರಿವರವರ ರಾವ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿದ ವೇಳೆ ರಾಜ್ಯ ಪ್ರಾಸಿಕ್ಯೂಷನ್‌ ಪರ ವಕೀಲ ಹೆಗಡೆ ಈ ಕುರಿತಂತೆ ಸ್ಪಷ್ಟಪಡಿಸಿದರು.

‘ಮುಂಬೈನ ಎನ್‌ಐಎ ವಿಶೇಷ ನ್ಯಾಯಾಲಯದ ವ್ಯಾಪ್ತಿಯನ್ನು ತೊರೆಯಬಾರದು ಎಂಬ ಷರತ್ತಿನ ಮೇಲೆ ಬಾಂಬೆ ಹೈಕೋರ್ಟ್, ರಾವ್ ಅವರಿಗೆ ವೈದ್ಯಕೀಯ ಚಿಕಿತ್ಸೆ ಆಧಾರದಲ್ಲಿ ಜಾಮೀನು ನೀಡಿದೆ. ಹೀಗಾಗಿ, ಅವರ ಜಾಮೀನು ಷರತ್ತು ಸಡಿಲಿಸುವಂತೆ ಕೋರುವತನಕ ರಾಜ್ಯ ಪೊಲೀಸರು ಅವರನ್ನು ಬಂಧಿಸುವುದಿಲ್ಲ’ ಎಂದು ಹೆಗಡೆ ವಿವರಿಸಿದರು. ಈ ಹೇಳಿಕೆ ದಾಖಲಿಸಿಕೊಂಡ ನ್ಯಾಯಪೀಠ ವರವರ ರಾವ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದೆ.

ADVERTISEMENT

‘ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಟಮ್ಮನ ಹಳ್ಳಿಯಲ್ಲಿ ನಕ್ಸಲರು2005ರಲ್ಲಿ ಕೆಎಸ್‌ಆರ್‌ಪಿ ಪೊಲೀಸ್ ತುಕಡಿ ಮೇಲೆ ದಾಳಿ ನಡೆಸಿದಾಗ ಆರು ಜನ ಪೊಲೀಸರು ಸಾವನ್ನಪ್ಪಿದ್ದರು. ಇದಕ್ಕೆ ರಾವ್ ಅವರ ಪ್ರಚೋದನಕಾರಿ ಭಾಷಣವೂ ಕಾರಣ‘ ಎಂಬ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.