ADVERTISEMENT

ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾದವರಿಗೆ ಪೊಲೀಸರ ಅಡ್ಡಿ: ಪ್ರತಿಭಟನೆ

ಬೆಳಗಾವಿ ತಾಲ್ಲೂಕಿನ ಪೀರನವಾಡಿಯಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 8:08 IST
Last Updated 15 ಆಗಸ್ಟ್ 2020, 8:08 IST

ಬೆಳಗಾವಿ: ತಾಲ್ಲೂಕಿನ ಪೀರನವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಜಯಂತಿ ಅಂಗವಾಗಿ ಶನಿವಾರ ನಸುಕಿನಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾಗಿದ್ದ ಗುಂಪಿನ ಮೇಲೆ ಪೊಲೀಸರು ಲಘು ಲಾಠಿಪ್ರಹಾರ ನಡೆಸಿದರು.

ಪ್ರತಿಮೆ ವಶ‌ಕ್ಕೆ ಪಡೆದಿದ್ದಕ್ಕೆ ಪೊಲೀಸರೊಂದಿಗೆ ರಾಯಣ್ಣನ ಅಭಿಮಾನಿಗಳು ವಾಗ್ವಾದಕ್ಕಿಳಿದರು. ಇದರಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಪ್ರತಿಷ್ಠಾಪನೆಗೆ ಅವಕಾಶ ಕೊಡದ ಪೊಲೀಸರ ವಿರುದ್ಧ ಮಹಿಳೆಯರನ್ನೂ ಒಳಗೊಂಡಿದ್ದ ಗುಂಪಿನವರು ಧಿಕ್ಕಾರ ಕೂಗಿದರು. ಸ್ಥಳದಲ್ಲಿಯೇ ಧರಣಿ ನಡೆಸಿದರು.

ADVERTISEMENT

‘ಕ್ರಾಂತಿವೀರನಿಗೆ ಜಯಂತಿಯ ದಿನದಂದೇ ತವರಿನಲ್ಲೇ ದೊಡ್ಡ ಅವಮಾನವಾಗಿದೆ. ಪ್ರತಿಮೆ ಪ್ರತಿಷ್ಠಾಪಿಸಲು ತಿಂಗಳಿಂದ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ, ಪ್ರತಿಮೆಯನ್ನು ಪೊಲೀಸರು ತೆರವುಗೊಳಿಸಿ ಒಯ್ದಿದ್ದಾರೆ. ಇದರ ಹಿಂದೆ ಯಾರ ಕುತಂತ್ರವಿದೆ ಎನ್ನುವುದು ಗೊತ್ತಿಲ್ಲ. ಈ ಮೂಲಕ ದೇಶಪ್ರೇಮಿಗೆ ಅವಮಾನ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆತಿರಲಿಲ್ಲ’ ಎಂದು ದೂರಿದರು. ‘ಹೀಗಾಗಿ, ನಾವೇ ಪ್ರತಿಷ್ಠಾಪಿಸಲು ಮುಂದಾದೆವು’ ಎಂದು ತಿಳಿಸಿದರು.

‘ಪೊಲೀಸರು ಪ್ರತಿಮೆ ವಾಪಸ್‌ ತಂದುಕೊಡಬೇಕು. ಗೌರವಪೂರ್ವಕವಾಗಿ ಅದನ್ನು ಈ ಸ್ಥಳದಲ್ಲೇ ಪ್ರತಿಷ್ಠಾಪಿಸಬೇಕು. ಅಲ್ಲಿವರೆಗೂ ಹೋರಾಟ ಮುಂದುವರಿಸಲಾಗುವುದು’ ಎಂದು ಪಟ್ಟು ಹಿಡಿದರು.

ಅವರನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ಈ ವೇಳೆ ಓಡುವಾಗ ಬಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ. ಪೂರ್ವ ಮಾಹಿತಿ ಇದ್ದಿದ್ದರಿಂದಾಗಿ ಸ್ಥಳದಲ್ಲಿ ಶುಕ್ರವಾರ ರಾತ್ರಿಯಿಂದಲೇ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ತಿಳಿದುಬಂದಿದೆ.

ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

‘ಗುಂಪೊಂದು ಅನುಮತಿ ಇಲ್ಲದೆ ಪ್ರತಿಮೆ ಸ್ಥಾಪನೆಗೆ ಮುಂದಾಗಿತ್ತು. ಇದನ್ನು ತಡೆದು ಬುದ್ಧಿ ಹೇಳಿದ್ದೇವೆ. ಈ ವೇಳೆ ಗಲಾಟೆಯಾಗಲಿ, ಲಾಠಿಪ್ರಹಾರವಾಗಲಿ ನಡೆದಿಲ್ಲ. ಸೂಕ್ತ ಅನುಮತಿ ಪತ್ರ ತಂದರೆ ಪ್ರತಿಮೆ ವಾಪಸ್‌ ಕೊಡಲಾಗುವುದು ಎಂದು ಅವರಿಗೆ ಹೇಳಿದ್ದೇವೆ’ ಎಂದು ನಗರ ಪೊಲೀಸ್ ಆಯುಕ್ತ ತ್ಯಾಗರಾಜನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ದೇಶಪ್ರೇಮಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪಿಸಬೇಕು ಎನ್ನುವ ಪೀರನವಾಡಿಯ ಯುವಕರ ಜೊತೆ ನಾನಿದ್ದೇನೆ. ಆದರೆ, ಅನುಮತಿ ಪಡೆದು ಈ ಕಾರ್ಯ ನೆರವೇರಿಸಬೇಕು. ಮಾರ್ಗಸೂಚಿಗಳನ್ನು ಮೀರಿ ಇಂತಹ ಕೆಲಸ ಮಾಡುವುದು ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.