ADVERTISEMENT

ಶಿಸ್ತುಬದ್ಧ ಲೆಕ್ಕಾಚಾರ; ಹಳಿಗೆ ಬಂದ ಆರ್ಥಿಕತೆ: ಸಿಎಂ ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 22:15 IST
Last Updated 24 ಫೆಬ್ರುವರಿ 2023, 22:15 IST
   

ಬೆಂಗಳೂರು: ‘ಕೋವಿಡ್‌ ನಂತರ ವಿಶ್ವದ ಆರ್ಥಿಕತೆ ನಲುಗಿದ್ದರೂ, ಶಿಸ್ತುಬದ್ಧ ಲೆಕ್ಕಾಚಾರಗಳ ಮೂಲಕ ಸರ್ಕಾರದ ಆರ್ಥಿಕ ಪರಿಸ್ಥಿತಿ ಹಳಿಗೆ ತಂದಿದ್ದೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ಅವರು ಮಾತನಾಡಿದರು.

‘ಜನರ ಮೇಲೆ ಸಾಲದ ಹೊರೆ ಹೊರಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪ ಸರಿಯಲ್ಲ. ಕೋವಿಡ್‌ನಿಂದಾಗಿ ಸರ್ಕಾರ ಹಲವು ಸವಾಲುಗಳನ್ನು ಎದುರಿಸಿದೆ. ಕುಸಿದ ಆರ್ಥಿಕ ಪರಿಸ್ಥಿತಿಯಲ್ಲಿ ಆರೋಗ್ಯ ಕ್ಷೇತ್ರ ಸೇರಿದಂತೆ ಸಾಕಷ್ಟು ಕ್ಷೇತ್ರಗಳಿಗೆ ಅಪಾರ ಹಣ ವ್ಯಯಿಸಲಾಗಿದೆ. ಅಂತಹ ಸಂಕಷ್ಟದಲ್ಲೂ ಬದ್ಧತಾ ವೆಚ್ಚ, ಸಬ್ಸಿಡಿ ನಿಭಾಯಿಸಿ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ’ ಎಂದು ವಿವರ
ನೀಡಿದರು.

ADVERTISEMENT

‘ಬೀದಿಬದಿ ವ್ಯಾಪಾರಿಗಳಿಂದ ಉದ್ಯಮಿಗಳವರೆಗೆ ಎಲ್ಲ ವರ್ಗಗಳೂ ನಲುಗಿದ್ದವು. ₹ 5 ಸಾವಿರ ಕೋಟಿ ತೆರಿಗೆ ಸಂಗ್ರಹ ಕುಸಿದಿತ್ತು. ಆರ್ಥಿಕ ಬಿಕ್ಕಟ್ಟಿನ ಚೇತರಿಕೆಯ ನಂತರ ಒಂದೇ ವರ್ಷದಲ್ಲಿ ಮತ್ತೆ ₹ 13 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹಿಸಿದ್ದೇವೆ. ಕಳೆದ ಬಜೆಟ್‌ನಲ್ಲಿ ₹ 72 ಸಾವಿರ ಕೋಟಿ ಸಾಲ ಪಡೆಯಲು ಅನುಮತಿ ಪಡೆಯಲಾಗಿತ್ತು. ಅದರಲ್ಲಿ ₹ 68 ಕೋಟಿಯಷ್ಟೇ ತೆಗೆದುಕೊಳ್ಳಲಾಗಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಸಾಲ ಪಡೆಯಲು ಅನುಮತಿ ಸಿಕ್ಕಿದ್ದ ಮೊತ್ತದಲ್ಲಿ ಶೇ 71ರಷ್ಟು ಪಡೆಯಲಾಗಿದೆ’
ಎಂದರು.

ಕಾಂಗ್ರೆಸ್‌ನ ಎಂ.ನಾಗರಾಜು ಮಾತನಾಡಿ, ‘ಇದು ಕೇಂದ್ರದ ದ್ರೋಹದ ಕಥೆ ಹೇಳುವ ಬಜೆಟ್‌. ಬಿಜೆಪಿ ಬಣ್ಣಿಸಿದಂತೆ ಇದು ಅಮೃತಕಾಲದ ಬಜೆಟ್‌ ಅಲ್ಲ, ಅಂಧ ಕಾಲ ಎನ್ನಬೇಕು. ಕಾಂಗ್ರೆಸ್‌ ಹಲವು ದಶಕಗಳು ಮಾಡಿದ್ದಕ್ಕಿಂತ ದುಪ್ಪಟ್ಟು ಸಾಲ ಮೂರೂವರೆ ವರ್ಷಗಳಲ್ಲಿ ಮಾಡಲಾಗಿದೆ’ ಎಂದು ಟೀಕಿಸಿದರು.

ಮಹೇಶ ಜೋಶಿಗೆ ಸಚಿವರ ಚೀಟಿ

ವಿಧಾನ ಪರಿಷತ್‌ನ ಪತ್ರಕರ್ತರ ಗ್ಯಾಲರಿಯಲ್ಲಿ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ ಜೋಶಿ ಕುಳಿತಿದ್ದರು. ಅದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ಕುಮಾರ್ ಮಾರ್ಷಲ್‌ ಬಳಿ ಚೀಟಿ ಕಳುಹಿಸಿದರು.

‘ತಾವು ಅಲ್ಲಿ ಕುಳಿತುಕೊಳ್ಳಬಾರದು, ದಯವಿಟ್ಟು ಹೊರಗೆ ಕುಳಿತಿರಿ ಬಂದು ಭೇಟಿ ಮಾಡುತ್ತೇನೆ’ ಎಂದು ಚೀಟಿಯಲ್ಲಿ ವಿನಂತಿಸಿದ್ದರು. ಅದನ್ನು ಓದಿ ವಿಚಲಿತರಾದ ಜೋಶಿ ಸಚಿವರ ಮುಖ ನೋಡಿದರು. ಸುನಿಲ್‌ಕುಮಾರ್ ಅಲ್ಲಿಂದಲೇ ಕೈಮುಗಿದರು. ಜೋಶಿ ತಕ್ಷಣ ಜಾಗ ಖಾಲಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.