ADVERTISEMENT

ಖರ್ಚೇ ಆಗದ ₹5,727 ಕೋಟಿ: ಪ್ರಲ್ಹಾದ ಜೋಶಿ

‘ಕೇಂದ್ರ ಪ‍್ರಾಯೋಜಿತ ಯೋಜನೆಯ ಅನುದಾನ ಬಳಸದ ರಾಜ್ಯ’

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 16:08 IST
Last Updated 13 ಫೆಬ್ರುವರಿ 2024, 16:08 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಬೆಂಗಳೂರು: ‘ಕೇಂದ್ರ ಸರ್ಕಾರ ಪ್ರಾಯೋಜಿತ ವಿವಿಧ ಯೋಜನೆಗಳಡಿ ಕರ್ನಾಟಕಕ್ಕೆ ನೀಡಿದ್ದ ₹5,727 ಕೋಟಿ ಖರ್ಚಾಗದೇ ಉಳಿದಿದೆ’ ಎಂದು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಅನುದಾನ ಕೊಡುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಆದರೆ, ನೀಡಿದ್ದ ಅನುದಾನದಲ್ಲಿ ಶೇ 34ರಷ್ಟು ಮೊತ್ತವನ್ನು ಖರ್ಚು ಮಾಡಿಲ್ಲ. ಇದು ರಾಜ್ಯ ಸರ್ಕಾರದ ಡ್ಯಾಶ್ ಬೋರ್ಡ್‌ನ ಮಾಹಿತಿ ಎಂದರು.

‘ರಾಜ್ಯದ ಕೃಷಿ ಇಲಾಖೆಗೆ ಕೊಟ್ಟ ಹಣವೂ ಸರಿಯಾಗಿ ವೆಚ್ಚಮಾಡಿಲ್ಲ. ಪಶು ಚಿಕಿತ್ಸಾಲಯ, ಪಶುಗಳಿಗೆ ಬೇಕಾದ ಔಷಧಿಗೆ ಬೇಡಿಕೆ ಇದೆ. ಈ ಉದ್ದೇಶಕ್ಕೆ ಕೇಂದ್ರ ಕೊಟ್ಟ ಅನುದಾನವನ್ನು ಸರಿಯಾಗಿ ಬಳಸಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ಬರ ಪರಿಹಾರಕ್ಕಾಗಿ ಎನ್‌ಡಿಆರ್‌ಎಫ್‌ನಡಿ ನಮ್ಮ ಸರ್ಕಾರದ ಅವಧಿಯಲ್ಲಿಯೇ ಹೆಚ್ಚಿನ ಅನುದಾನ ನೀಡಲಾಗಿದೆ. 2009-14ರ ಯುಪಿಎ ಎರಡನೇ ಅವಧಿಯಲ್ಲಿ ರಾಜ್ಯ ಸರ್ಕಾರ ₹29,097 ಕೋಟಿ ಕೇಳಿತ್ತು. ₹3,297 ಕೋಟಿಯನ್ನು ಕೇಂದ್ರ ಬಿಡುಗಡೆ ಮಾಡಿತ್ತು. ಇದು ಬೇಡಿಕೆ ಸಲ್ಲಿಸಿದ ಶೇ 10ರಷ್ಟು ಮೊತ್ತ ಮಾತ್ರ. ಎನ್‌ಡಿಎ ಆಡಳಿತದ 2014–24ರ ಅವಧಿಯಲ್ಲಿ ಸುಮಾರು ₹63,440 ಕೋಟಿಯಷ್ಟು ಪರಿಹಾರವನ್ನು ರಾಜ್ಯ ಸರ್ಕಾರ ಕೇಳಿದ್ದು, ₹13,378 ಕೋಟಿ ನೀಡಲಾಗಿದೆ ಎಂದು ಜೋಶಿ ಹೇಳಿದರು.

ಅನುದಾನ ಮತ್ತು ತೆರಿಗೆ ಹಂಚಿಕೆ ಪಾಲಿನ ವಿಷಯದಲ್ಲಿ ಯುಪಿಎ ಅವಧಿಗೆ ಹೋಲಿಸಿದರೆ, ಎನ್‌ಡಿಎ ಅವಧಿಯಲ್ಲಿ ಅತಿ ಹೆಚ್ಚಿನ ಮೊತ್ತ ರಾಜ್ಯಕ್ಕೆ ಹರಿದು ಬಂದಿದೆ. ವಾಸ್ತವವಾಗಿ ಸಿದ್ದರಾಮಯ್ಯನವರು ನರೇಂದ್ರ ಮೋದಿಯವರನ್ನು ಅಭಿನಂದಿಸಬೇಕಿತ್ತು. ಅವರು ಸುಳ್ಳುರಾಮಯ್ಯನಾಗಿರುವುದರಿಂದ ಸುಳ್ಳನ್ನೇ ಹೇಳುತ್ತಿದ್ದಾರೆ. ತಮ್ಮ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಒಳಜಗಳದಿಂದ ಗಮನವನ್ನು ಬೇರೆಡೆಗೆ ತಿರುಗಿಸಲು ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಯತ್ನ ಮಾಡುತ್ತಿದ್ದಾರೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.