ADVERTISEMENT

ಪ್ರಜಾವಾಣಿ ಸಂವಾದ: ‘ಮಾಧ್ಯಮ–ಸರ್ಕಾರ–ಉದ್ಯಮ ಒಗ್ಗೂಡಿದರೆ ಅಪಾಯ’

ಮಾಧ್ಯಮ ಸ್ವಾತಂತ್ರ್ಯ: ಇಕ್ಕಟ್ಟು - ಬಿಕ್ಕಟ್ಟು ಸಂವಾದ

ಪ್ರಜಾವಾಣಿ ವಿಶೇಷ
Published 1 ಜುಲೈ 2021, 20:16 IST
Last Updated 1 ಜುಲೈ 2021, 20:16 IST
ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಚರ್ಚೆ
ಪ್ರಜಾವಾಣಿ ಫೇಸ್‌ಬುಕ್‌ ಲೈವ್‌ನಲ್ಲಿ ಚರ್ಚೆ   

ಬೆಂಗಳೂರು: ‘ಮಾಧ್ಯಮ, ಸರ್ಕಾರ ಮತ್ತು ಉದ್ಯಮಗಳು ಮೂರು ಕಬ್ಬಿಣದ ಸಲಾಕೆಯಂತೆ ತ್ರಿಕೋನದ ಮಾದರಿಯಲ್ಲಿ ದೇಶದ ಕುತ್ತಿಗೆಯನ್ನು ಹಿಸುಕುತ್ತಿವೆ. ಈ ಮೂರು ಒಗ್ಗೂಡಿದರೆ ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯಲಿವೆ. ಸಾಮಾಜಿಕ ಮಾಧ್ಯಮಗಳು ವಿರೋಧಿಗಳ ಮೇಲೆ ದಾಳಿ ನಡೆಸುವ ಸೇನೆಯಂತೆ ಕಾರ್ಯನಿರ್ವಹಿಸುತ್ತಿರುವ ಈ ಸಂದರ್ಭದಲ್ಲಿ, ಸಂಘಟಿತ ಮಾಧ್ಯಮಗಳು ಅಧಿಕೃತ ಮಾಹಿತಿ ನೀಡುವ ಮೂಲಕ ತಮ್ಮ ಶ್ರೇಷ್ಠತೆಯನ್ನು, ಪ್ರಾಬಲ್ಯವನ್ನು ಮುನ್ನೆಲೆಗೆ ತರಬೇಕಿದೆ...’

‘ಮಾಧ್ಯಮ ಸ್ವಾತಂತ್ರ್ಯ: ಇಕ್ಕಟ್ಟು–ಬಿಕ್ಕಟ್ಟು’ ಎಂಬ ವಿಷಯ ಕುರಿತು ‘ಪ್ರಜಾವಾಣಿ’ ಗುರುವಾರ ಏರ್ಪಡಿಸಿದ್ದ ಸಂವಾದದಲ್ಲಿ ಗಣ್ಯರು ವ್ಯಕ್ತಪಡಿಸಿದ ಅಭಿಪ್ರಾಯವಿದು.

ಮಾಧ್ಯಮಗಳಿಗೂ ಬೇಕು ವೈದ್ಯರು!
ಇಂದು ಮಾಧ್ಯಮಗಳಿಗೂ ವೈದ್ಯರು ಬೇಕಾಗಿದ್ದಾರೆ. ಈ ಕ್ಷೇತ್ರಕ್ಕೂ ಶುಶ್ರೂಷೆ, ಚಿಕಿತ್ಸೆ ಅಗತ್ಯವಿದೆ. ಇದು ಮಾಧ್ಯಮ ಮಹಾಪೂರದ ಯುಗ. ಮಾಧ್ಯಮ ಸ್ವಾತಂತ್ರ್ಯ ಎನ್ನುವುದು ಅಗತ್ಯಕ್ಕಿಂತ ಹೆಚ್ಚೇ ಆಗಿದೆ. ಒಂದೆಡೆ, ಅನಗತ್ಯ ಮತ್ತು ಅನಧಿಕೃತ ಮಾಹಿತಿಯ ಮಹಾಪೂರವೇ ಹರಿಯುತ್ತಿದ್ದರೆ, ಇನ್ನೊಂದೆಡೆ ಅಧಿಕೃತ ಮಾಹಿತಿಯ ಬರವಿದೆ. ಮಾಧ್ಯಮಗಳು ಕನ್ನಡಿಯಂತೆ ಇರಬೇಕು ಎಂಬುದಕ್ಕಿಂತ ಹೆಚ್ಚಾಗಿ, ಕನ್ನಡಿಯ ಹಿಂದಿನ ಅಂದರೆ, ಸರ್ಕಾರ ಅಥವಾ ಸಂಸ್ಥೆಗಳು ಮುಚ್ಚಿಟ್ಟಿರುವ ವಿಷಯವನ್ನು ಹೊರ ತೆಗೆಯಬೇಕಾದುದೇ ಸುದ್ದಿ ಆಗಬೇಕು. ಜಾಹೀರಾತು ಕೊಡುವ ಮೂಲಕ ಅಥವಾ ಮಾಧ್ಯಮ ಸಂಸ್ಥೆಗಳ ಮಾಲೀಕರನ್ನು ಯಾವುದೇ ಕಾರಣ ನೀಡಿ ಬಂಧಿಸುವ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನಗಳೂ ನಡೆಯುತ್ತಿವೆ. ಅಲ್ಲದೆ, ಈಗ ಪರ್ಯಾಯ ಮಾಧ್ಯಮಗಳನ್ನು ಹುಟ್ಟು ಹಾಕುವ ಮೂಲಕವೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಲಾಗುತ್ತಿದೆ.

ADVERTISEMENT

ನ್ಯೂಸ್‌ ಪ್ರಿಂಟ್‌ಗಳ ಪೂರೈಕೆಯನ್ನು ಸ್ಥಗಿತಗೊಳಿಸುವ ಮೂಲಕ ಪತ್ರಿಕೆಗಳಿಗೆ ಕಡಿವಾಣ ಹಾಕುವ ಕೆಲಸವನ್ನು ಆಗಿನ ಪ್ರಧಾನಿ ಇಂದಿರಾ ಗಾಂಧಿ ಮಾಡಿದ್ದರು. ಪತ್ರಿಕೆಗಳ ಮೇಲೆ ನಿರ್ಬಂಧ ವಿಧಿಸುವ ಕೆಲಸ ಶುರುವಾಗಿದ್ದೇ ಆಗ. ಈಗ ಸರ್ಕಾರ ಮತ್ತು ಉದ್ಯಮದೊಂದಿಗೆ ಮಾಧ್ಯಮವು ಹೊಂದಿಕೊಂಡು ಹೋಗಬೇಕೆನೋ ಎಂಬ ಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಸಂಘಟಿತ ಮಾಧ್ಯಮಗಳು ತಮ್ಮ ಪ್ರಾಬಲ್ಯವನ್ನು, ಶ್ರೇಷ್ಠತೆಯನ್ನು ಮೆರೆಯಬೇಕು. ತನಿಖಾ ಪತ್ರಿಕೋದ್ಯಮ ಹೆಚ್ಚಾಗಬೇಕು.
-ನಾಗೇಶ ಹೆಗಡೆ,ಹಿರಿಯ ಪತ್ರಕರ್ತ, ಅಂಕಣಕಾರ

ರಾಜನರ್ತಕಿಯಂತಾದ ಮಾಧ್ಯಮ!
ಇಂದಿನ ಮಾಧ್ಯಮಗಳು ರಾಜನರ್ತಕಿಯರಂತಾಗಿವೆ. ಅಂದರೆ, ಸರ್ಕಾರದ ಪರ ಒಲವು ಹೆಚ್ಚಾಗಿರುವಂತಹ ಮಾಧ್ಯಮ ಸಂಸ್ಥೆಗಳೇ ಅಧಿಕ ಸಂಖ್ಯೆಯಲ್ಲಿವೆ. ಅದೇ ರೀತಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಹುತೇಕರು ವಕೀಲರು ಮಾತ್ರವಲ್ಲ, ನ್ಯಾಯಾಧೀಶರಂತೆಯೂ ತೀರ್ಪು ನೀಡುವ ಸನ್ನಿವೇಶಗಳನ್ನು ಕಾಣುತ್ತಿದ್ದೇವೆ. ವಿರೋಧಿಗಳ ಮೇಲೆ ಸೇನೆಯಂತೆ ದಾಳಿ ಮಾಡಲಾಗುತ್ತಿದೆ. ಸಂಘಟಿತ ಮಾಧ್ಯಮ ಅಥವಾ ಪ್ರಭಾವಶಾಲಿ ಮಾಧ್ಯಮ ಸಂಸ್ಥೆಗಳೂ ಅವುಗಳ ಮಾಲೀಕರ ಒಲವು–ನಿಲುವಿಗೆ ತಕ್ಕಂತೆ ಕೆಲಸ ಮಾಡುತ್ತಿವೆ. ಆ ಮಾಲೀಕರ ನಿಲುವಿಗೆ ವಿರುದ್ಧವಾದ ಪತ್ರಕರ್ತ ಅಲ್ಲಿ ಇರಲು ಸಾಧ್ಯವಿಲ್ಲ.

‌ಪತ್ರಿಕೆ ಅಥವಾ ಸುದ್ದಿ ಸಂಸ್ಥೆ ಕನ್ನಡಿಯಂತೆ ಇರಬೇಕು ಹೌದು. ಆದರೆ, ಆ ಕನ್ನಡಿಯನ್ನು ನಾವು ಯಾವ ಕಡೆಗೆ ಇಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಒಂದು ಗಾಳಿ ಸುದ್ದಿಯು ಒಬ್ಬನನ್ನು ವಿದ್ವಾಂಸನನ್ನಾಗಿಸಬಹುದು. ಮಾಧ್ಯಮ ಸ್ವಾತಂತ್ರ್ಯಮತ್ತು ಮಾಧ್ಯಮ ನಿರ್ಬಂಧದ ನಡುವೆ ದೊಡ್ಡ ಕಂದಕವೇ ಇದೆ. ವಿವಾದಾತ್ಮಕ ವಿಷಯ ಪ್ರಸಾರವೇ ಮಾಧ್ಯಮ ಸ್ವಾತಂತ್ರ್ಯ ಅಲ್ಲ. ಅದೇ ರೀತಿ, ಜನರಿಗೆ ಆಗುವ ಸಮಸ್ಯೆಯನ್ನು ತೋರಿಸದಿದ್ದರೆ ಅದು ಮಾಧ್ಯಮವೇ ಅಲ್ಲ. ಸತ್ಯವನ್ನು ಹೇಳುವುದಕ್ಕೆ ಸ್ವಾತಂತ್ರ್ಯವಿದೆ. ಆದರೆ, ಸುಳ್ಳು ಹೇಳಲು ಅಲ್ಲ. ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಸಂವಿಧಾನದಲ್ಲಿನ ಅಂಶಗಳನ್ನು ಪದೇ ಪದೇ ಉಲ್ಲೇಖಿಸುವುದಕ್ಕಿಂತ, ಸಂವಿಧಾನದಲ್ಲಿನ ಆಶಯಗಳನ್ನು ಅನುಷ್ಠಾನಕ್ಕೆ ತಂದು ಪಾಲಿಸುವುದು ಹೆಚ್ಚು ಮುಖ್ಯವಾಗುತ್ತದೆ.
-ಎನ್.ಎಸ್. ಶಂಕರ್,ಚಲನಚಿತ್ರ ನಿರ್ದೇಶಕ, ಮಾಧ್ಯಮ ತಜ್ಞ

‘ಪಕ್ಷ–ಸಿದ್ಧಾಂತವೇ ಮುಖ್ಯವಾಗಬಾರದು’
ಮಾಧ್ಯಮ ಸ್ವಾತಂತ್ರ್ಯ ಎನ್ನುವುದು ಕೆಲವೊಮ್ಮೆ ಸ್ವೇಚ್ಛಾಚಾರವೂ ಎನಿಸುತ್ತಿದೆ. ಆಯಾ ಮಾಲೀಕತ್ವದ ಅಡಿ ಗುಲಾಮತನಕ್ಕೆ ಒಳಗಾಗಿದೆಯೇನೋ ಎಂಬ ಅನುಮಾನವೂ ಬರುತ್ತದೆ. ಮಾಧ್ಯಮ ಎನ್ನುವುದು ಕನ್ನಡಿಯಂತಿರಬೇಕು. ಸತ್ಯವನ್ನು ಸತ್ಯ, ಸುಳ್ಳನ್ನು ಸುಳ್ಳು ಎಂದು ತೋರಿಸಬೇಕು. ಅದು ವಿರೋಧ ಪಕ್ಷದಂತೆಯೂ ಇರಬಾರದು, ಆಡಳಿತ ಪಕ್ಷದಂತೆಯೂ ಇರಬಾರದು.

ಮಾಧ್ಯಮಗಳು ಒಂದು ಪಕ್ಷ, ಸಿದ್ಧಾಂತಕ್ಕೆ ಪೂರಕವಾಗಿ ಕೆಲಸ ಮಾಡಬಾರದು. ಒಂದು ಸಿದ್ಧಾಂತಕ್ಕೆ ವಿರುದ್ಧವಾದ ಸುದ್ದಿ ಆ ಪತ್ರಿಕೆಯಲ್ಲಿ ಬಂದರೆ ಓದುಗರು ಪತ್ರಿಕೆ ತರಿಸುವುದನ್ನೇ ನಿಲ್ಲಿಸಿ ಬಿಡಬಹುದು ಎಂದು ಯೋಚಿಸುವ ಮಾಲೀಕರೂ ಇದ್ದಾರೆ. ಸರಿಯಾದದ್ದನ್ನು ಸರಿ ಎಂದು ಹೇಳುವ ನೈತಿಕತೆ ಇರಬೇಕು. ಮಾಧ್ಯಮ ಸ್ವಾತಂತ್ರ್ಯಕ್ಕೆ ಕೆಲವೊಂದು ನಿರ್ಬಂಧಗಳು ಇವೆ ಎಂದು ಸಂವಿಧಾನವೇ ಹೇಳಿದೆ. ಅದರ ಪಾಲನೆಯೂ ಆಗಬೇಕು.

ಮೊದಲ ಡೋಸ್‌ ಕೋವಿಡ್‌ ಲಸಿಕೆ ನೀಡಲು ಪ್ರಾರಂಭಿಸಿದಾಗ ಅದರ ವಿರುದ್ಧ 200ಕ್ಕೂ ಹೆಚ್ಚು ಲೇಖನಗಳು ಪ್ರಕಟವಾದವು. ಪ್ರಧಾನಿಯನ್ನು ವಿರೋಧಿಸುವ ಉದ್ದೇಶವೇ ಇಲ್ಲಿ ಮುಖ್ಯವಾಗಿತ್ತು. ಆದರೆ, ಈಗ ಲಸಿಕೆ ಎಷ್ಟು ಅಗತ್ಯ ಎಂಬುದು ಗೊತ್ತಾಗುತ್ತಿದೆ. ರಾಜಕೀಯ ಸಿದ್ಧಾಂತ ಅಥವಾ ‘ಇಸಂ‘ಗಳು ಮುಖ್ಯವಾದಾಗ ಇಂತಹ ಸಾಮಾಜಿಕ ಕಳಕಳಿಯ ಅಂಶವನ್ನೂ ವಿರೋಧಿಸುವ ಕೆಲಸ ನಡೆಯುತ್ತದೆ. ಅದು ಸರಿಯಲ್ಲ. ಕೆಲವು ವಿಷಯಗಳಲ್ಲಿ ಮಾಧ್ಯಮಗಳೂ ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕಾಗುತ್ತದೆ.
-ಬಿ.ವಿ. ವಸಂತಕುಮಾರ್,ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.