ADVERTISEMENT

ಒಳಮೀಸಲಾತಿ: ಕೇಂದ್ರಕ್ಕೆ ಶಿಫಾರಸು ಮಾಡಿ

ಸದಾಶಿವ ಆಯೋಗದ ವರದಿ ಜಾರಿಗೆ ಸ್ವಾಮೀಜಿಗಳ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2020, 11:24 IST
Last Updated 29 ಆಗಸ್ಟ್ 2020, 11:24 IST
ಮಾದಾರ ಚನ್ನಯ್ಯ ಸ್ವಾಮೀಜಿ
ಮಾದಾರ ಚನ್ನಯ್ಯ ಸ್ವಾಮೀಜಿ   

ಚಿತ್ರದುರ್ಗ: ‘ರಾಜ್ಯದಲ್ಲಿ ಒಳಮೀಸಲಾತಿ ಜಾರಿಗೊಳಿಸಲು ರಾಜ್ಯ ಸರ್ಕಾರ ತ್ವರಿತವಾಗಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಸದಾಶಿವ ಆಯೋಗದ ವರದಿಯನ್ನೂ ಜಾರಿಗೊಳಿಸಬೇಕು’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯಿಸಿದರು.

‘ಆರ್ಥಿಕವಾಗಿ ಅತ್ಯಂತ ಹಿಂದುಳಿದ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಸಿಗಲಿ ಎಂಬ ಸದುದ್ದೇಶದಿಂದ ಸುಪ್ರೀಂ ಕೋರ್ಟ್‌ ನ್ಯಾಯಸಮ್ಮತ ತೀರ್ಪು ನೀಡಿದೆ. ಅದನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಬೇಕು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

‘ಮಾದಿಗ ಸಮುದಾಯ ಮೊದಲಿನಿಂದಲೂ ಅನ್ಯಾಯಕ್ಕೆ ಒಳಗಾಗಿದೆ. ಒಳಮೀಸಲಾತಿಗಾಗಿ 25 ವರ್ಷ ಹೋರಾಟ ನಡೆದಿದೆ. ಈಗ ಹೊಸ ತಿರುವು ಪಡೆದುಕೊಂಡಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ ಕಾರಜೋಳ ಅವರು ಕೂಡಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಜಾರಿಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.

ADVERTISEMENT

ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ, ‘ಮಾದಿಗ ಸಮುದಾಯದಲ್ಲಿ ಒಗ್ಗಟ್ಟಿಲ್ಲ. ಇದ್ದಿದ್ದರೆ, ಎರಡೂವರೆ ದಶಕಗಳ ಕಾಲ ಹೋರಾಟ ನಡೆಸುವ ಅಗತ್ಯವೇ ಬರುತ್ತಿರಲಿಲ್ಲ. ಒಳಮೀಸಲಾತಿ ಸಂಬಂಧ ಸುಪ್ರೀಂ ಕೋರ್ಟ್‌ನ ತೀರ್ಪು ಆಶಾದಾಯಕವಾಗಿದೆ. ಆಡಳಿತ ನಡೆಸುವ ಆಯಾ ರಾಜ್ಯ ಸರ್ಕಾರಗಳು ಕೇಂದ್ರಕ್ಕೆ ಕೂಡಲೇ ಶಿಫಾರಸು ಮಾಡಿ, ಜಾರಿಗೆ ತರಬೇಕು. ಅನ್ಯಾಯಕ್ಕೆ ಒಳಗಾದ ಸಮುದಾಯಗಳಿಗೆ ನವಚೈತನ್ಯ ತುಂಬಬೇಕು’ ಎಂದು ಒತ್ತಾಯಿಸಿದರು.

‘ಮಾದಿಗ ಸಮುದಾಯ ಇನ್ನೊಬ್ಬರ ಮೀಸಲಾತಿ ಖಂಡಿತ ಕಸಿದುಕೊಳ್ಳುತ್ತಿಲ್ಲ. ಸಂವಿಧಾನದಡಿ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಇದನ್ನು ಇತರೆ ಸಮುದಾಯಗಳು ಮೊದಲು ಅರ್ಥಮಾಡಿಕೊಳ್ಳಬೇಕು. ಜತೆಗೆ ಸದಾಶಿವ ಆಯೋಗದ ವರದಿ ಯಥಾವತ್ತು ಜಾರಿಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇವೆರಡು ಅಂಗೀಕಾರ ಆಗದಿದ್ದರೆ, ರಾಜ್ಯದಾದ್ಯಂತ ಹೋರಾಟ ಅನಿವಾರ್ಯ’ ಎಂದು ಎಚ್ಚರಿಸಿದರು.

ಮಾರ್ಕಂಡೇಯ ಮುನಿ ಸ್ವಾಮೀಜಿ, ‘ಮಾದಿಗ ಮತ್ತು ಛಲವಾದಿ ಇತರೆ ಸಮುದಾಯಗಳಿಗಿಂತಲೂ ತುಂಬಾ ಹಿಂದುಳಿದಿದೆ. ಯಾರೂ ಮುಟ್ಟಲು ಸಾಧ್ಯವಾಗದಷ್ಟು ಬಹುದೂರದಲ್ಲಿದ್ದೇವೆ. ಈಗಲೂ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬಂದಿಲ್ಲ. ನಾವು ಭಿಕ್ಷೆ ಬೇಡುತ್ತಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲು ಕಲ್ಪಿಸಿ ಎಂದು ಕೋರುತ್ತಿದ್ದೇವೆ’ ಎಂದರು.

ಹಲ್ಲೆ ತಡೆಯದಿದ್ದರೆ ಹೋರಾಟ

‘ಹೈದರಾಬಾದ್ ಕರ್ನಾಟಕ ಸೇರಿ ರಾಜ್ಯದ ಹಲವೆಡೆ ಮಾದಿಗ ಸಮುದಾಯದವರ ಮೇಲೆ ನಿರಂತರವಾಗಿ ಹಲ್ಲೆ ಮುಂದುವರಿದಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಸರ್ಕಾರ ಮುಂದಾಗಬೇಕು. ಕೊರೊನಾ ಕಾರಣಕ್ಕಾಗಿ ಹಲ್ಲೆ ಪ್ರಕರಣಗಳ ವಿರುದ್ಧ ಉಗ್ರ ಹೋರಾಟ ಕೈಗೊಂಡಿಲ್ಲ. ಸಮುದಾಯ ನಿರ್ಲಕ್ಷಿಸಿದರೆ ಸರ್ಕಾರದ ವಿರುದ್ಧ ಧ್ವನಿ ಎತ್ತಲಾಗುವುದು’ ಎಂದು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.