ADVERTISEMENT

ದರ ಹೆಚ್ಚಳದ ಕರೆಂಟ್‌ ಶಾಕ್: ಹಿಂಬಾಕಿಯ ಭಾರವೂ ಸೇರಿ ಜೂನ್‌ ತಿಂಗಳ ಬಿಲ್‌ ಬಲು ದುಬಾರಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 1:35 IST
Last Updated 5 ಜೂನ್ 2023, 1:35 IST
   

ಬೆಂಗಳೂರು: ಪ್ರತಿ ಯೂನಿಟ್‌ ವಿದ್ಯುತ್‌ ದರದಲ್ಲಿ 70 ಪೈಸೆಯಷ್ಟು ಹೆಚ್ಚಳ ಮಾಡುವ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಆದೇಶ ಈ ತಿಂಗಳಿನಿಂದಲೇ ಜಾರಿಯಾಗಿದೆ. ಏಪ್ರಿಲ್‌ ತಿಂಗಳ ಹಿಂಬಾಕಿ ಹಾಗೂ ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚ ಹೊಂದಾಣಿಕೆಯ ಹಿಂಬಾಕಿಯೂ ಸೇರಿ ಈ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಗ್ರಾಹಕರಿಗೆ ಭಾರಿ ಹೊರೆ ಬೀಳಲಿದೆ.

ವಿದ್ಯುತ್‌ ಸರಬರಾಜು ಕಂಪನಿಗಳ (ಎಸ್ಕಾಂ) ವರಮಾನದ ಕೊರತೆ  ಸರಿದೂಗಿಸಲು ಪ್ರತಿ ಯೂನಿಟ್‌ ವಿದ್ಯುತ್‌ ದರವನ್ನು 70 ಪೈಸೆಯಷ್ಟು ಹೆಚ್ಚಳ ಮಾಡಲು ಒಪ್ಪಿಗೆ ನೀಡಿ ಕೆಇಆರ್‌ಸಿ ಮೇ 12ರಂದು ಆದೇಶ ಹೊರಡಿಸಿತ್ತು. ಆಯೋಗದ ನಿರ್ದೇಶನದಂತೆ ದರ ಹೆಚ್ಚಳವನ್ನು ಜೂನ್‌ನಿಂದ ಅನುಷ್ಠಾನಕ್ಕೆ ತರಲಾಗಿದೆ. ಬೆಸ್ಕಾಂ ಮಾತ್ರ ಈ ತಿಂಗಳು ಭಾಗಶಃ ದರ ಹೆಚ್ಚಳ ಮಾಡಿದ್ದರೆ, ಉಳಿದ ಎಲ್ಲ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ ಮಾಡಿವೆ.

ವಿದ್ಯುತ್‌ ದರ ಹೆಚ್ಚಳ ಏಪ್ರಿಲ್‌ 1ರಿಂದಲೇ ಪೂರ್ವಾನ್ವಯವಾಗಲಿದೆ. ಗ್ರಾಹಕರು ಏಪ್ರಿಲ್‌ ತಿಂಗಳಿನಲ್ಲಿ ಬಳಸಿರುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ 70 ಪೈಸೆಯಂತೆ ಹಿಂಬಾಕಿಯನ್ನು ಈ ತಿಂಗಳ ಬಿಲ್‌ನಲ್ಲಿ ‍ಪಾವತಿಸಬೇಕಿದೆ. ಎಲ್ಲ ಎಸ್ಕಾಂಗಳಲ್ಲಿ ವಿದ್ಯುತ್‌ ಬಿಲ್ಲಿಂಗ್‌ ಪ್ರಕ್ರಿಯೆ ಆರಂಭವಾಗಿದ್ದು, ಏಪ್ರಿಲ್‌ ತಿಂಗಳ ಹಿಂಬಾಕಿ ಸೇರಿಸಿ ಬಿಲ್‌ ನೀಡಲಾಗುತ್ತಿದೆ.

ADVERTISEMENT

ವೆಚ್ಚ ಹೊಂದಾಣಿಕೆಯ ಹೊರೆ: 2022ರ ಇಂಧನ ಮತ್ತು ವಿದ್ಯುತ್‌ ಖರೀದಿಯ ವೆಚ್ಚ ಹೊಂದಾಣಿಕೆಯ ಹಿಂಬಾಕಿಯನ್ನೂ ಈಗಲೇ ಗ್ರಾಹಕರಿಂದ ವಸೂಲಿ ಮಾಡಬೇಕಿದೆ. ಪ್ರತಿ ಎಸ್ಕಾಂನ ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚದ ಆಧಾರದಲ್ಲಿ ಈ ಮೊತ್ತ ನಿರ್ಧಾರವಾಗಿದೆ.

‘ಕೆಇಆರ್‌ಸಿ ಆದೇಶದಂತೆ ದರ ಪರಿಷ್ಕರಣೆ ನಡೆದಿದೆ. ಈ ತಿಂಗಳ ವಿದ್ಯುತ್‌ ಬಿಲ್‌ನಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ ₹2.50ರಿಂದ ₹3 ರವರೆಗೆ ಹೆಚ್ಚಳ ಆಗುವ ಸಾಧ್ಯತೆ ಇದೆ’ ಎಂದು ಇಂಧನ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.