ADVERTISEMENT

ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಯಶಸ್ವಿ

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ನಿಂದ ಎರಡು ದಿನ ನಡೆದ ಮೇಳ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 23:30 IST
Last Updated 7 ಏಪ್ರಿಲ್ 2024, 23:30 IST
<div class="paragraphs"><p>ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ 14ನೇ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ನಲ್ಲಿ ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ಉಪನ್ಯಾಸದ ವೇಳೆ ವಿಜ್ಞಾನದ ಪ್ರಯೋಗದ ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು. </p></div>

ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿದ್ದ 14ನೇ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ನಲ್ಲಿ ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರು ಉಪನ್ಯಾಸದ ವೇಳೆ ವಿಜ್ಞಾನದ ಪ್ರಯೋಗದ ಕುರಿತು ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಇಲ್ಲಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಾಗಿದ್ದ 14ನೇ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ವಿಯಾಯಿತು.

ADVERTISEMENT

ಶನಿವಾರ ಹಾಗೂ ಭಾನುವಾರ ನಡೆದ ಈ ಮೇಳದಲ್ಲಿ 60ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಪಾಲ್ಗೊಂಡಿದ್ದವು.

ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ವಿದ್ಯಾರ್ಥಿಗಳು, ಶೈಕ್ಷಣಿಕ ಮಾಹಿತಿ ಪಡೆದುಕೊಳ್ಳುವ ಜೊತೆಗೆ ಕೋರ್ಸ್‌ನ ಆಯ್ಕೆ, ಕೌನ್ಸೆಲಿಂಗ್‌, ಉದ್ಯೋಗದ ಅವಕಾಶ, ಪ್ರವೇಶ ಶುಲ್ಕ ಸೇರಿದಂತೆ ಇದ್ದ ಹಲವು ಬಗೆಯ ಅನುಮಾನಗಳನ್ನು ಸ್ಥಳದಲ್ಲೇ ಪರಿಹರಿಸಿಕೊಂಡು ಸಂತಸದಿಂದ ಮನೆಯತ್ತ ಹೆಜ್ಜೆ ಹಾಕಿದರು.

ಮಳಿಗೆಯತ್ತ ಧಾವಿಸುತ್ತಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಸ್ವಾಗತಿಸುತ್ತಿದ್ದ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಸಮಗ್ರ ವಿವರಗಳನ್ನೂ ನೀಡುತ್ತಿದ್ದರು. ಕಾಲೇಜಿಗೆ ಸಂಬಂಧಿಸಿದ ಸಮಗ್ರ ವಿವರಗಳಿದ್ದ ಸಂಸ್ಥೆಯ ಕೈಪಿಡಿ ನೀಡುತ್ತಿದ್ದರು.  

ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ಕೋರ್ಸ್‌ಗಳು ಹಾಗೂ ಕಾಲೇಜುಗಳ ವಿಶೇಷತೆಗಳ ಬಗ್ಗೆ ಮಾಹಿತಿಯನ್ನು ಶೈಕ್ಷಣಿಕ ಸಂಸ್ಥೆಗಳು ನೀಡಿದವು.

ಮೇಳದ ಅಂಗವಾಗಿ ನಡೆದ ಉಪನ್ಯಾಸದಲ್ಲಿ ಶಿಕ್ಷಣ ತಜ್ಞ ಗುರುರಾಜ ಕರಜಗಿ ಮಾತನಾಡಿ, ‘ಜ್ಞಾನ ಹಾಗೂ ಆತ್ಮವಿಶ್ವಾಸ ಇದ್ದರೆ ಯಾರೊಬ್ಬರು ತಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ’ ಎಂದು ಕಿವಿಮಾತು ಹೇಳಿದರು.

‘ಈಗ ಹತ್ತಾರು ಕೋರ್ಸ್‌ಗಳಿವೆ. ಎಲ್ಲರೂ ಹೋದ ಹಾದಿಯಲ್ಲಿ ತಾವೂ ಸಾಗಿದರೆ ಅವಕಾಶಗಳು ಸೀಮಿತವಾಗಲಿವೆ’ ಎಂದರು.

‘ಮನೆ ಕೆಲಸ, ಮರಗೆಲಸ ಮಾಡುವ ಕಾರ್ಮಿಕರಿಗೆ ಕೆಲಸ ಹೋಗುವ ಭೀತಿ ಇಲ್ಲ. ಅದೇ ಸ್ನಾತಕೋತ್ತರ ಪದವೀಧರರು ಈಗ ಕೆಲಸ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಹಾಗಿದ್ದರೆ ಈಗಿನ ಶಿಕ್ಷಣ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

‘ಆಯ್ಕೆ ಮಾಡಿಕೊಂಡ ಕೋರ್ಸ್‌ಕ್ಕಿಂತ ಲಭಿಸಿದ ಕೋರ್ಸ್‌ನಲ್ಲೇ ಉತ್ತಮ ಸಾಧನೆ ಮಾಡುವುದು ಮುಖ್ಯವಾಗಲಿದೆ. ಜ್ಞಾನದ ಜೊತೆಗೆ ಕೌಶಲ ಇರಬೇಕು’ ಎಂದು ಪ್ರತಿಪಾದಿಸಿದರು.

ಎರಡನೇ ದಿನವೂ ಮೇಳದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗಾಗಿ ಸಿ.ಇ.ಟಿ, ಕಾಮೆಡ್‌–ಕೆ ಅಣಕು ಪರೀಕ್ಷೆ ನಡೆಯಿತು. ಹೆಚ್ಚು ಅಂಕ ಪಡೆದವರಿಗೆ ಬಹುಮಾನ ವಿತರಣೆ ಮಾಡಲಾಯಿತು.

ಮಾಧ್ಯಮ ಕ್ಷೇತ್ರದಲ್ಲೂ ಹೇರಳ ಅವಕಾಶ

‘ಈಗಿನ ಯುವಜನರು ಎಂಜಿನಿಯರ್ ಹಾಗೂ ಮೆಡಿಕಲ್‌ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬಿ.ಇ ವ್ಯಾಸಂಗ ಮಾಡಿದರೂ ಉತ್ತಮ ಸಂವಹನ ಕೌಶಲವಿದ್ದರೆ ಮಾಧ್ಯಮ ಕ್ಷೇತ್ರದಲ್ಲೂ ಕೆಲಸ ಮಾಡಬಹುದು. ಟಿ.ವಿಗಳಲ್ಲಿ ನಿರೂಪಕರಾಗಿ ಎಫ್‌ಎಂಗಳಲ್ಲಿ ಆರ್‌.ಜೆಗಳಾಗಿಯೂ ಕೆಲಸ ಮಾಡಬಹುದು. ಇದರಿಂದ ಸಂಪಾದನೆ ಜೊತೆಗೆ ಪ್ರಸಿದ್ಧಿ ಪಡೆಯಬಹುದಾಗಿದೆ’ ಎಂದು ರೆಡಿಯೊ ಸಿಟಿಯ ಆರ್‌ಜೆ ರಾಜಸ್‌ ಅವರು ಹೇಳಿದರು.

ಗುರುರಾಜ ಕರಜಗಿ

ಶಿಕ್ಷಣ ಸಂಸ್ಥೆಗಳ ಮಳಿಗೆಯಿಂದ ಮಾಹಿತಿ ಪಡೆದುಕೊಂಡ ವಿದ್ಯಾರ್ಥಿಗಳು.

ಶಿಕ್ಷಣ ಸಂಸ್ಥೆಗಳ ಮಳಿಗೆಯಿಂದ ಮಾಹಿತಿ ಪಡೆದುಕೊಂಡ ವಿದ್ಯಾರ್ಥಿಗಳು.

ಸಿ.ಇ.ಟಿಯನ್ನು ಎದುರಿಸುವುದು ಹೇಗೆ ಕಾಲೇಜು ಆಯ್ಕೆ ಹೇಗಿರಬೇಕು ಎಂಬ ಮಾಹಿತಿ ಶೈಕ್ಷಣಿಕ ಮೇಳದಿಂದ ಲಭಿಸಿತು. ಉತ್ತಮ ಪ್ರಯೋಗಾಲಯ ಹೊಂದಿರುವ ಕಾಲೇಜುಗಳು ಯಾವುವಿವೆ ಎಂಬ ಮಾಹಿತಿ ದೊರೆಯಿತು.
–ಆರ್‌.ಸೇವಿತಾ, ಕೇಂದ್ರೀಯ ವಿದ್ಯಾಲಯ (ಐಐಎಸ್‌ಸಿ ಕ್ಯಾಂಪಸ್‌) ಯಶವಂತಪುರ
ಸಿಇಟಿ ಹಾಗೂ ನೀಟ್‌ ಪರೀಕ್ಷೆ ತೆಗೆದುಕೊಂಡಿದ್ದೇನೆ. ಎರಡು ಪರೀಕ್ಷೆಗೂ ಸಿದ್ಧತೆ ನಡೆಸಿದ್ದು ಕೆಲವು ಗೊಂದಲಗಳಿದ್ದವು. ಮೇಳಕ್ಕೆ ಭೇಟಿ ನೀಡಿದ ಮೇಲೆ ಅನುಮಾನಕ್ಕೆ ಪರಿಹಾರ ಸಿಕ್ಕಿತು.
–ಮೌಲ್ವಿಕಾ, ಬೇಸ್ ಪಿಯು ಕಾಲೇಜು ಪಶ್ಚಿಮ ಕಾರ್ಡ್‌ ರಸ್ತೆ ರಾಜಾಜಿನಗರ
ಪಿಯು ವ್ಯಾಸಂಗ ಮಾಡಲು ಯಾವ ಕಾಲೇಜು ಸೂಕ್ತ ಎಂಬುದು ಗೊತ್ತಾಯಿತು. ಶುಲ್ಕದ ವಿವರನ್ನೂ ಪಡೆದುಕೊಂಡಿದ್ದೇನೆ. ಒಂದೇ ಸ್ಥಳದಲ್ಲಿ ಎಲ್ಲ ಮಾಹಿತಿ ಸಿಕ್ಕಿದ್ದರಿಂದ ಹೆಚ್ಚಿನ ಅನುಕೂಲ ಆಯಿತು.–ರಿಲೇಕಾ ಚಂದ್ರಾಲೇಔಟ್ ಕೌನ್ಸೆಲಿಂಗ್‌ ಎದುರಿಸಲು ಸಹಾಯ ಕಳೆದ ಸಾಲಿನಲ್ಲಿ ಯಾವ್ಯಾವ ರ್‍ಯಾಂಕ್‌ಗೆ ಯಾವ ಕಾಲೇಜಿನಲ್ಲಿ ಸೀಟು ಲಭಿಸಿತು ಎಂಬುದನ್ನು ತಿಳಿದುಕೊಂಡಿದ್ದೇನೆ. ಇದರಿಂದ ಕೌನ್ಸೆಲಿಂಗ್ ಎದುರಿಸಲು ಅನುಕೂಲ ಆಗಲಿದೆ.
– ಪುನೀತ್‌, ಶೇಷಾದ್ರಿಪು, ಪಿಯು ಕಾಲೇಜು
ಹೊಸ ಕೋರ್ಸ್‌ ಹೊಸದಾಗಿ ಯಾವ ಕೋರ್ಸ್‌ಗಳನ್ನು ಪರಿಚಯಿಸಲಾಗಿದೆ. ಯಾವುದಕ್ಕೆ ಹೆಚ್ಚಿನ ಸ್ಕೋಪ್‌ ಇದೆ ಎಂಬುದು ಇಲ್ಲಿಗೆ ಬಂದಿದ್ದರಿಂದ ತಿಳಿಯಿತು.  ಮೇಳ ಆಯೋಜಿಸಿದ್ದಕ್ಕೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ಗೆ ಧನ್ಯವಾದಗಳು.
–ಕಣವಿ, ವಕೀಲ ಯಲಹಂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.