ADVERTISEMENT

'ಮೇ 25ರ ನಂತರ ರಾಜ್ಯ ರಾಜಕೀಯದಲ್ಲಿ ದ್ರುವೀಕರಣ’

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:59 IST
Last Updated 2 ಮೇ 2019, 11:59 IST
   

ಬೆಳಗಾವಿ: ‘ಮೇ 25ರ ನಂತರ ರಾಜ್ಯ ರಾಜಕೀಯದಲ್ಲಿ ದ್ರುವೀಕರಣ ಆಗಲಿದೆ. ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸರ್ಕಾರದಲ್ಲೂ ಬಹಳ ಬದಲಾವಣೆ ಆಗಲಿದೆ. ಕೆಂಪು ದೀಪ ಹಾಕಿಕೊಂಡು ಓಡಾಡುತ್ತಿರುವ ಬಹಳ ಮಂದಿ ಮಾಜಿ ಆಗಲಿದ್ದಾರೆ’ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಭವಿಷ್ಯ ನುಡಿದರು.

ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮೆಲ್‌) ಆಡಳಿತ ಮಂಡಳಿ ನಿರ್ದೇಶಕರಾಗಿ ಆಯ್ಕೆಯಾದ ಪುತ್ರ ಅಮರನಾಥಗೆ ಅಭಿನಂದನೆ ಸಲ್ಲಿಸಲು ಗೋಕಾಕದ ತಮ್ಮ ನಿವಾಸದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಈಗ ಕೆಂಪು ದೀಪ ಹಾಕಿಕೊಂಡು ಓಡಾಡುವವರಿಗೆ ಹೆದರಬೇಡಿ’ ಎಂದು ಬೆಂಬಲಿಗರಿಗೆ ಹೇಳಿದ ಅವರು, ಜೆಡಿಎಸ್‌–ಸಮ್ಮಿಶ್ರ ಸರ್ಕಾರ ಪತನವಾಗುವ ಸುಳಿವು ನೀಡಿದರು.

ADVERTISEMENT

‘ದೊಡ್ಡ ಪ್ರಮಾಣದ ಅಧಿಕಾರ ನಮ್ಮ ಬಳಿಗೆ ಬರುತ್ತದೆ. ನಮ್ಮನ್ನು ನಂಬಿ. ಮೋಸ, ವಿಶ್ವಾಸ ದ್ರೋಹ ಮಾಡುವವರು, ಸಮಯ ಸಾಧಕರು, ಬೆನ್ನಿಗೆ ಚೂರಿ ಹಾಕುವವರನ್ನು ನಂಬಬೇಡಿ’ ಎಂದು ಸೋದರ, ಅರಣ್ಯ ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಪರೋಕ್ಷವಾಗಿ ಗುಡುಗಿದರು.

ಪುತ್ರ ಅಮರನಾಥನನ್ನು ನಿರ್ದೇಶಕರಾಗಿ ಅವಿರೋಧ ಆಯ್ಕೆ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸಿದ ಅವರು, ‘ಕೆಎಂಎಫ್‌ ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸೇರಿದಂತೆ ಎಲ್ಲರ ಆಶೀರ್ವಾದ ದೊರೆತಿದೆ. ಅಥಣಿಯ ಶಾಸಕ ಮಹೇಶ ಕುಮಠಳ್ಳಿ ನಮ್ಮವರೇ’ ಎಂದು ತಮ್ಮೊಂದಿಗೆ ಶಾಸಕರಿದ್ದಾರೆ ಎನ್ನುವ ಸಂದೇಶ ರವಾನಿಸಿದರು.

‘ದಕ್ಷಿಣದ ಜಿಲ್ಲೆಗಳಲ್ಲಿ ಹೈನುಗಾರಿಕೆಯಿಂದಲೇ ಜೀವನ ನಿರ್ವಹಣೆ ಮಾಡುವವರಿದ್ದಾರೆ. ಇಲ್ಲಿ ಸಾವಿರಾರು ಟನ್ ಕಬ್ಬು ಬೆಳೆದು ನಾವು ಹಾಳಾಗುತ್ತಿದ್ದೇವೆ. ಕೋಲಾರ, ತುಮಕೂರಿನಲ್ಲಿ ಕುಡಿಯಲು ನೀರು ಸಿಗುವುದಿಲ್ಲ. ಆದರೆ, ಹೈನುಗಾರಿಕೆಯಲ್ಲಿ ಅಭಿವೃದ್ಧಿ ಸಾಧಿಸಿವೆ. ಅಲ್ಲಿನವರ ಜಾಣತನ, ಕುಟುಂಬ ನಡೆಸುವ ಶೈಲಿ ನೋಡಿದರೆ ದಿಗಿಲಾಗುತ್ತದೆ. ಕೆಎಂಎಫ್‌ ಚುನಾವಣೆ ಎಂದರೆ ನಮ್ಮಲ್ಲಿ ಮಹತ್ವವಿಲ್ಲ. ಆದರೆ, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರದಲ್ಲಿ ಕೆಎಂಎಫ್‌ ಚುನಾವಣೆ ಎಂದರೆ ವಿಧಾನಸಭೆ ಚುನಾವಣೆ ಇದ್ದಂತೆ ಇರುತ್ತದೆ. ಬೆಮೆಲ್‌ ಅನ್ನು ಬೆಂಗಳೂರು ಮಟ್ಟಕ್ಕೆ ತರಬೇಕು ಎನ್ನುವ ಆಸೆ ಇದೆ. ಯಾವುದೇ ನಾಯಕರ ಹಸ್ತಕ್ಷೇಪಕ್ಕೆ ಅವಕಾಶ ಕೊಡದಂತೆ ನೋಡಿಕೊಳ್ಳಬೇಕು. ನಾನು ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದು ತಿಳಿಸಿದರು.

ಶಾಸಕ ಮಹೇಶ ಕುಮಠಳ್ಳಿ ಭಾಗವಹಿಸಿದ್ದರು.

ರಮೇಶ–ಮಹೇಶ ಚರ್ಚೆ
ಗೋಕಾಕದಲ್ಲಿ ರಮೇಶ ಜಾರಕಿಹೊಳಿ ಅವರನ್ನು ಶಾಸಕ ಮಹೇಶ ಕುಮಠಳ್ಳಿ ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಮಹೇಶ, ‘ಕುಡಿಯುವ ನೀರು ಪೂರೈಕೆ ಯೋಜನೆ ಬಗ್ಗೆ ಮಾತನಾಡಲು ಬಂದಿದ್ದೆ. ರಾಜಕೀಯವಾಗಿ ಏನನ್ನೂ ಚರ್ಚಿಸಿಲ್ಲ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.