ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಶೋಭಾಯಾತ್ರೆ ವೇಳೆ ಭಾಷಣ ಮಾಡಲಿದ್ದ ವಿಕಾಸ್ ಪುತ್ತೂರು ಎನ್ನುವರಿಗೆ ದ್ವೇಷ ಭಾಷಣ ತಡೆ ಮಸೂದೆ ಉಲ್ಲೇಖಿಸಿ ಪೊಲೀಸರು ನೋಟಿಸ್ ನೀಡಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಕುರಿತು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಕಿಡಿ ಕಾರಿದ್ದಾರೆ.
ರಾಜ್ಯಪಾಲರ ಅಂಕಿತ ಬೀಳದೆ, ರಾಜ್ಯ ಸರ್ಕಾರದ ಗೆಜೆಟ್ ನಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳದೆ ಒಂದು ಮಸೂದೆ ಕಾನೂನಾಗುವುದಿಲ್ಲ ಎನ್ನುವ ಕನಿಷ್ಠ ಜ್ಞಾನ ಸ್ವಯಂಘೋಷಿತ ಸಂವಿಧಾನ ತಜ್ಞರು, ವಕೀಲರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಅಧಿಕೃತವಾಗಿ ಜಾರಿಯೇ ಆಗದ ಒಂದು ಮಸೂದೆಯನ್ನು ಉಲ್ಲೇಖಿಸಿ ಪೊಲೀಸರು ವಿಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತಾರೆ ಎಂದರೆ ರಾಜ್ಯದಲ್ಲಿ ಪೊಲೀಸ್ ಕಚೇರಿಗಳು ಹೇಗೆ ಕಾಂಗ್ರೆಸ್ ಪಕ್ಷದ ಕಚೇರಿಗಳಾಗಿ ಮಾರ್ಪಟ್ಟಿವೆ ಎನ್ನುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ ಎಂದಿದ್ದಾರೆ.
ಕೇಸರಿ, ಕುಂಕುಮ ಎಂದರೆ ದ್ವೇಷ ಕಾರುವ ಕಾಂಗ್ರೆಸ್ ಪಕ್ಷ, ಹಿಂದೂಗಳ, ಹಿಂದೂ ಧರ್ಮದ ಬಗ್ಗೆ ಎಷ್ಟು ಪೂರ್ವಗ್ರಹ ಪೀಡಿತವಾಗಿದೆ ಎಂದರೆ ರಾಜ್ಯದಲ್ಲಿ ಮುಕ್ತವಾಗಿ ಗಣೇಶ ವಿಸರ್ಜನೆ ಮೆರವಣಿಗೆ ಮಾಡುವುದು ತಪ್ಪು, ಶೋಭಾಯಾತ್ರೆ, ಹಿಂದೂ ಸಮಾಜೋತ್ಸವ ಮಾಡುವುದೂ ತಪ್ಪು ಎನ್ನುವ ಪರಿಸ್ಥಿತಿ ತಂದಿಟ್ಟಿದೆ ಎಂದಿದ್ದಾರೆ.
ಈ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರವನ್ನ ಸ್ವಾಭಿಮಾನಿ ಕನ್ನಡಿಗರು ಕಿತ್ತೊಗೆಯುವ ದಿನ ಬಹಳ ದೂರವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.