ADVERTISEMENT

ಎಸ್‌.ಎಂ. ಕೃಷ್ಣ: ರಾಜ್ಯ ರಾಜಕಾರಣದ ಮೇಲೆ ಹಿಡಿತ ಸಾಧಿಸಿದ್ದ ಚತುರ

ಸುಬ್ರಹ್ಮಣ್ಯ ವಿ.ಎಸ್‌.
Published 10 ಡಿಸೆಂಬರ್ 2024, 20:23 IST
Last Updated 10 ಡಿಸೆಂಬರ್ 2024, 20:23 IST
ಸಿದ್ದರಾಮಯ್ಯ, ಎಚ್‌.ಎಸ್‌.ಮಹದೇವಪ್ರಸಾದ್‌, ವಿ.ಎಸ್‌.ಉಗ್ರಪ್ಪ, ಆರ್‌.ವಿ.ದೇಶಪಾಂಡೆ ಅವರೊಂದಿಗೆ ಎಸ್‌.ಎಂ.ಕೃಷ್ಣ
ಸಿದ್ದರಾಮಯ್ಯ, ಎಚ್‌.ಎಸ್‌.ಮಹದೇವಪ್ರಸಾದ್‌, ವಿ.ಎಸ್‌.ಉಗ್ರಪ್ಪ, ಆರ್‌.ವಿ.ದೇಶಪಾಂಡೆ ಅವರೊಂದಿಗೆ ಎಸ್‌.ಎಂ.ಕೃಷ್ಣ   

ಮೈಸೂರು ಸಂಸ್ಥಾನದ ಪ್ರಜಾಪ್ರತಿನಿಧಿ ಸಭೆಯ ಭಾಗವಾಗಿದ್ದ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಎಸ್‌.ಎಂ. ಕೃಷ್ಣ ಅವರು ಪದವಿ ವಿದ್ಯಾರ್ಥಿಯಾಗಿದ್ದಾಗಲೇ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆಗ, 57 ಮತಗಳ ಅಂತರದಿಂದ ಸೋತಿದ್ದರು. ಕುಟುಂಬದ ಒತ್ತಾಸೆಯಂತೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದು ಹಿಂದಿರುಗಿದ ಅವರು, ಕೆಲಕಾಲ ವಕೀಲಿ ವೃತ್ತಿ ಮಾಡಿದರು. ಬೆಂಗಳೂರಿನ ರೇಣುಕಾಚಾರ್ಯ ಕಾನೂನು ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಕಾನೂನುಗಳ ಕುರಿತು ಬೋಧನೆಯನ್ನೂ ಮಾಡಿದರು. ತಾತ, ತಂದೆಯ ರಾಜಕೀಯ ಹೆಜ್ಜೆಗಳ ಜಾಡಿನಲ್ಲಿ ಎಸ್‌.ಎಂ. ಕೃಷ್ಣ ಕೂಡ ಅಡಿ ಇಡಬೇಕೆಂಬ ಒತ್ತಾಯ ಮಂಡ್ಯ ಜಿಲ್ಲೆಯ ಹಲವರಿಂದ ಬಂತು. ಒತ್ತಾಯಕ್ಕೆ ಕಟ್ಟುಬಿದ್ದ ಕೃಷ್ಣ, 1962ರ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಅಭ್ಯರ್ಥಿಯಾಗಿ ಮದ್ದೂರು ಕ್ಷೇತ್ರದಿಂದ ಕಣಕ್ಕಿಳಿದರು. ಮೊದಲ ಚುನಾವಣೆಯಲ್ಲಿ 1956 ಮತಗಳ ಅಂತರದೊಂದಿಗೆ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು.

ಮೊದಲ ಅವಧಿಯಲ್ಲಿ ಐದು ವರ್ಷ ಅತ್ಯಂತ ಕ್ರಿಯಾಶೀಲ ಸಂಸದೀಯ ಪಟುವಾಗಿ, ಶಾಸಕನಾಗಿ ಕೆಲಸ ಮಾಡಿದರೂ 1967ರ ಚುನಾವಣೆಯಲ್ಲಿ ಪಿಎಸ್‌ಪಿ ಪಕ್ಷದಿಂದ ಮತ್ತೊಮ್ಮೆ ಕಣಕ್ಕಿಳಿದ ಕೃಷ್ಣ ಅವರು ಕಾಂಗ್ರೆಸ್‌ನ ಮಂಚೇಗೌಡರ ಎದುರು ಸೋಲು ಕಂಡರು. ಸೋಲಿನ ಬಳಿಕ ಬೆಂಗಳೂರಿನಲ್ಲಿ ಪುನಃ ಕಾನೂನು ಕಾಲೇಜಿನಲ್ಲಿ ಬೋಧನೆ ಮಾಡುತ್ತಿದ್ದ ಅವರಿಗೆ 1968ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಒತ್ತಡ ಬಂತು. ಆ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪ್ರಜಾ ಸೋಷಿಯಲಿಸ್ಟ್‌ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಚ್‌.ಡಿ. ಚೌಡಯ್ಯ ಅವರನ್ನು ಸೋಲಿಸಿ ರಾಷ್ಟ್ರ ರಾಜಕಾರಣ ಪ್ರವೇಶಿಸಿದರು.

1969ರಲ್ಲಿ ಕಾಂಗ್ರೆಸ್‌ ಪಕ್ಷದೊಳಗೆ ಆಂತರಿಕ ಭಿನ್ನಮತ ಉಂಟಾದ ಸಮಯದಲ್ಲಿ ಪಿಎಸ್‌ಪಿಯ ಕೃಷ್ಣ ಅವರು ಪ್ರಧಾನಿ ಇಂದಿರಾ ಗಾಂಧಿಯವರ ಬೆಂಬಲಕ್ಕೆ ನಿಂತರು. 1970ರಲ್ಲಿ ನಡೆದ ಲೋಕಸಭೆಯ ಮಧ್ಯಂತರ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೃಷ್ಣ, ಭಾರಿ ಬಹುಮತದೊಂದಿಗೆ ಜಯ ಗಳಿಸಿದರು. 1972ರಲ್ಲಿ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆದು ಡಿ. ದೇವರಾಜ ಅರಸು ಮುಖ್ಯಮಂತ್ರಿಯಾದರು. ಅರಸು ಅವರ ಕೋರಿಕೆಯಂತೆ ರಾಜ್ಯಕ್ಕೆ ಹಿಂದಿರುಗಿದ ಕೃಷ್ಣ, ಕೈಗಾರಿಕಾ ಸಚಿವರಾಗಿ ಹಲವು ಮಹತ್ವದ ಕೆಲಸಗಳನ್ನು ಮಾಡಿದರು.

ADVERTISEMENT

ಇಂದಿರಾ ಕಾಂಗ್ರೆಸ್‌ ಮತ್ತು ರೆಡ್ಡಿ ಕಾಂಗ್ರೆಸ್‌ ಬಣಗಳ ಸಂಘರ್ಷದಲ್ಲಿ ರೆಡ್ಡಿ ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿದ್ದ ಕೃಷ್ಣ, ಕೆಲವು ವರ್ಷ ಸಕ್ರಿಯ ರಾಜಕಾರಣದಿಂದ ದೂರ ಉಳಿದರು. 1983ರಲ್ಲಿ ಕರ್ನಾಟಕದಲ್ಲಿ ಜನತಾ ಪಕ್ಷದ ಸರ್ಕಾರ ರಚನೆಯಾದ ಬಳಿಕ ಕಾಂಗ್ರೆಸ್‌ ವರಿಷ್ಠರು, ಕೃಷ್ಣ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೆ. ಪುನಃ ರಾಜ್ಯ ರಾಜಕಾರಣಕ್ಕೆ ಮರಳಿದ ಕೃಷ್ಣ, 1989ರ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಗೆಲ್ಲುತ್ತಾರೆ. ಮೂರು ವರ್ಷ ವಿಧಾನಸಭೆಯ ಅಧ್ಯಕ್ಷರಾಗಿರುತ್ತಾರೆ. 1992ರಲ್ಲಿ ಎಂ. ವೀರಪ್ಪ ಮೊಯಿಲಿ ಮುಖ್ಯಮಂತ್ರಿ ಆದಾಗ, ಕೃಷ್ಣ ಉಪ ಮುಖ್ಯಮಂತ್ರಿಯಾಗುತ್ತಾರೆ. 1996ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅವರು, 1999ರವರೆಗೂ ಸಂಸತ್ತಿನ ಮೇಲ್ಮನೆಯಲ್ಲಿರುತ್ತಾರೆ. ಪುನಃ ರಾಜ್ಯ ರಾಜಕೀಯಕ್ಕೆ ಮರಳಿದ ಅವರು, 1999ರಲ್ಲಿ ಮುಖ್ಯಮಂತ್ರಿ ಗಾದಿ ಏರುತ್ತಾರೆ. 2004ರವರೆಗೂ ಅವರು ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ ಬಹುಮತ ಪಡೆಯಲು ವಿಫಲವಾಯಿತು. ಇದಾದ ಕೆಲವೇ ದಿನಗಳಲ್ಲಿ ಕೃಷ್ಣ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು.

ಮಹಾರಾಷ್ಟ್ರ ರಾಜಭವನದಿಂದ ಪುನಃ ದೆಹಲಿ ರಾಜಕಾರಣಕ್ಕೆ ಮರಳಿದರು. 2009ರಿಂದ 2012ರವರೆಗೆ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ಕೃಷ್ಣ, ನಂತರ ಐದು ವರ್ಷ ಕಾಂಗ್ರೆಸ್‌ನಲ್ಲಿದ್ದರೂ ರಾಜ್ಯ ರಾಜಕಾರಣದಲ್ಲಿ ಹೆಚ್ಚೇನೂ ಸಕ್ರಿಯವಾಗಿರಲಿಲ್ಲ. 2017ರಲ್ಲಿ ಬಿಜೆಪಿ ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.