ADVERTISEMENT

ರಾಜಕೀಯ ಪದವಿ ಕಾಲೇಜು ಪ್ರಾರಂಭಿಸಲು ಚಿಂತನೆ: ಬಸವರಾಜ ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 11:25 IST
Last Updated 14 ಅಕ್ಟೋಬರ್ 2025, 11:25 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಮಂಗಳೂರು: ಕರ್ನಾಟಕ ವಿಧಾನ ಮಂಡಲದ ವತಿಯಿಂದ ರಾಜಕೀಯ ಪದವಿ ಕಾಲೇಜ್‌ವೊಂದನ್ನು ಬರುವ ಜೂನ್‌ನಿಂದ ಬೆಂಗಳೂರಿನಲ್ಲಿ ಪ್ರಾರಂಭಿಸಲು ಯೋಚಿಸಲಾಗಿದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಮಂಗಳವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ಮೂರು ವರ್ಷಗಳ ಪದವಿ ಶಿಕ್ಷಣದಲ್ಲಿ ರಾಜಕೀಯ ಸಂಹಿತೆ ಒಳಗೊಂಡ ಪಠ್ಯಕ್ರಮ ರೂಪಿಸಲು ತಜ್ಞರನ್ನು ಸಂಪರ್ಕಿಸಲಾಗಿದೆ. ನಿವೃತ್ತ ಪ್ರಾಧ್ಯಾಪಕರು, ಮುತ್ಸದ್ದಿ ರಾಜಕಾರಣಿಗಳು, ರಾಜಕೀಯ ಪರಿಣಿತಿ ಹೊಂದಿರುವ ಸಾಮಾನ್ಯ ಜನರ ಅಭಿಪ್ರಾಯ ಪಡೆಯಲಾಗುವುದು. ಒಂದು ತಿಂಗಳಲ್ಲಿ ಇದರ ಸ್ಪಷ್ಟ ಚಿತ್ರಣ ಸಿಗಲಿದೆ. ವಿಧಾನಸಭೆ ಅಧ್ಯಕ್ಷ ಯು.ಟಿ.ಖಾದರ್ ಮತ್ತು ನಾನು ಈ ಬಗ್ಗೆ ಚರ್ಚಿಸಿದ್ದು, ಮುಖ್ಯಮಂತ್ರಿ ಬಳಿ ವಿಷಯ ಪ್ರಸ್ತಾಪಿಸಿದ್ದೇವೆ. ಅವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ’ ಎಂದರು.

ರಾಜ್ಯದಲ್ಲಿ 29 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. 1,900 ಪ್ರಾಥಮಿಕ ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳು ಇದ್ದಾರೆ. ಕನ್ನಡ ಮಾಧ್ಯಮ ಶಾಲೆಗಳು ಬಡವಾಗುತ್ತಿವೆ. ದಶಕದ ಈಚೆಗೆ ಸರ್ಕಾರ ನಡೆಸುವವರು ತೆಗೆದುಕೊಳ್ಳುವ ತೀರ್ಮಾನ ಇದಕ್ಕೆ ಕಾರಣವಾಗಿದೆ. ಶಿಕ್ಷಕರೇ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸುತ್ತಿಲ್ಲ ಎಂಬ ಆರೋಪವೂ ಇದೆ. ಎಲ್ಲರೂ ತಮ್ಮ ಮಕ್ಕಳನ್ನು ಇಂಗ್ಲಿಷ್‌ ಮಾಧ್ಯಮ ಶಾಲೆಗಳಿಗೆ ಕಳುಹಿಸಲು ಉತ್ಸುಕತೆ ತೋರುತ್ತಾರೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುವ ರಾಜಕಾರಣಿಗಳು ತಮ್ಮ ಶಾಲೆಗಳ ಸುಧಾರಣೆ ಬಗ್ಗೆ ಯೋಚಿಸುತ್ತಾರೆ. ಕೆಲವರು ಮಾತ್ರ ಇದಕ್ಕೆ ಹೊರತಾಗಿರಬಹುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ADVERTISEMENT

‘ಹೆಚ್ಚು ಅನುಭವ ಇರುವವರಿಗೆ ಶಿಕ್ಷಣ ಖಾತೆಯ ಹೊಣೆ ನೀಡಿದರೆ ಉತ್ತಮ. ನಾನು ಶಿಕ್ಷಣ ಸಚಿವನಾಗಿದ್ದಾಗ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ಶಿಕ್ಷಣ ನೀಡುತ್ತಿದ್ದ ರಾಜ್ಯದ 417 ಶಾಲೆಗಳನ್ನು ಬಂದ್ ಮಾಡಿಸಿದ್ದೆ. 17 ಮಂದಿ ಶಾಸಕರು ನನ್ನ ವಿರುದ್ಧ ಹೋರಾಟ ನಡೆಸಿದ್ದರು. ಈಗ ಕನ್ನಡ ಮಾಧ್ಯಮಕ್ಕೆ ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮ ನಡೆಸುವ ಶಾಲೆಗಳೂ ಇವೆ. ಅಧಿಕಾರಿಗಳ ಹಂತದಿಂದ ಮೇಲಿನವರೆಗೆ ಎಲ್ಲೆಡೆ ಭ್ರಷ್ಟಾಚಾರವೂ ಹೆಚ್ಚಾಗಿದೆ ’ಎಂದು ಹೇಳಿದರು.