ADVERTISEMENT

ಅವ್ಯವಹಾರದ ಆರೋಪದ ಹಿಂದೆ ರಾಜಕೀಯ ಷಡ್ಯಂತ್ರ: ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 19:28 IST
Last Updated 24 ಜುಲೈ 2021, 19:28 IST
   

ಬೆಂಗಳೂರು: ಮೊಟ್ಟೆ ಖರೀದಿ ಟೆಂಡರ್‌ನಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ತಮ್ಮ ವಿರುದ್ಧದ ಆರೋಪದ ಕುರಿತು ಪತ್ರಿಕಾ ಹೇಳಿಕೆಯ ಮೂಲಕ ಸ್ಪಷ್ಟನೆ ನೀಡಿರುವ ಅವರು, ‘ಇಲಾಖೆಯಿಂದ ಮೊಟ್ಟೆ ಖರೀದಿಗಾಗಿ ಈವರೆಗೆ ಯಾವುದೇ ಟೆಂಡರ್‌ ನಡೆದಿಲ್ಲ. ಮೊಟ್ಟೆ ಪೂರೈಕೆ ಗುತ್ತಿಗೆ ನೀಡುವುದಾಗಿ ನಾನು ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಹಣ ಪಡೆದಿಲ್ಲ’ ಎಂದು ತಿಳಿಸಿದ್ದಾರೆ.

‘ನಮ್ಮ ಪಕ್ಷದ ಶಾಸಕ ಪರಣ್ಣ ಮುನವಳ್ಳಿ ಅವರು ತಮ್ಮ ಸಂಬಂಧಿಕರು ಎಂದು ಹೇಳಿಕೊಂಡ ಕೆಲವರನ್ನು ಕರೆದುಕೊಂಡು ಬಂದು, ಮೊಟ್ಟೆ ಪೂರೈಕೆ ಟೆಂಡರ್‌ ಕೊಡಿಸುವಂತೆ ನನ್ನನ್ನು ಭೇಟಿಮಾಡಿದ್ದರು. ಕಾನೂನು ಪ್ರಕಾರ ಟೆಂಡರ್‌ನಲ್ಲಿ ಭಾವಗಹಿಸುವಂತೆ ಸೂಚಿಸಿದ್ದೆ. ಹಣಕಾಸಿನ ವ್ಯವಹಾರದ ಕುರಿತು ನಾನು ಯಾವುದೇ ಮಾತನಾಡಿರಲಿಲ್ಲ’ ಎಂದು ಹೇಳಿದ್ದಾರೆ.

ADVERTISEMENT

ರಹಸ್ಯ ಕಾರ್ಯಾಚರಣೆ ನಡೆಸಿ ತಮ್ಮನ್ನು ಆರೋಪಿತರನ್ನಾಗಿ ಬಿಂಬಿಸುವ ಷಡ್ಯಂತ್ರ ನಡೆದಿದೆ. ತಮ್ಮ ಅವಧಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಾಗಿದೆ. ತಾವು ಸಚಿವರಾಗುವ ಸಂದರ್ಭದಲ್ಲಿ ರಾಜ್ಯದಲ್ಲಿ ಅಪೌಷ್ಟಿಕತೆಯ ಪ್ರಮಾಣ ಶೇಕಡ 0.3ರಷ್ಟಿತ್ತು. ಈಗ ಶೇ 0.1ಕ್ಕೆ ಇಳಿದಿದೆ. ತಮ್ಮ ಪ್ರಯತ್ನವೇ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.