ಬೆಂಗಳೂರು: ‘ಪೊಲೀಸ್ ಇಲಾಖೆಯಲ್ಲಿನ ನೇಮಕಾತಿಗೆ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದೇವೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಆದಷ್ಟು ಬೇಗ ಈ ಸಂಬಂಧ ಪ್ರಕಟಣೆ ಹೊರಡಿಸಲಾಗುವುದು ಎಂದು ತಿಳಿಸಿದರು.
‘ಸರ್ಕಾರಿ ನೌಕರರ ವಯೋಮಿತಿ ಒಂದು ಬಾರಿಗೆ ಅನ್ವಯ ಆಗುವಂತೆ 2027 ರವರೆಗೆ ವಯೋಮಿತಿ ಸಡಿಲಿಕೆ ಮಾಡಲಾಗಿದೆ. ಆದರೆ, ನಮ್ಮ ಇಲಾಖೆಯಲ್ಲಿ ವಯೋಮಿತಿ ಶಾಶ್ವತ ಸಡಿಲಿಕೆ ಮಾಡಲು ಉದ್ದೇಶಿಸಿದ್ದೇವೆ. ಇತರ ರಾಜ್ಯಗಳಲ್ಲಿರುವ ವಯೋಮಿತಿ ಸಡಿಲಿಕೆ ಕುರಿತ ಮಾಹಿತಿ ತರಿಸಿಕೊಂಡಿದ್ದೇವೆ. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಹೇಳಿದರು.
ಧರ್ಮಸ್ಥಳ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಷಡ್ಯಂತ್ರ ಮಾಡಿದವರು ಎನ್ನಲಾದವರ ಬಂಧನಕ್ಕೆ ಕಾನೂನು ತೊಡಕುಗಳಿವೆ. ಸಂಗ್ರಹಿಸಿರುವ ಅಸ್ಥಿಗಳ ಎಫ್‌ಎಸ್‌ಎಲ್ ವರದಿ ಬರಬೇಕಿದೆ. ಎಸ್‌ಐಟಿ ಅವರ ಕೆಲಸ ಮುಂದುವರಿಸಿದ್ದಾರೆ. ಎಲ್ಲವೂ ಅಂತಿಮಗೊಂಡ ಬಳಿಕ ಎಸ್ಐಟಿ ವರದಿ ನೀಡಲಿದೆ. ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಲು ತಿಳಿಸಿದ್ದೇವೆ. ಮಹೇಶ್ ತಿಮರೋಡಿ ಗಡಿಪಾರು ವಿಚಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಎಲ್ಲ ಪ್ರಕ್ರಿಯೆಯೂ ಕಾನೂನಿನ ಪ್ರಕಾರವೇ ನಡೆಯಲಿದೆ’ ಎಂದರು.
‘ಸಂಪುಟ: ಒಳಗೆ ಏನೆಲ್ಲ ಒಪ್ಪಂದ ಆಗಿದೆಯೋ ಗೊತ್ತಿಲ್ಲ’
‘ಸಂಪುಟ ಪುನಾರಚನೆಯ ವಿಚಾರ ನಮಗ್ಯಾರಿಗೂ ಏನೂ ಗೊತ್ತಿಲ್ಲ. ಅದು ಮುಖ್ಯಮಂತ್ರಿಯವರ ವಿವೇಚನೆಗೆ ಬಿಟ್ಟಿದ್ದು ಒಳಗೆ ಏನೆಲ್ಲ ಒಪ್ಪಂದ ಆಗಿದೆಯೋ ನಮಗೆ ಗೊತ್ತಿಲ್ಲ’ ಎಂದು ಜಿ.ಪರಮೇಶ್ವರ ಹೇಳಿದರು. ಸಂಪುಟ ಪುನಾರಚನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ‘ಇವೆಲ್ಲವೂ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮಗೆ ಗೊತ್ತೂ ಆಗುವುದಿಲ್ಲ. ಪುನಾರಚನೆ ಕುರಿತು ಕೆಲವು ಸಚಿವರು ಅವರ ಅಭಿಪ್ರಾಯಗಳನ್ನು ಹೇಳಿರಬಹುದು’ ಎಂದರು. ‘ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆ ಆಗುತ್ತದೆ ಅಂತ ಹೇಳಿಕೊಂಡೇ ಬರಲಾಗಿದೆ. ಈ ಬಗ್ಗೆ ಹೈಕಮಾಂಡ್ ಆಗಲಿ ಮುಖ್ಯಮಂತ್ರಿ ಆಗಲಿ ಕೆಪಿಸಿಸಿ ಅಧ್ಯಕ್ಷರಾಗಲಿ ಏನೂ ಹೇಳಿಲ್ಲ. ಒಳಗೆ ಏನಾಗಿದೆ ನನಗೆ ಗೊತ್ತಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.