ADVERTISEMENT

ಚುನಾವಣೆ ಫಲಿತಾಂಶಕ್ಕೆ ಮುನ್ನ ವಿದ್ಯುತ್ ದರ ಏರಿಕೆ: ಪ್ರತಿ ಯೂನಿಟ್‌ಗೆ 70 ಪೈಸೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಮೇ 2023, 12:27 IST
Last Updated 12 ಮೇ 2023, 12:27 IST
ವಿದ್ಯುತ್ ದರ ಏರಿಕೆ
ವಿದ್ಯುತ್ ದರ ಏರಿಕೆ   

ಬೆಂಗಳೂರು: ಮತದಾನ ಮುಗಿಯುವವರೆಗೆ ಮೌನವಾಗಿದ್ದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ), ರಾಜ್ಯದ ಭವಿಷ್ಯ ನಿರ್ಧರಿಸುವ ಮತ ಎಣಿಕೆಯ ಹಿಂದಿನ ದಿನವೇ ವಿದ್ಯುತ್ ಬಳಕೆಗೆ ವಿಧಿಸುವ ದರವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲು ಒಪ್ಪಿಗೆ ಸೂಚಿಸಿದೆ. ಏ‍ಪ್ರಿಲ್ 1ರಿಂದಲೇ ಹೊಸ ದರ ಪೂರ್ವಾನ್ವಯವಾಗಲಿದೆ.

ನಾಡಿನ ಜನರೆಲ್ಲ ಫಲಿತಾಂಶದ ಮೇಲೆ ಲಕ್ಷ್ಯ ಇಡುವ ಹೊತ್ತಿನಲ್ಲಿಯೇ ಕೆಇಆರ್‌ಸಿ ದರ ಏರಿಕೆಗೆ ಒಪ್ಪಿಗೆ ಸೂಚಿಸಿದೆ. ಸಾಮಾನ್ಯವಾಗಿ ಏಪ್ರಿಲ್ 1ರಿಂದ ಅನ್ವಯವಾಗುವಂತೆ ದರ ಹೆಚ್ಚಳವಾಗುತ್ತದೆ. ಚುನಾವಣೆ ಇದ್ದುದರಿಂದ ಕೆಇಆರ್‌ಸಿ ಈ ಪ್ರಕ್ರಿಯೆಯನ್ನು ಮುಂದೂಡಿತ್ತು. ಸರ್ಕಾರದ ಅವಧಿ ಮುಗಿದು, ಹೊಸ ಸರ್ಕಾರ ರಚನೆಯಾಗುವ ಸಂಕ್ರಮಣ ಕಾಲದಲ್ಲಿ ದರ ಏರಿಕೆ ಬಿಸಿ ಜನರನ್ನು ತಟ್ಟಲಿದೆ.

ಆದಾಯ ಕೊರತೆ ಎದುರಿಸುತ್ತಿರುವ ಎಸ್ಕಾಂಗಳ ಬೇಡಿಕೆಗೆ ಭಾಗಶಃ ಒಪ್ಪಿಗೆ ನೀಡಿರುವ ಕೆಇಆರ್‌ಸಿ, ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ವಿದ್ಯುತ್‌ ದರ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಪ್ರತಿ ಯೂನಿಟ್‌ಗೆ ₹1.39 ಹೆಚ್ಚಿಸುವಂತೆ (ಶೇ 16.83) ಎಸ್ಕಾಂಗಳು ಬೇಡಿಕೆ ಸಲ್ಲಿಸಿದ್ದವು. ಏಪ್ರಿಲ್‌ನಿಂದಲೇ ಗ್ರಾಹಕರ ಬಿಲ್‌ಗಳಲ್ಲಿ ಶೇ 8.31ರಷ್ಟು ಹೆಚ್ಚಳವಾಗಲಿದೆ.

ADVERTISEMENT

ಕಳೆದ ವರ್ಷ ಏಪ್ರಿಲ್‌ನಲ್ಲಿ ಪ್ರತಿ ಯೂನಿಟ್‌ಗೆ ಸರಾಸರಿ 35 ಪೈಸೆಯಷ್ಟು (ಶೇ 4.33) ವಿದ್ಯುತ್‌ ದರ ಹೆಚ್ಚಿಸಲಾಗಿತ್ತು. ನಂತರ, ಅಕ್ಟೋಬರ್‌ 1ರಂದು ಇಂಧನ ಹೊಂದಾಣಿಕೆ ಶುಲ್ಕವನ್ನು (ಎಫ್‌ಎಸಿ) ಪರಿಷ್ಕರಿಸಲಾಗಿತ್ತು. ಇದರಿಂದ, ವಿವಿಧ ಎಸ್ಕಾಂಗಳು ಪ್ರತಿ ಯೂನಿಟ್‌ಗೆ 24 ಪೈಸೆಯಿಂದ 43 ಪೈಸೆಯವರೆಗೆ ದರ ಹೆಚ್ಚಿಸಿದ್ದವು. ಬಳಿಕ, ಡಿಸೆಂಬರ್‌ನಲ್ಲಿ ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಮಾತ್ರ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತಗೊಳಿಸಲಾಗಿತ್ತು.

ಆದಾಯ ಕೊರತೆ ನೀಗಿಸುವ ಯತ್ನ: 2023–24ನೇ ಸಾಲಿಗೆ ಒಟ್ಟು ₹62,133 ಕೋಟಿಗಳ ವಾರ್ಷಿಕ ಆದಾಯ ದೊರೆಯುವ ಪ್ರಸ್ತಾವವನ್ನು ಎಸ್ಕಾಂಗಳು ಕೆಇಆರ್‌ಸಿಗೆ ಸಲ್ಲಿಸಿದ್ದವು. ಈ ಮೊತ್ತದಲ್ಲಿ ₹8,951 ಕೋಟಿ ಆದಾಯ ಕೊರತೆಯೂ ಸೇರಿತ್ತು.

ಆದಾಯದ ಕೊರತೆ ನೀಗಿಸಲು ಪ್ರತಿ ಯೂನಿಟ್‌ಗೆ ಸರಾಸರಿ ₹1.39 (ಪ್ರತಿ ಯೂನಿಟ್‌ಗೆ ₹1.20ರಿಂದ ₹1.46) ಹೆಚ್ಚಿಸುವಂತೆ ಕೋರಿದ್ದವು. 2021–22ನೇ ಸಾಲಿನಲ್ಲೇ ಎಸ್ಕಾಂಗಳಿಗೆ ₹2337.08 ಕೋಟಿ ಮೊತ್ತದಷ್ಟು ಆದಾಯ ಕೊರತೆಯಾಗಿತ್ತು.

ಈ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿದ್ದ ಆಯೋಗವು ₹58,109 ಕೋಟಿ ವಾರ್ಷಿಕ ಆದಾಯ ಸಂಗ್ರಹಿಸಲು ಅನುಮೋದನೆ ನೀಡಿದೆ.

ಆದಾಯ ಕೊರತೆ ಸರಿದೂಗಿಸಲು ಎಲ್ಲ ‘ಎಲ್‌ಟಿ’ ಮತ್ತು ‘ಎಚ್‌ಟಿ’ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ ಸರಾಸರಿ 70 ಪೈಸೆ ದರ ಹೆಚ್ಚಿಸಲು ಒಪ್ಪಿಗೆ ಸೂಚಿಸಿದೆ.

ನಗರ, ಗ್ರಾಮೀಣ ಒಂದೇ ವಿಭಾಗಕ್ಕೆ‌ದರ ನಿಗದಿಪಡಿಸುವುದನ್ನು ಸರಳಗೊಳಿಸುವ ನಿಟ್ಟಿನಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಗ್ರಾಹಕರನ್ನು ಒಂದೇ ವಿಭಾಗದಲ್ಲಿ ವಿಲೀನಗೊಳಿಸಲಾಗಿದೆ. ಆದರೆ, ಗ್ರಾಮೀಣ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 30 ಪೈಸೆ ರಿಯಾಯತಿ ನೀಡಲು ಆಯೋಗ ಅನುಮತಿ ನೀಡಿದೆ.

ಕೃಷಿ ಪಂಪ್‌ಸೆಟ್‌ಗೂ ಬೇಕು ‘ಆಧಾರ್’

ನೀರಾವರಿ ಪಂಪ್‌ಸೆಟ್‌ಗಳ ಆರ್‌ಆರ್‌ ಸಂಖ್ಯೆಗಳನ್ನು ಗ್ರಾಹಕರ ಆಧಾರ್‌ ಸಂಖ್ಯೆಯೊಂ
ದಿಗೆ ಆರು ತಿಂಗಳ ಒಳಗಾಗಿ ಲಿಂಕ್‌ ಮಾಡಬೇಕು ಎಂದು ಕೆಇಆರ್‌ಸಿ ಎಲ್ಲ ಎಸ್ಕಾಂಗಳಿಗೆ ನಿರ್ದೇಶನ ನೀಡಿದೆ.

‘ಆಧಾರ್‌’ ಸಂಖ್ಯೆ ಲಿಂಕ್‌ ಮಾಡದಿದ್ದರೆ ಸರ್ಕಾರವು ಸಹಾಯಧನವನ್ನು ಬಿಡುಗಡೆ ಮಾಡತಕ್ಕದ್ದಲ್ಲ ಎಂದು ಸೂಚಿಸಿದೆ.

ವಿವಿಧ ಯೋಜನೆಗಳಿಗೆ ₹14ಸಾವಿರ ಕೋಟಿ!

2023–24ನೇ ಸಾಲಿಗೆ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಮತ್ತು ನೀರಾವರಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ಸರಬರಾಜಿಗಾಗಿ ಎಸ್ಕಾಂಗಳಿಗೆ ಸರ್ಕಾರ ₹14,508.08 ಕೋಟಿ ಮೊತ್ತ ಪಾವತಿಸಬೇಕಾಗುತ್ತದೆ ಎಂದು ಕೆಇಆರ್‌ಸಿ ತಿಳಿಸಿದೆ.

ಎಸ್ಕಾಂಗಳ ಆದಾಯ ಕೊರತೆಗೆ ಪ್ರಮುಖ ಕಾರಣಗಳು

* 2021–22ಲ್ಲಿ ಆದಾಯ ಕೊರತೆ ಮೊತ್ತ ₹1,720.11 ಕೋಟಿ

* ಕಲ್ಲಿದ್ದಲು ಖರೀದಿ ಹಾಗೂ ಸಾಗಾಣಿಕೆ ವೆಚ್ಚ ಏರಿಕೆಯಿಂದ 2023–24ರಲ್ಲಿ ವಿದ್ಯುತ್‌ ಖರೀದಿಯಲ್ಲಿ ಶೇ 13ರಷ್ಟು ಹೆಚ್ಚಳವಾಗುವ ನಿರೀಕ್ಷೆ

* ನೌಕರರ ವೇತನ ಮತ್ತು ಭತ್ಯೆಯ ಶೇ 20ರಷ್ಟು ಪರಿಷ್ಕರಣೆ

* ಬಂಡವಾಳ ಹೂಡಿಕೆಯಲ್ಲಿ ಹೆಚ್ಚಳ

* ಬ್ಯಾಂಕ್‌ಗಳ ಸಾಲದ ಮೇಲಿನ ಬಡ್ಡಿ ದರಗಳಲ್ಲಿ ಹೆಚ್ಚಳ

ಹೊಸ ದರ: ಏನೇನು ನಿರ್ಧಾರ

* ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸಲು ಚಾರ್ಜಿಂಗ್‌ ಸ್ಟೇಷನ್‌ಗಳಲ್ಲಿನ ವಿದ್ಯುತ್‌ ಬಳಕೆ ಶುಲ್ಕವನ್ನು ಪ್ರತಿ ಯೂನಿಟ್‌ಗೆ ₹4.50ಕ್ಕೆ ಇಳಿಸಲಾಗಿದೆ. ಇದುವರೆಗೆ ಪ್ರತಿ ಯೂನಿಟ್‌ಗೆ ₹5 ಪಡೆಯಲಾಗುತ್ತಿತ್ತು.

* ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ ನೀಡುತ್ತಿರುವ 50 ಪೈಸೆ ರಿಯಾಯಿತಿಯನ್ನು ಇನ್ನೂ ಒಂದು ವರ್ಷ ಮುಂದುವರಿಸಲು ನಿರ್ಧರಿಸಲಾಗಿದೆ.

* ರಿಯಾಯಿತಿ ಇಂಧನ ದರ ಯೋಜನೆ (ಡಿಇಆರ್‌ಎಸ್‌) ಅಡಿಯಲ್ಲಿ ಪ್ರತಿ ಯೂನಿಟ್‌ಗೆ ನಿಗದಿಪಡಿಸಲಾಗಿದ್ದ ₹6 ವಿದ್ಯುತ್‌ ಬಳಕೆ ಶುಲ್ಕವನ್ನು ₹5ಕ್ಕೆ ಇಳಿಕೆ ಮಾಡಲಾಗಿದೆ. ಎಚ್‌.ಟಿ. ಗ್ರಾಹಕರಿಗೆ ಅನ್ವಯವಾಗುತ್ತಿದ್ದ ಈ ಯೋಜನೆಯನ್ನು ಈಗ 50 ಕಿಲೋ ವಾಟ್‌ ಮತ್ತು ಅದಕ್ಕಿಂತ ಹೆಚ್ಚು ಲೋಡ್‌ ಮಂಜೂರಾತಿ ಹೊಂದಿರುವ ಎಲ್‌.ಟಿ. ಕೈಗಾರಿಕೆ ಮತ್ತು ವಾಣಿಜ್ಯ ಸ್ಥಾವರಗಳಿಗೂ ವಿಸ್ತರಿಸಲಾಗಿದೆ.

* ಗೋಶಾಲೆಗಳಿಗೆ ಗೃಹ ಬಳಕೆ ದರವನ್ನು ನಿಗದಿಪಡಿಸಿರುವುದನ್ನು ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.