ADVERTISEMENT

ಫೋನ್‌ ಇನ್‌ನಲ್ಲಿ ಕೆಎಎಸ್‌ ಸಾಧಕರು ಹೇಳುತ್ತಾರೆ; ಕೇಳಿ...

‘ಪ್ರಜಾವಾಣಿ’ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಯುವಜನರ ಮನ ಗೆದ್ದ ಸ್ಟೆಲ್ಲಾ, ಅಂಬಾದಾಸ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 9:17 IST
Last Updated 4 ಜನವರಿ 2020, 9:17 IST
   

ಕಲಬುರ್ಗಿ: ಐಎಎಸ್‌, ಕೆಎಎಸ್‌ ಸೇರಿದಂತೆ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮ ಪರೀಕ್ಷೆಗಳಲ್ಲಿ ಹೇಗೆ ಯಶಸ್ಸು ಸಾಧಿಸಬೇಕು ಎಂಬ ಬಗ್ಗೆ ‘ಪ್ರಜಾವಾಣಿ’ ಕಲಬುರ್ಗಿ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ‘ನೇರ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಕರೆಗಳ ಮಹಾಪೂರವೇ ಹರಿದುಬಂತು.

ಉಪವಿಭಾಗಾಧಿಕಾರಿ ಆಗಿ ನೇಮಕಗೊಂಡ ಕಲಬುರ್ಗಿಯ ಸ್ಟೆಲ್ಲಾ ವರ್ಗೀಸ್‌ ಹಾಗೂ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾಗಿ ನೇಮಕವಾದ ಅಂಬಾದಾಸ್‌ ಕಾಂಬಳೆ ಅವರು ಎಲ್ಲ ಕರೆಗಳಿಗೂ ಜ್ಞಾನಭರಿತ, ನಿಖರವಾದ ಉತ್ತರಗಳನ್ನು ನೀಡಿದರು. ಕಲ್ಯಾಣ ಕರ್ನಾಟಕವೂ ಸೇರಿದಂತೆ ರಾಜ್ಯದ ಮೂಲೆಮೂಲೆಗಳಿಂದ ಕೆಎಎಸ್, ಐಎಎಸ್‌ ಪರೀಕ್ಷೆ ಬರೆಯಲು ಬಯಸುವ ಹಲವಾರು ಮಂದಿ ಕರೆ ಮಾಡಿ, ಉತ್ತರ ಪಡೆದರು. ಇದರ ಫೇಸ್‌ಬುಕ್‌ ಲೈವ್‌ (facebook.com/prajavani.net) ನಲ್ಲಿ ಕೂಡ ಅಭೂತಪೂರ್ವ ಸಂವಾದ ಏರ್ಪಟ್ಟಿತು.

‘ಲೋಕಸೇವಾ ಆಯೋಗದ ಪರೀಕ್ಷೆಗಳಲ್ಲಿ ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದವರು ಹಾಗೂ ಹಣವಂತರು ಮಾತ್ರ ನೇಮಕವಾಗಲು ಸಾಧ್ಯ ಎಂಬುದು ಭ್ರಮೆ. ಇದರಿಂದ ಹೊರಬಂದು ನಿರಂತರ ಓದು ರೂಢಿಸಿಕೊಂಡರೆ ಯಾರೆಲ್ಲರಿಗೂ ಯಶಸ್ಸು ಸಿಗುತ್ತದೆ. ಹಲವರು ಪರೀಕ್ಷೆಗಳನ್ನು ಕಾಲ್‌ ಮಾಡಿದ ಮೇಲೆ ತಯಾರಿ ಆರಂಭಿಸುತ್ತಾರೆ. ಇದರಿಂದ ಒತ್ತಡ ಹೆಚ್ಚಾಗಿ ಯಶಸ್ಸು ಸಿಗುವುದಿಲ್ಲ. ನಾನು ಯಾವ ಪರೀಕ್ಷೆ ಬರೆಯಬೇಕು ಎಂದು ನಿರ್ಧರಿಸಿದ ದಿನದಿಂದಲೇ ತಯಾರಿ ಮಾಡಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿನಲ್ಲಿ ಜಸ್ಟ್‌ ಪಾಸ್‌ ಆಗಿ, ಪಿಯು ದ್ವಿತೀಯ ವರ್ಷದಲ್ಲಿ ಫೇಲ್‌ ಆಗಿ, ಪದವಿಯಲ್ಲೂ ಸಾಮಾನ್ಯ ಅಂಕಗಳೊಂದಿಗೆ ಪಾಸಾದ ನಾನು; ಕೆಎಎಸ್‌ನಲ್ಲಿ ಟಾಪ್‌ ರ್‍ಯಾಂಕ್‌ ಬರಲು ಸಾಧ್ಯವಾಗಿದೆ. ಇದಕ್ಕೆ ನನ್ನ ದೃಢ ನಿರ್ಧಾರ ಮತ್ತು ನಿರಂತರತೆಯೇ ಕಾರಣ’ ಎಂದು ಅಂಬಾದಾಸ್‌ ಕಾಂಬಳೆ ಟಿಪ್ಸ್‌ ನೀಡಿದರು.

ADVERTISEMENT

‘ಎಲ್ಲ ಪರೀಕ್ಷೆಗಳಂತೆಯೇ ಲೋಕಸೇವಾ ಆಯೋಗದ ಪರೀಕ್ಷೆಗಳನ್ನೂ ಓದಲು ಆಗುವುದಿಲ್ಲ. ಇದು ತುಂಬ ಸಮಯ ತೆಗೆದುಕೊಳ್ಳುವ ಹಂತ. ಸ್ಪೀಡ್‌ ಓದು, ಸ್ಪೀಡ್‌ ರಿಸಲ್ಟ್‌ ಬಯಸುವವರಿಗೆ ಇದು ಸಾಧ್ಯವಿಲ್ಲ. ನಾನು ಕೂಡ ಐದನೇ ಬಾರಿಯ ಪ್ರಯತ್ನದಲ್ಲಿ ಪಾಸಾಗಿದ್ದೇನೆ. ಓದುವ, ಬರೆಯುವ ಶೈಲಿ, ನಿಯಮ, ಪದ್ಧತಿ, ವಿಷಯವಸ್ತು ಎಲ್ಲವೂ ವಿಶಿಷ್ಟವಾಗಿರುತ್ತದೆ. ಹಾಗಾಗಿ, ಇಂಥ ಪರೀಕ್ಷೆಗಳಿಗೆ ವಿಶೇಷ ತಯಾರಿ ಬಹಳ ಮುಖ್ಯ. ತರಬೇತಿ ಅಗತ್ಯವಿದ್ದವರು ಬೆಂಗಳೂರು, ಧಾರವಾಡ, ನವದೆಹಲಿ ಮುಂತಾದ ಕಡೆ ಪಡೆಯಬಹುದು. ಇಂಟರ್‌ನೆಟ್‌ನಲ್ಲೂ ತರಬೇತಿ ಇದ್ದು, ಮೊಬೈಲ್‌ ಮೂಲಕವೇ ಪಡೆಯಬಹುದು.

ಕೆಪಿಎಸ್‌ಸಿ ಜಾಲತಾಣದಲ್ಲಿ ಸಂಬಂಧಿಸಿದ ಸಂಪೂರ್ಣ ಮಾಹಿತಿ, ವಿಷಯವಸ್ತು ಸಿಗುತ್ತದೆ, ಸಾಧಕರ ಟಿಪ್ಪಣಿಗಳು ಸಿಗುತ್ತವೆ. ಅವುಗಳನ್ನು ಪ್ರಿಪೇರ್‌ ಮಾಡಿಕೊಳ್ಳಬೇಕು. ಎಲ್ಲಕ್ಕಿಂತ ಹೆಚ್ಚಾಗಿ ನಿಯತಕಾಲಿಕೆಗಳ ಓದು ಬಹಳ ಅಗತ್ಯ. ನಾನು ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಟ್‌’ ಪತ್ರಿಕೆಗಳನ್ನು ಮಾತ್ರ ನಿಯಮಿತವಾಗಿ ಓದಿ, ಟಿಪ್ಪಣಿ ಮಾಡಿಕೊಂಡಿದ್ದೆ. ಪರೀಕ್ಷೆಯಲ್ಲಿ ಬಹಳ ಸಹಾಯವಾಗುತ್ತದೆ. ಕನ್ನಡ ಅಥವಾ ಇಂಗ್ಲಿಷ್‌ ಯಾವುದರಲ್ಲೂ ಸುಲಭವಾಗಿ ಜಯ ಗಳಿಸಬೇಕೆಂದರೆ ಶ್ರಮ ಹಾಕಲೇಬೇಕು’ ಎಂದು ಸ್ಟೆಲ್ಲಾ ಕಿವಿಮಾತು ಹೇಳಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.