ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ ಹುದ್ದೆ ಭರ್ತಿ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಪೌರಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಸಂಬಂಧಿಸಿದಂತೆ ಪೌರಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಶುಕ್ರವಾರ ಸಭೆ ನಡೆಸಿದರು.
‘ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕರ 2,992 ಹುದ್ದೆಗಳ ಪೈಕಿ 492 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ವೇತನ ಅಡಿ ಪೌರಕಾರ್ಮಿಕರಾಗಿರುವವರು ಕೆಲಸ ಮಾಡುತ್ತಿದ್ದಾಗ ಮೃತಪಟ್ಟರೆ, ಅವರ ಅವಲಂಬಿತರಿಗೆ ₹10 ಲಕ್ಷ ಪರಿಹಾರವನ್ನು ನಗರ ಸ್ಥಳೀಯ ಸಂಸ್ಥೆಗಳ ಸ್ವಂತ ಸಂಪನ್ಮೂಲದಿಂದ ಭರಿಸಲು ಅನುಮೋದನೆ ನೀಡಲಾಗಿದೆ’ ಎಂದರು.
ಮನವಿ: ‘ರಾಜ್ಯದಲ್ಲಿರುವ 41,373 ಪೌರ ಕಾರ್ಮಿಕರ ಪೈಕಿ 29 ಸಾವಿರ ಮಂದಿಯ ಸೇವೆ ಕಾಯಂ ಆಗಿದೆ. ಉಳಿದವರ ಸೇವೆಯನ್ನೂ ಕಾಯಂ ಮಾಡಬೇಕು. 2023ರಲ್ಲಿ 12,800 ಪೌರ ಕಾರ್ಮಿಕರ ಸೂಪರ್ ನ್ಯೂಮರರಿ ಹುದ್ದೆಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಇವರಿಗೆ ಸೇವಾ ಭದ್ರತೆ ಇರುವುದಿಲ್ಲ. ಈ ಸೂಪರ್ ನ್ಯೂಮರರಿ ಹುದ್ದೆಗಳನ್ನು ರದ್ದುಪಡಿಸಿ ಕಾಯಂ ಹುದ್ದೆ ಸೃಜಿಸಬೇಕು’ ಎಂದು ಪೌರ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಬೇಡಿಕೆ ಇರಿಸಿದರು.
‘ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಒಳಚರಂಡಿ ಸಹಾಯಕ ಸ್ವಚ್ಛತಾ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿದ್ದು, ಅವರ ಸೇವೆಯನ್ನೂ ಕಾಯಂ ಮಾಡಬೇಕು. ನೇರ ವೇತನ ಅಡಿ ಪೌರಕಾರ್ಮಿಕರು ಮೃತಪಟ್ಟ ಸಂದರ್ಭ ಅವರ ಅವಲಂಬಿತ ಕುಟುಂಬ ದವರಿಗೆ ಅನುಕಂಪದ ಆಧಾರದಲ್ಲಿ ನೌಕರಿ, ಪರಿಹಾರ ಒದಗಿಸಬೇಕು. ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯನ್ನು ನೇರ ಪಾವತಿ ಕಾರ್ಮಿಕರು ಸೇರಿದಂತೆ ಎಲ್ಲಾ ಸ್ವಚ್ಛತಾ ಕಾರ್ಮಿಕರಿಗೂ ವಿಸ್ತರಿಸ ಬೇಕು. ನಗದು ರಹಿತ ಆರೋಗ್ಯ ಕಾರ್ಡ್ ನೀಡಬೇಕು’ ಎಂದು ಕೋರಿದರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಂ ಖಾನ್, ಶಾಸಕ ಎ.ಎಸ್. ಪೊನ್ನಣ್ಣ, ಅಂಜುಂ ಪರ್ವೇಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.