ಬೆಂಗಳೂರು: ಜಾಗತಿಕ ಬದಲಾವಣೆಗೆ ದಿಕ್ಸೂಚಿಯಾಗುವ ಶಿಕ್ಷಣ, ಜ್ಞಾನ, ಸಂಶೋಧನೆಯತ್ತ ಗಮನ ಹರಿಸಬೇಕಾದ ಯುವ ಸಮೂಹ, ಜಾತಿ–ಧರ್ಮಗಳ ನಡುವೆ ವ್ಯತ್ಯಾಸ ಹುಡುಕುವುದರಲ್ಲೇ ಕಾಲಕಳೆಯುತ್ತಿದೆ. ಅಂತಹ ವಾತಾವರಣವನ್ನು ಪ್ರಸ್ತುತ ರಾಜಕಾರಣ ಸೃಷ್ಟಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಅರಮನೆ ಮೈದಾನದಲ್ಲಿ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಗಳಾದ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿರುವ ಎರಡು ದಿನಗಳ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ 70ರ ದಶಕದಲ್ಲಿ ಆರಂಭವಾದ ಶೈಕ್ಷಣಿಕ ಕ್ರಾಂತಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಹಬ್ ಆಗಿ ಬೆಂಗಳೂರು ಬೆಳೆಯಲು ಕಾರಣವಾಯಿತು. ಸಿಲಿಕಾನ್ ಸಿಟಿಯಷ್ಟೇ ಶಿಕ್ಷಣ ಕ್ಷೇತ್ರವೂ ಹೆಸರಾಗಿದೆ. ನಿರಂತರ ಬದಲಾವಣೆಗೆ ಹೊಂದಿಕೊಂಡು ಜಾಗತಿಕವಾಗಿಯೂ ಮುಂಚೂಣಿಯಲ್ಲಿದೆ. ಕಾಲಘಟ್ಟದ ಜತೆ ಹೆಜ್ಜೆ ಹಾಕುತ್ತಿರುವ ವೃತ್ತಿಪರ ಕೋರ್ಸ್‌ಗಳ ಉನ್ನತಿಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಕಳೆದ ಒಂದೂವರೆ ದಶಕಗಳಿಂದ ಆಯೋಜಿಸುತ್ತಿರುವ ಶೈಕ್ಷಣಿಕ ಮೇಳವೂ ಗಣನೀಯ ಕೊಡುಗೆ ನೀಡಿದೆ ಎಂದು ಶ್ಲಾಘಿಸಿದರು.
ಶೈಕ್ಷಣಿಕ ವ್ಯವಸ್ಥೆ ನಿರಂತರ ಬದಲಾವಣೆಗೆ ತೆರೆದುಕೊಳ್ಳುತ್ತಲೇ ಇರುತ್ತದೆ. ಜಾಗತಿಕ ಬದಲಾವಣೆಗೆ ತಕ್ಕಂತೆ ರಾಜ್ಯದ ವಿದ್ಯಾರ್ಥಿಗಳೂ ಸಾಗಬೇಕು. ಇಂದು ವಿಶ್ವದ ಎಲ್ಲಿಯಾದರೂ ಅಧ್ಯಯನ ನಡೆಸುವ ಅವಕಾಶಗಳು ವಿಫುಲವಾಗಿವೆ. ಶಿಕ್ಷಣ, ಸಂಶೋಧನೆಗಳ ಮೂಲಕ ಜಾಗತಿಕ ಬದಲಾಣೆಗೆ ಕರ್ನಾಟಕ ದಿಕ್ಸೂಚಿಯಾಗಬೇಕು. ದ್ವಿತೀಯ ಪಿಯು ನಂತರ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಭವಿಷ್ಯದ ಹೆಜ್ಜೆ ಗುರುತುಗಳು ಮೂಡಲಿವೆ ಎಂದು ಕಿವಿಮಾತು ಹೇಳಿದರು.
ರಾಜಕೀಯ ಪ್ರಭಾವಗಳಿಂದಾಗಿ ಭಾರತ ಇಂದು ಅಸಂತುಷ್ಟವಾಗಿರುವ ದೇಶಗಳ ಸಾಲಿನಲ್ಲಿ 118ನೇ ಸ್ಥಾನದಲ್ಲಿದೆ. ಕಲಿಕೆಯ ಮುಕ್ತ ಅವಕಾಶ, ಜೀವಿಸಲು ಬೇಕಾದ ನೆಮ್ಮದಿಯ ವಾತಾವರಣ, ಉತ್ತಮ ಕಾನೂನು ಸುವ್ಯವಸ್ಥೆ ನಿರ್ಮಾಣ ಮಾಡಬೇಕಾದುದು ಸರ್ಕಾರಗಳ ಕರ್ತವ್ಯ. ಆದರೆ, ಜನರು ಭಯದ ವಾತಾವರಣದಲ್ಲಿ ಇದ್ದಾರೆ. ಒತ್ತಡದ ಬದುಕು ಸಾಗಿಸುತ್ತಿದ್ದಾರೆ ಎಂದರು.
‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಪ್ರಸ್ತಾವಿಕ ಮಾತನಾಡಿದರು. ಟಿಪಿಎಂಎಲ್ ಸಿಒಒ ಕಿರಣ್ ಸುಂದರ್ ರಾಜನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.