
ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸೊರಬ ಪುರಸಭೆ, ಆನವಟ್ಟಿ ಪಟ್ಟಣ ಪಂಚಾಯಿತಿಯ 40 ಪೌರಕಾರ್ಮಿಕರು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ 120 ವಿದ್ಯಾರ್ಥಿಗಳನ್ನು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೋಮವಾರ ಸನ್ಮಾನಿಸಿದರು.
ತಮ್ಮ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬರುವವರಿಗೆ ಶಿವಮೊಗ್ಗದಿಂದ ವಿಮಾನ ಪ್ರಯಾಣದ ಸೌಲಭ್ಯ ಕಲ್ಪಿಸಲಾಗಿತ್ತು. ಅವರಲ್ಲಿ ಬಹುತೇಕ ಎಲ್ಲರೂ ಇದೇ ಮೊದಲ ಬಾರಿ ವಿಮಾನ ಹತ್ತಿದವರು. ವಿದ್ಯಾರ್ಥಿಗಳ ಜತೆಗೆ ಅವರ ಪೋಷಕರಿಗೂ ವಿಮಾನಯಾನದ ಅನುಭವ ಸಿಕ್ಕಿತು.
ಒಂದು ಸರ್ತಿ ತಲಾ ಎಂಟು ಪೌರ ಕಾರ್ಮಿಕರನ್ನು ಸತ್ಕರಿಸಿದ ಮಧು ಬಂಗಾರಪ್ಪ, ನಂತರ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಸನ್ಮಾನಿಸಿದರು. ತಮ್ಮ ತವರು ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಸನ್ಮಾನದ ನಂತರ ಪ್ರತಿಯೊಂದು ತಂಡದವರು ಅವರ ಜತೆ ಕುಳಿತು ಫೋಟೊ ಕ್ಲಿಕ್ಕಿಸಿಕೊಂಡು ಸಂತಸಪಟ್ಟರು.
‘ಆನವಟ್ಟಿ ಪಟ್ಟಣ ಪಂಚಾಯಿತಿಯಲ್ಲಿ ಹಲವು ವರ್ಷಗಳಿಂದ ಸ್ವಚ್ಛತಾ ಕಾರ್ಯ ಮಾಡುತ್ತಿದ್ದೇನೆ. ಸ್ಥಳೀಯವಾಗಿ ಕೆಲ ಸಂಘಟನೆಗಳು ಗುರುತಿಸಿ, ಸನ್ಮಾನಿಸಿದ್ದವು. ಬೆಂಗಳೂರು ನೋಡಿದ್ದು ಇದೇ ಮೊದಲು. ಅದರಲ್ಲೂ ವಿಮಾನ ಹತ್ತುತ್ತೇನೆ ಎನ್ನುವ ಕನಸೂ ಇರಲಿಲ್ಲ. ವಿಮಾನದಲ್ಲಿ ಪ್ರಯಾಣ ಮಾಡಿದ್ದನ್ನು ನಂಬಲೂ ಆಗುತ್ತಿಲ್ಲ. ನನ್ನಂಥ 40 ಪೌರಕಾರ್ಮಿಕರು ವಿಮಾನಯಾನ ಮಾಡಿದ್ದು ಜೀವನದಲ್ಲೇ ಮರೆಯಲು ಸಾಧ್ಯವಿಲ್ಲ’ ಎಂದು ಪೌರಕಾರ್ಮಿಕರಾದ ರೇಖಾ ಆನಂದ ಭಾಷ್ಪ ಸುರಿಸಿದರು.
‘ಎಲ್ಲರಿಗೂ ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ನೆಹರೂ ತಾರಾಲಯ, ವಿಧಾನಸೌಧಕ್ಕೆ ಭೇಟಿ ನೀಡುತ್ತಿದ್ದೇವೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದಿದ್ದಕ್ಕೆ ಸಚಿವ ಮಧು ಬಂಗಾರಪ್ಪ ಅವರು ಇಷ್ಟೆಲ್ಲ ಮಾಡಿದ್ದಾರೆ. ಇದು ನನಗೆ ಸ್ಫೂರ್ತಿಯಾಗಿದೆ. ಮುಂದೆ ಇನ್ನಷ್ಟು ಚೆನ್ನಾಗಿ ಓದಿ ಉನ್ನತ ಸಾಧನೆ ಮಾಡುವೆ’ ಎಂದರು ಆನವಟ್ಟಿ ಕೆಪಿಎಸ್ ಶಾಲೆಯ ವಿದ್ಯಾರ್ಥಿನಿ ಸಂಜನಾ ವಿಜೇಂದ್ರ ಶೆಟ್ಟಿ, ಋಷಿಕೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.