ADVERTISEMENT

ಕಳಪೆ ಪಿ‍ಪಿಇ ಕಿಟ್: ಸಿಬ್ಬಂದಿಗೆ ಆತಂಕ

ವಿಕ್ಟೋರಿಯಾ ಆಸ್ಪತ್ರೆ: ಜೀವ ಭಯದಲ್ಲಿಯೇ ರೋಗಿಗಳಿಗೆ ಸೇವೆ l ಸೋಂಕು ತಗುಲುವ ಆತಂಕ

​ಪ್ರಜಾವಾಣಿ ವಾರ್ತೆ
Published 14 ಜೂನ್ 2020, 20:04 IST
Last Updated 14 ಜೂನ್ 2020, 20:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಳಪೆ ಗುಣಮಟ್ಟದ ವೈಯಕ್ತಿಕ ಸುರಕ್ಷಾ ಸಾಧನಗಳನ್ನು (ಪಿಪಿಇ ಕಿಟ್‌) ತಮಗೆ ನೀಡಲಾಗಿದೆ ಎಂದು ಆರೋಪಿಸಿರುವ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ, ಸೇವೆಗೆ ಹಿಂದೇಟು ಹಾಕಲಾರಂಭಿಸಿದ್ದಾರೆ.

ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಶನಿವಾರ ರಾತ್ರಿ ಪಿಪಿಇ ಕಿಟ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಗುಣಮಟ್ಟದ ಕಿಟ್‌ಗಳನ್ನು ಒದಗಿಸಲು ಕೋರಿ ಆಸ್ಪತ್ರೆಯ ವಿಶೇಷ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ಭಾನುವಾರವೂ ತೀವ್ರ ನಿಗಾ ಘಟಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಅದೇ ಕಿಟ್‌ಗಳನ್ನು ಒದಗಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ ’ಈಗಾಗಲೇ ಆಸ್ಪತ್ರೆಯಲ್ಲಿ ಕೆಲ ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಸೋಂಕು ತಗುಲಿದೆ. ಇದಕ್ಕೆ ಕಳಪೆ ಗುಣಮಟ್ಟದ ಕಿಟ್‌ ಕಾರಣ. ಕಿಟ್‌ಗಳ ಒಳಗಡೆ ಸುಲಭವಾಗಿ ಗಾಳಿ ಬರಲಿದ್ದು, ಯಾವ ಭರವಸೆಯಲ್ಲಿ ಕೆಲಸ ಮಾಡಬೇಕು‘ ಎಂದು
ಪ್ರಶ್ನಿಸಿದ್ದಾರೆ.

‘ನಮ್ಮನ್ನು ಕೊರೊನಾ ವಾರಿಯರ್ಸ್ ಎಂದು ಗೌರವಿಸಿದಾಗ ಇನ್ನಷ್ಟು ಉತ್ಸಾಹದಿಂದ ಕಾರ್ಯನಿರ್ವಹಿಸಲು ಸಂಕಲ್ಪ ಮಾಡಿದ್ದೆವು. ಈಗ ಕಳ‍ಪೆ ಪಿಪಿಇ ಕಿಟ್‌ಗಳನ್ನು ನೀಡಲಾಗಿದೆ. ಉನ್ನತ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರೂ ಪ್ರಯೋಜನವಾಗಲಿಲ್ಲ’ ಎಂದು ವಿಕ್ಟೋರಿಯಾ ಆಸ್ಪತ್ರೆ ಶುಶ್ರೂಷಕರೊಬ್ಬರು
ಬೇಸರ ವ್ಯಕ್ತಪಡಿಸಿದರು.

ADVERTISEMENT

ಮೈ ಬೆವರುವುದಿಲ್ಲ: ‘ಎರಡು ಪದರದ ನಿಲುವಂಗಿ, ಪ್ಲಾಸ್ಟಿಕ್ ಏಪ್ರಾನ್ ಸೇರಿ ವಿವಿಧ ಸಾಧನಗಳನ್ನು ಧರಿಸಿ ಒಂದು ಪಾಳಿಯಲ್ಲಿ ಆರು ಗಂಟೆ ಕಾರ್ಯನಿರ್ವಹಿಸಬೇಕು. ಈ ಅವಧಿಯಲ್ಲಿ ಐಸೋಲೇಷನ್ ವಾರ್ಡ್‌ನಲ್ಲಿಯೇ ಇರುತ್ತೇವೆ. ಗುಣಮಟ್ಟದ
ಕಿಟ್‌ ಧರಿಸಿದರೆ ದೇಹ ಪೂರ್ತಿ ಬೆವರಿ, ಬಟ್ಟೆಗಳು ಅಂಟಿಕೊಳ್ಳುತ್ತವೆ. ಆದರೆ, ಈಗ ಬಳಕೆ ಮಾಡುತ್ತಿರುವ ಕಿಟ್ ಧರಿಸಿದಾಗ ಮೈ ಬೆವರುತ್ತಿಲ್ಲ. ಸರಾಗವಾಗಿ ಗಾಳಿಯಾಡುವುದೇ ಇದಕ್ಕೆ ಪ್ರಮುಖ ಕಾರಣ. ರೋಗಿಗಳು ಸೀನಿದಾಗ ಅಥವಾ
ಕೆಮ್ಮಿದಾಗ ಹೊರಹೊಮ್ಮುವ ತುಂತುರು ಹನಿಗಳು ನಮ್ಮ ದೇಹ ಪ್ರವೇಶಿಸುವ ಸಾಧ್ಯತೆಯಿದೆ’ ಎಂದು ತೀವ್ರ ನಿಗಾ ಘಟಕದ ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಡಾ. ಜಯಂತಿ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.