ಬೆಂಗಳೂರು: ‘ಮೈಸೂರಿನ ಉದಯಗಿರಿ ಘಟನೆಯನ್ನು ಬಿಜೆಪಿ- ಕಾಂಗ್ರೆಸ್ ಎಂಬ ದೃಷ್ಟಿಯಿಂದ ನೋಡದೆ, ಹಿಂದೂ- ಮುಸ್ಲಿಂ ಎಂಬ ದೃಷ್ಟಿಯಿಂದಲೂ ನೋಡಲಾರದೆ, ಕರ್ನಾಟಕದಲ್ಲಿ ಆಂತರಿಕ ಸುರಕ್ಷತೆ ಯಾವ ಹಂತಕ್ಕೆ ತಲುಪಿದೆ ಎಂಬ ದೃಷ್ಟಿಯಿಂದ ನೋಡಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಹೇಳಿದರು.
‘ಈ ಗಲಭೆಯನ್ನು ಹಿಂದೂ–ಮುಸ್ಲಿಂ ದೃಷ್ಟಿಕೋನದಿಂದ ರಾಜಕೀಯ ಬಣ್ಣ ಕಟ್ಟಿದರೆ, ಅದರಿಂದ ದಂಗೆಕೋರರು, ದೇಶ ವಿರೋಧಿ ಶಕ್ತಿಗಳು ಸುರಕ್ಷಿತರಾಗುತ್ತಾರೆ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಆಂತರಿಕ ದಂಗೆ ಸೃಷ್ಟಿಸುವ ಘಾತುಕ ಶಕ್ತಿಗಳು ಹಿರಿಯ ಐಪಿಎಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದರು. ಇದರಿಂದ ಗಲಭೆಕೋರರು ಯಾವ ಹಂತಕ್ಕೆ ತಲುಪಿದ್ದಾರೆ ಎಂಬುದು ಗೊತ್ತಾಗುತ್ತದೆ. ಗಲಭೆಕೋರರ ಹಿಂದೆ ಯಾವ ಯಾವ ಶಕ್ತಿಗಳು ಕೆಲಸ ಮಾಡುತ್ತಿವೆ’ ಎಂದು ಪ್ರಶ್ನಿಸಿದರು.
‘ಪೊಲೀಸ್ ವ್ಯವಸ್ಥೆ ಅಸ್ಥಿರಗೊಳಿಸುವುದು ಮತ್ತು ಪೊಲೀಸರಿಂದ ಸುರಕ್ಷತೆ ಇಲ್ಲ ಎಂಬ ಭಾವನೆ ಮೂಡಿಸುವ ಷಡ್ಯಂತ್ರ ವ್ಯವಸ್ಥಿತವಾಗಿ ನಡೆಯುತ್ತಿದೆ. ಆಂತರಿಕ ಗಲಭೆ ನಡೆದರೆ ಪೊಲೀಸ್ ವ್ಯವಸ್ಥೆ ಅದನ್ನು ನಿಯಂತ್ರಣ ಮಾಡಲಾರದು ಎಂಬ ಸಂದೇಶವನ್ನು ಸಮಾಜಕ್ಕೆ ಮುಟ್ಟಿಸುವ ಕೆಲಸ ವ್ಯವಸ್ಥಿತವಾಗಿ ನಡೆಯತ್ತಿದೆ. ಇಂತಹ ದೇಶ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕುವ ಕುರಿತು ನಾವೆಲ್ಲರೂ ಯೋಚಿಸಬೇಕಾಗಿದೆ’ ಎಂದು ರಾಜೀವ್ ಹೇಳಿದರು.
‘ರಾಷ್ಟ್ರದ ಭದ್ರತೆಗೆ ಅಪಾಯಕಾರಿ ಆಗಿರುವವರನ್ನು ನಾವೆಲ್ಲ ಒಂದಾಗಿ ಎದುರಿಸುತ್ತಾ ಇದ್ದೇವಾ’ ಎಂದ ಅವರು, ‘ಇನ್ನೊಮ್ಮೆ ವಿಧ್ವಂಸಕ ಶಕ್ತಿಗಳು ತಲೆ ಎತ್ತದಂತೆ ಮಟ್ಟ ಹಾಕುವ ಧೈರ್ಯ ನಮ್ಮಲ್ಲಿದೆಯೇ? ಸರ್ಕಾರಕ್ಕೆ ಆ ಬದ್ಧತೆ ಇದೆಯೇ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.