ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ಆರೋಪಿ ಪ್ರದೋಷ್‌ ಪುನಃ ಬೆಂಗಳೂರು ಜೈಲಿಗೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 15:44 IST
Last Updated 9 ಅಕ್ಟೋಬರ್ 2024, 15:44 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್‌ ಎಸ್.ರಾವ್ ಅವರನ್ನು ಪುನಃ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಿ’ ಎಂದು ಜೈಲು ಅಧಿಕಾರಿಗಳಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಈ ಸಂಬಂಧ ಪ್ರದೋಷ್‌ ಎಸ್‌.ರಾವ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದೆ.

‘ವಿಚಾರಣಾ ಕೈದಿಗಳನ್ನು ಬೇರೊಂದು ಜೈಲಿಗೆ ಸ್ಥಳಾಂತರ ಮಾಡಲು ಸೂಕ್ತ ಕಾರಣಗಳಿರಬೇಕು. ಅಂತೆಯೇ, ಅವರನ್ನು ಒಂದು ಜೈಲಿನಿಂದ ಮತ್ತೊಂದು ಜೈಲಿಗೆ ಸ್ಥಳಾಂತರ ಮಾಡುವುದು ಆಡಳಿತಾತ್ಮಕ ಕ್ರಮವಲ್ಲ. ಬದಲಾಗಿ ನ್ಯಾಯಾಂಗ ಮತ್ತು ಅರೆ ನ್ಯಾಯಾಂಗದ ಕಾರ್ಯ. ಈ ಪ್ರಕ್ರಿಯೆಯಲ್ಲಿ ಕೈದಿಯ ವಾದವನ್ನು ಆಲಿಸಲು ಸೂಕ್ತ ಕಾಲಾವಕಾಶ ಕೊಡಬೇಕಾಗುತ್ತದೆ. ಇಲ್ಲವಾದಲ್ಲಿ ಕೈದಿಯ ವಿರುದ್ದ ಪೂರ್ವಗ್ರಹ ಭಾವನೆ ಉಂಟಾಗುತ್ತದೆ. ಹೀಗಾಗಿ, ಕೈದಿಗಳನ್ನು ಸ್ಥಳಾಂತರ ಮಾಡುವ ಸಂದರ್ಭಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ತಮ್ಮ ವಿವೇಚನೆ ಬಳಸಬೇಕಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಬಿ.ಜೆ.ಹಿತೇಶ್‌ ಗೌಡ ವಾದ ಮಂಡಿಸಿದ್ದರು.

ADVERTISEMENT

ಪ್ರಕರಣವೇನು?: ರೇಣುಕ ಸ್ವಾಮಿ ಕೊಲೆ ಪ್ರಕರಣದ ಎರಡನೇ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರ ನಟ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಹ ಕೈದಿಗಳ ಜೊತೆ ಸಿಗರೇಟು ಮತ್ತು ಕಾಫಿ ಕುಡಿಯುತ್ತಿದ್ದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಆಗಿತ್ತು.

‘ರೌಡಿ ಶೀಟರ್‌ಗಳ ಜೊತೆ ದರ್ಶನ್‌ ಲೋಕಾಭಿರಾಮವಾಗಿ ಕುಳಿತಿದ್ದ ಫೋಟೊ ಪ್ರಕರಣದ ಇತರೆ ಸಾಕ್ಷಿಗಳ ನೈತಿಕ ಸ್ಥೈರ್ಯ ಕುಗ್ಗಿಸುತ್ತದೆ ಮತ್ತು ದರ್ಶನ್ ಅವರಿಗೆ ಜೈಲಿನಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತಿದೆ ಎಂದು ತಪ್ಪು ಕಲ್ಪನೆ ಸಾರ್ವಜನಿಕರಲ್ಲಿ ಮೂಡುವ ಸಾಧ್ಯತೆ ಇದೆ’ ಎಂದು ತಿಳಿಸಿದ್ದ ಜೈಲು ಅಧಿಕಾರಿಗಳು; ಈ ಫೋಟೊ ಹರಿದಾಡಿದ ನಂತರ ಎಲ್ಲ ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಅನುಮತಿ ಪಡೆದು ರಾಜ್ಯದ ವಿವಿಧ ಕಾರಾಗೃಹಗಳಿಗೆ ಸ್ಥಳಾಂತರ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.