ಬೆಂಗಳೂರು: ಪ್ರಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು15ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಶ್ರೀ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಅವರ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಹ ಕಾಮೇಗೌಡರ ಕಾರ್ಯವನ್ನು ಶ್ಲಾಘಿಸಿದ್ದರು ಎಂದು ಸಿಎಂ ಬೊಮ್ಮಾಯಿನೆನಪಿಸಿಕೊಂಡರು.
ಕಲ್ಮನೆ ಕಾಮೇಗೌಡ ನಿಧನದಿಂದ ಅತೀವ ನೋವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅಂತರ್ಜಲ ವೃದ್ಧಿಯಲ್ಲಿ ದೇಶದ ಗಮನ ಸೆಳೆದಿದ್ದ, 16 ಕೆರೆಗಳ ನಿರ್ಮಾತೃ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಶ್ರೀ ಕಲ್ಮನೆ ಕಾಮೇಗೌಡ ಅವರ ನಿಧನದಿಂದ ಅತೀವ ನೋವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಸಂತಾಪ ಸೂಚಿಸಿದರು. ಪರಿಸರ ಜೀವಿ, ಕೆರೆಗಳ ನಿರ್ಮಾಣದ ಮೂಲಕ ನೀರಿನ ಮಹತ್ವ ಸಾರಿದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ದಾಸನದೊಡ್ಡಿ ಗ್ರಾಮದ ಶ್ರೀ ಕಲ್ಮನೆ ಕಾಮೇಗೌಡ ಇನ್ನಿಲ್ಲ ಎನ್ನುವ ಸುದ್ದಿ ಕೇಳಿ ಬಹಳ ನೋವಾಯಿತು ಎಂದು ಹೇಳಿದರು.
ಕುರಿ ಸಾಕಣೆ ಕಾಯಕದಲ್ಲಿ ತೊಡಗಿದ್ದ ಅವರು ತಮ್ಮ ದುಡಿಮೆ ಹಣದಲ್ಲಿಯೇ 14ಕ್ಕೂ ಹೆಚ್ಚು ಕೆರೆ-ಕಟ್ಟೆ ನಿರ್ಮಾಣ ಮಾಡಿ ಸಕ್ಕರೆ ನಾಡಿನ ಆಧುನಿಕ ಭಗೀರಥರಾಗಿದ್ದರು. ಪ್ರಧಾನಿ ಶ್ರೀ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು ಎಂದು ತಿಳಿಸಿದರು.
ಜಲ ಸಂರಕ್ಷಣೆ ಬಗ್ಗೆ ಅವರು ಹಾಕಿಕೊಟ್ಟ ಮೇಲ್ಪಂಕ್ತಿ ಅನುಕರಣೀಯ. ಶ್ರೀ ಕಲ್ಮನೆ ಕಾಮೇಗೌಡರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಕಲ್ಮನೆ ಕಾಮೇಗೌಡ ಅವರು ಮಂಡ್ಯದ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ 15 ಕಟ್ಟೆ ಕಟ್ಟಿ ಪ್ರಸಿದ್ಧಿ ಪಡೆದಿದ್ದದ್ದರು. ಕಾಮೇಗೌಡರ ಪ್ರಕೃತಿ ಸಂರಕ್ಷಣೆ ಪ್ರಧಾನಿ ನರೇಂದ್ರ ಮೋದಿ ಅವರ ಗಮನ ಸೆಳೆದಿತ್ತು, 2020ರಲ್ಲಿ ‘ಮನ್ ಕಿ ಬಾತ್’ ಸರಣಿಯಲ್ಲಿ ಕಾಮೇಗೌಡರ ಸೇವೆಯನ್ನು ಕೊಂಡಾಡಿದ್ದರು. ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಮಾಗೋವಿಂದ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಸಂದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.