ADVERTISEMENT

ಪಠ್ಯ ಕಡಿತ ತೀರ್ಮಾನವಾಗಿಲ್ಲ: ಸಚಿವ ಸುರೇಶ್ ಕುಮಾರ್

ಇಲಾಖೆಯ ಜಾಲತಾಣದಿಂದ ಪಠ್ಯ ಹಿಂತೆಗೆಯಲು ಸಚಿವ ಸುರೇಶ್ ಕುಮಾರ್ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 20:55 IST
Last Updated 29 ಜುಲೈ 2020, 20:55 IST
ಎಸ್. ಸುರೇಶ್ ಕುಮಾರ್
ಎಸ್. ಸುರೇಶ್ ಕುಮಾರ್   

ಬೆಂಗಳೂರು: ‘ಕೋವಿಡ್‌ನಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಇನ್ನೂ ನಿಗದಿಯಾಗದೇ ಇರುವುದರಿಂದ ಪಠ್ಯಗಳನ್ನು ಕಡಿತಗೊಳಿಸುವ ಕುರಿತು ಅಂತಿಮ ತೀರ್ಮಾನ ಆಗಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

‘ಈ ವರ್ಷ ಲಭ್ಯವಾಗುವ ಬೋಧನಾ ಅವಧಿಗೆ ತಕ್ಕಂತೆ ಬೋಧನಾ ಮಾದರಿಗಳನ್ನು ಸಿದ್ಧಪಡಿಸಲು ಸೂಚಿಸಲಾಗಿತ್ತು. ಅದು ಪ್ರಕ್ರಿಯೆ ಹಂತದಲ್ಲಿದೆ. ಅಂತಿಮವಾಗುವ ಮೊದಲೇ ಅನುಮೋದಿತವಾಗದ ಪಠ್ಯವು ಅಚಾತುರ್ಯದಿಂದಾಗಿಇಲಾಖೆಯ ಜಾಲತಾಣದಲ್ಲಿ ಪ್ರಕಟವಾಗಿದೆ. ಇದನ್ನು ತಕ್ಷಣ ಹಿಂಪಡೆಯಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ತಿಳಿಸಿದ್ದಾರೆ.

‘ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ಗಮನಿಸಿದ್ದೇನೆ. ಈ ಶೈಕ್ಷಣಿಕ ವರ್ಷ ಆರಂಭವಾಗದಿರುವುದರಿಂದ ಎಷ್ಟು ಶಾಲಾ ದಿನ ದೊರೆಯುತ್ತವೆಂಬುದು ಇನ್ನೂ ಅಸ್ಪಷ್ಟ. ಲಭ್ಯ ಅವಧಿಯ ಆಧಾರದಲ್ಲಿ ವೈಜ್ಞಾನಿಕವಾಗಿ ಪಠ್ಯ ಕಡಿತ ಮಾಡಲಾಗುವುದು. ಯಾವುದೇ ಪಠ್ಯವನ್ನು ಅನಗತ್ಯವಾಗಿ ಕೈಬಿಡುವುದಿಲ್ಲ’ ಎಂದಿದ್ದಾರೆ.

ADVERTISEMENT

‘ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯಕ್ತಿಯ, ದಾಖಲೆಯ, ಸಂಗತಿಯ ಐತಿಹ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತದೆಯೇ ವಿನಾ ಕೆಡಹುವ ಕೆಲಸ ಮಾಡುವುದಿಲ್ಲ. ಹೀಗಾಗಿ, ಅನವಶ್ಯಕ ರಾಜಕೀಯ ಗೊಂದಲಗಳಿಗೆ ಅವಕಾಶ ಕಲ್ಪಿಸಬೇಕಿಲ್ಲ’ ಎಂದೂ ಸುರೇಶ್‍ಕುಮಾರ್ ಪ್ರತಿಪಾದಿಸಿದ್ದಾರೆ.

ತೀವ್ರ ಹೋರಾಟ: ಎಚ್ಚರಿಕೆ

ಮೈಸೂರು: ‘ಸರ್ಕಾರಕ್ಕೆ ಸೈರಣೆ ಎಂಬುದಿಲ್ಲ. ಮೊದಲು, ಟಿಪ್ಪು ಜಯಂತಿ ಆಚರಣೆಯನ್ನು ರದ್ದು ಮಾಡಿತು. ಈಗ ಶಾಲಾ ಪಠ್ಯದಿಂದ ಟಿಪ್ಪು ಚರಿತ್ರೆಯನ್ನೇ ಕೈಬಿಟ್ಟಿದ್ದು, ಇದರ ವಿರುದ್ಧ ತೀವ್ರತರವಾದ ಹೋರಾಟ ಹಮ್ಮಿಕೊಳ್ಳಲಾಗುವುದು‘ ಎಂದು ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್‌ ಎಚ್ಚರಿಕೆ ನೀಡಿದರು.

‘ಪಠ್ಯ ಕಡಿತ ಕ್ರಮ ಅವೈಜ್ಞಾನಿಕ’

‘ಪಠ್ಯಭಾಗಗಳನ್ನು ಕಡಿತಗೊಳಿಸುವಾಗ ಬಳಸಿರುವ ಮಾನದಂಡಗಳು ವೈಜ್ಞಾನಿಕವಾಗಿಲ್ಲ.ವಿಷಯ ತಜ್ಞರನ್ನು ಒಳಗೊಳ್ಳದೇ ಈ ರೀತಿಯಲ್ಲಿ ಪಠ್ಯಭಾಗಗಳನ್ನು ಕಡಿತಗೊಳಿಸಿರುವುದು ಸ್ವಲ್ಪವೂ ಸರಿಯಿಲ್ಲ’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದ್ದಾರೆ.

ಈ ಕುರಿತು ಸಚಿವ ಸುರೇಶ್‌ಕುಮಾರ್‌ ಅವರಿಗೆ ಪತ್ರ ಬರೆದಿರುವ ಅವರು, ‘ಟಿಪ್ಪು ಸುಲ್ತಾನ್‌ ಕುರಿತು 6, 7 ಮತ್ತು 10ನೇ ತರಗತಿಯಲ್ಲಿರುವ ಪಠ್ಯಗಳ ಪೈಕಿ 7ನೇ ತರಗತಿಯ ಪಠ್ಯದಲ್ಲಿ ಹೆಚ್ಚು ವಿವರಗಳಿವೆ. ಅದನ್ನು ಉಳಿಸಿಕೊಳ್ಳುವ ಬದಲು 6ನೇ ತರಗತಿಯ ಪಠ್ಯದಲ್ಲಿನ ನಾಲ್ಕಾರು ವಾಕ್ಯಗಳನ್ನು ಬಳಸಿಕೊಳ್ಳಲಾಗಿದೆ. ಟಿಪ್ಪು ಕುರಿತ ಒಂದು ಪಾಠ ಕಡಿತವಾಗಿದ್ದರೆ ಬಸವೇಶ್ವರ, ರಾಮಾನುಜಾಚಾರ್ಯ, ಶಂಕರಾಚಾರ್ಯ, ಮಧ್ವಾಚಾರ್ಯರ ಒಂದು ಪಠ್ಯ ಭಾಗಕ್ಕೆ ಕತ್ತರಿ ಹಾಕಲಾಗಿದೆ. ಸಂವಿಧಾನಾತ್ಮಕ ಸಂಗತಿಗಳ ಜತೆಗೆ ತುಳುನಾಡು, ಹೈದಾರಾಬಾದ್ ಕರ್ನಾಟಕ ವಿಮೋಚನಾ ಚಳವಳಿಯಂತಹ ಪ್ರಾದೇಶಿಕ ಮಹತ್ವದ ವಿಷಯಗಳನ್ನು ಕಡಿತಗೊಳಿಸಿರುವುದು ವಿವೇಚನಾ ರಹಿತ ಕ್ರಮ’ ಎಂದವರು ಹೇಳಿದ್ದಾರೆ.

‘ಎಷ್ಟೋ ವಿದ್ಯಾರ್ಥಿಗಳು ಪ್ರೌಢಶಾಲೆಯನ್ನು ಪ್ರವೇಶಿಸುವುದಿಲ್ಲ! ಪ್ರೌಢಶಾಲೆಯಲ್ಲಿ ಓದುತ್ತಾರೆಂದು‍ಪ್ರಾಥಮಿಕ ಹಂತದ ಪಾಠಗಳನ್ನು ಕಡಿತಗೊಳಿಸುವುದು ಸರಿಯಲ್ಲ’ ಎಂದು ತಿಳಿಸಿದ್ದಾರೆ.

***

‘ಅನಧಿಕೃತ ಸಂಘಿ ಸರ್ಕಾರ ಬಲ’

‘ಏಸು ಕ್ರಿಸ್ತ, ಪ್ರವಾದಿ ಪೈಗಂಬರ್‌, ಟಿಪ್ಪು ಸುಲ್ತಾನ್‌, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ ಮೊದಲಾದವರಿಗೆ ಸಂಬಂಧಿಸಿದ ಪಠ್ಯವನ್ನು ಕೈ ಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರ ಖಂಡನೀಯ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ರಾಜ್ಯದಲ್ಲಿ ಅಧಿಕೃತ ಸರ್ಕಾರ ದುರ್ಬಲಗೊಳ್ಳುತ್ತಿದೆ. ಅನಧಿಕೃತ ಸಂಘಿ ಸರ್ಕಾರ ಬಲಗೊಳ್ಳುತ್ತಿದೆ’ ಎಂದೂ ಕುಟುಕಿದ್ದಾರೆ.

‘ಪಾಠಗಳನ್ನು ಕೈಬಿಟ್ಟದ್ದರಲ್ಲಿ ಸರ್ಕಾರದ ಪಾತ್ರ ಇಲ್ಲ ಎಂದು ಸಚಿವ ಎಸ್. ಸುರೇಶ್‌ಕುಮಾರ್‌ ಹೇಳಿದ್ದಾರೆ. ಹಾಗಿದ್ದರೆ, ಕರ್ನಾಟಕ ಪಠ್ಯಪುಸ್ತಕ ಸಮಿತಿ ಸರ್ಕಾರಕ್ಕಿಂತಲೂ ಉನ್ನತ ಸಮಿತಿಯೇ. ಅದನ್ನು ತಕ್ಷಣ ವಾಪಸ್‌ ಪಡೆಯಿರಿ. ಇಲ್ಲದೇ ಇದ್ದರೆ ನಿಮ್ಮ ಪಾತ್ರ ಒಪ್ಪಿಕೊಳ್ಳಿ’ ಎಂದೂ ಕೆಣಕಿದ್ದಾರೆ. ‘ಕೊರೊನಾ ನಿಯಂತ್ರಿಸಲಾಗದ ಸರ್ಕಾರ ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಪಠ್ಯಪುಸ್ತಕಗಳನ್ನು ಕೇಸರೀಕರಣಗೊಳಿಸಿ ರಹಸ್ಯ ಕಾರ್ಯಸೂಚಿ ಅನುಷ್ಠಾನಗೊಳಿಸಲು ಹೊರಟಿದೆ. ಹೋರಾಟ ಅನಿವಾರ್ಯ ಆಗಬಹುದು’ ಎಂದೂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ದುರುದ್ದೇಶ ಅಡಗಿದೆ‌: ‘ಮಹಾಪುರುಷರ ಪಠ್ಯ ವಿಷಯವನ್ನೇ ಉದ್ದೇಶಪೂರ್ವಕವಾಗಿ ಕೈ ಬಿಟ್ಟಿರುವ ಸರ್ಕಾರದ ನಿರ್ಧಾರದ ಹಿಂದೆ ದುರುದ್ದೇಶ ಅಡಗಿದೆ’ ಎಂದು ಕಾಂಗ್ರೆಸ್ ಶಾಸಕ ಜಮೀರ್‌ ಅಹ್ಮದ್‌ ಹೇಳಿದ್ದಾರೆ.

‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯ ವರದಿ ಸಹಿತ ಟ್ವೀಟ್‌ ಮಾಡಿರುವ ಅವರು, ‘ವಿಶ್ವಪ್ರೇಮ ಸಾರಿದ ಪ್ರವಾದಿ ಮಹಮ್ಮದ್‌ರು, ಜೀಸಸ್‌ರಂಥ ದಿವ್ಯಚೇತನಗಳನ್ನು, ಸ್ವಾತಂತ್ರ್ಯಕ್ಕಾಗಿ ಮಡಿದ ಟಿಪ್ಪು ಸುಲ್ತಾನ್‌, ರಾಯಣ್ಣನಂಥ ವೀರ ಸೇನಾನಿಗಳನ್ನು ಪಠ್ಯಕ್ರಮದಿಂದ ಕೈಬಿಟ್ಟು ಭವಿಷ್ಯದ ಭಾರತಕ್ಕೆ ಏನನ್ನು ಕಲಿಸಲು ಹೊರಟಿದ್ದೀರಿ ಸುರೇಶ್‌ ಕುಮಾರ್‌ರವರೇ?
ಎಂದೂ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.