ADVERTISEMENT

Prajwal Revanna: ಪ್ರಜ್ವಲ್‌ ರೇವಣ್ಣ ದುಷ್ಕೃತ್ಯಕ್ಕೆ ವಿಡಿಯೊವೇ ಅಸ್ತ್ರ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 0:28 IST
Last Updated 3 ಆಗಸ್ಟ್ 2025, 0:28 IST
<div class="paragraphs"><p>ಪ್ರಜ್ವಲ್‌ ರೇವಣ್ಣ </p></div>

ಪ್ರಜ್ವಲ್‌ ರೇವಣ್ಣ

   

ಬೆಂಗಳೂರು: ‘ಅತ್ಯಾಚಾರದ ಅಪರಾಧಿ ಪ್ರಜ್ವಲ್‌ ರೇವಣ್ಣ ಸಂತ್ರಸ್ತೆಯ ಜತೆ ತಾನು ನಡೆಸಿದ ಲೈಂಗಿಕ ಕ್ರಿಯೆಯ ವಿಡಿಯೊ ರೆಕಾರ್ಡ್ ಮಾಡಿದ್ದಾನೆ. ಅದನ್ನಿಟ್ಟು ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೇ, ಅಸ್ತ್ರವಾಗಿ ಬಳಸಿ ದುಷ್ಕೃತ್ಯ ಮೆರೆದಿದ್ದಾನೆ. ಹೀಗಾಗಿ, ಗರಿಷ್ಠ ಮತ್ತು ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್‌) ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಶಿಕ್ಷೆ ನಿಗದಿಗೊಳಿಸುವುದಕ್ಕೂ ಮುನ್ನ ಪ್ರಾಸಿಕ್ಯೂಷನ್‌ ಪರ ವಕೀಲರ ಕೋರಿಕೆಯನ್ನೂ ಆಲಿಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು, ಶನಿವಾರ ಸಂಜೆ 4 ಗಂಟೆಯ ನಂತರ ಶಿಕ್ಷೆಯ ಪ್ರಮಾಣವನ್ನು ನಿಗದಿಗೊಳಿಸಿ, ತೀರ್ಪು ಪ್ರಕಟಿಸಿದರು.

ADVERTISEMENT

ಶಿಕ್ಷೆ ಕಡಿಮೆ ಮಾಡುವಂತೆ ಅಪರಾಧಿಯ ಕೋರಿಕೆಗೆ ಪ್ರತಿಯಾಗಿ ರಾಜ್ಯ ಪ್ರಾಸಿಕ್ಯೂಷನ್‌ನ ಹೆಚ್ಚುವರಿ ಪ್ರಾಸಿಕ್ಯೂಟರ್ ಆಗಿದ್ದ ಬಿ.ಎನ್‌.ಜಗದೀಶ್‌, ಪ್ರಭಾವಿಯಾಗಿರುವ ಆರೋಪಿಗೆ ಗರಿಷ್ಠ ಶಿಕ್ಷೆ ವಿಧಿಸುವ ಸಂಬಂಧ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದರು.

‘ಈತ ತನ್ನ ವಿರುದ್ಧ ಕೇಸು ದಾಖಲಾದ ವೇಳೆ‌ ವಿದೇಶಕ್ಕೆ‌ ಪರಾರಿಯಾಗಿದ್ದ. ಇಂತಹ ಅಪರಾಧಿಗೆ ಗರಿಷ್ಠ ಶಿಕ್ಷೆ ನೀಡಬೇಕು. ಈತ ಹಲವು ಮಹಿಳೆಯರ ಮೇಲೆ ಈ ರೀತಿಯ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇಂತಹ ಸಂದರ್ಭದಲ್ಲಿ ದೂರುದಾರ ಮಹಿಳೆ ಎಲ್ಲರ ಪ್ರತಿನಿಧಿಯಾಗಿದ್ದಾರೆ. ಈ ವ್ಯಕ್ತಿಗೆ ಎಳ್ಳಷ್ಟೂ ಕನಿಕರ ತೋರಿಸಬಾರದು. ಜೀವಾವಧಿ ಶಿಕ್ಷೆಗಿಂತ ಕಡಿಮೆ ಶಿಕ್ಷೆ ನೀಡಬಾರದು’ ಎಂದು ಕೋರಿದರು.

ವಿಶೇಷ ಪ್ರಾಸಿಕ್ಯೂಟರ್‌ ಅಶೋಕ್‌ ಎನ್‌.ನಾಯಕ್‌, ‘ಸಂತ್ರಸ್ತೆಗೆ ಆರೋಪಿಯ ವಯಸ್ಸಿನ ಮಗ ಇದ್ದಾನೆ. ದುಷ್ಕೃತ್ಯ ಕೇವಲ ದೈಹಿಕ ಹಿಂಸೆ ಮಾತ್ರವಲ್ಲ ಮಾನಸಿಕ ಹಿಂಸೆ ಕೂಡಾ ಆಗಿದೆ. ವಿಡಿಯೊ ಬಹಿರಂಗವಾಗಿದ್ದಾಗ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮಾಡಿದ್ದರು’ ಎಂಬ ಅಂಶವನ್ನು ಪುನರುಚ್ಚರಿಸಿದರು. 

‘ಆರೋಪಿ ಸಾಮಾನ್ಯ ವ್ಯಕ್ತಿ ಅಲ್ಲ. ಸಂಸದ ಆಗಿದ್ದವನು, ಕಾನೂನು ರಚನೆಯ ಭಾಗವಾಗಿದ್ದವನು. ಇಂತಹ ವ್ಯಕ್ತಿ ಕಾನೂನನ್ನು ಕೈಗೆ ತೆಗೆದುಕೊಂಡಿದ್ದಾನೆ. ಇದೇ ಆರೋಪಿಯ ವಿರುದ್ಧ ಇದೇ ರೀತಿಯ ಇನ್ನೂ ಹಲವು ಅತ್ಯಾಚಾರ ಪ್ರಕರಣಗಳು ಬಾಕಿ ಇವೆ. ಬೇರೆ ಬೇರೆ ಮಹಿಳೆಯರ ಜೊತೆಗಿನ ವಿಡಿಯೊ ಕೂಡಾ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವಿಡಿಯೊಗಳನ್ನು ಜನರು ವೀಕ್ಷಿಸಿದ್ದಾರೆ. ಇಂತಹ ವ್ಯಕ್ತಿಗೆ ಯಾವುದೇ ದಯೆ ತೋರಿಸಬಾರದು. ತನ್ನ ಮೇಲೆ ಆದ ಅನ್ಯಾಯವನ್ನು ಹೇಳಿಕೊಳ್ಳಲಾಗದ ಅಸಹಾಯಹ ಮಹಿಳೆ‌ಯೊಬ್ಬರ ಮೇಲೆ‌ ಈತ ಘೋರ ಅತ್ಯಾಚಾರ ಎಸಗಿದ್ದಾನೆ’ ಎಂದರು. ‌

‘ಪ್ರಕರಣ ಹೊರಗೆ ಬಂದ ನಂತರ ಆರೋಪಿ ಕುಟುಂಬವು ಮಹಿಳೆಯನ್ನು ಅಪಹರಣ ಮಾಡಿತ್ತು. ಸಾಕ್ಷಿಯನ್ನು ಹೆದರಿಸುವ ಮತ್ತು ಸಾಕ್ಷ್ಯಗಳನ್ನು ತಿರುಚುವ ಯತ್ನ ಮಾಡಿತ್ತು. ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ಕೊಡಿಸುವ ಕೆಲಸ‌ವೂ ನಡೆದಿತ್ತು. ಇಂತಹ ಹೀನಾಯ ಕೃತ್ಯ ಎಸಗಿದ್ದರೂ ಆರೋಪಿಗೆ ಯಾವುದೇ ಪಶ್ಚಾತ್ತಾಪ ಇಲ್ಲ. ಸಿಕ್ಕ ಸಿಕ್ಕವರ ಮೇಲೆಲ್ಲಾ ಆರೋಪ ಹೊರಿಸುವ ಕೆಲಸ ಮಾಡಿದ್ದಾನೆ. ಕೋರ್ಟ್‌ ವಿಚಾರಣೆಯನ್ನು ವಿಳಂಬ ಮಾಡುವ ಪ್ರಯತ್ನವನ್ನೂ ನಡೆಸಿದ್ದಾನೆ. ಆದ್ದರಿಂದ, ಇಂತಹ ವ್ಯಕ್ತಿಗೆ ಯಾವುದೇ ಕನಿಕರ ತೋರಿಸಬಾರದು’ ಎಂದು ಪ್ರತಿಪಾದಿಸಿದರು.

ಪ್ರಕರಣ: ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸೈಬರ್‌ ಅಪರಾಧ ಠಾಣೆಯಲ್ಲಿ ಪ್ರಜ್ವಲ್‌ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಎಸ್ಐಟಿ ಅಧಿಕಾರಿಗಳು 123 ಸಾಕ್ಷ್ಯಗಳನ್ನು ಸಂಗ್ರಹಿಸಿ, ಸುಮಾರು 2 ಸಾವಿರ ಪುಟಗಳ ದೋಷಾರೋಪ ಪಟ್ಟಿಯನ್ನು 2024ರ ವರ್ಷಾಂತ್ಯದಲ್ಲಿ ಜನಪ್ರತಿನಿಧಿಗಳ ವಿಶೇಷ (ಸೆಷನ್ಸ್‌) ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಜ್ವಲ್‌ ವಿರುದ್ಧ 2025ರ ಏಪ್ರಿಲ್‌ 3ರಂದು ದೋಷಾರೋಪ ನಿಗದಿ ಮಾಡಿದ್ದ ನ್ಯಾಯಾಲಯ ಮೇ 5ರಂದು ವಿಚಾರಣೆ ಆರಂಭಿಸಿತ್ತು. ಅಂದಿನಿಂದ ಜೂನ್‌ 28ರವರೆಗೆ ಒಟ್ಟು 22 ದಿನಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ತೀರ್ಪು ಕಾಯ್ದಿರಿಸಿತ್ತು. ಪ್ರಜ್ವಲ್‌ ಪರ ವಕೀಲರಾದ ಜಿ.ಅರುಣ್‌ ಹಾಗೂ ವಿಪುಲ್‌ ಜೈನ್‌ ವಾದ ಮಂಡಿಸಿದ್ದರು. 

ಅದು ಪ್ರಜ್ವಲ್‌ನದ್ದೇ ಗುಪ್ತಾಂಗ...!

ಸಂಗ್ರಹಿಸಲಾಗಿದ್ದ ಸಾಕ್ಷ್ಯಗಳನ್ನು ವಿವಿಧ ಕ್ಷೇತ್ರಗಳ ತಜ್ಞರು ಮತ್ತು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಿಖರ ವೈದ್ಯಕೀಯ ನೆರವಿನಿಂದ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿರುವ ಎಸ್‌ಐಟಿಗೆ ಪ್ರಬಲ ಸಾಕ್ಷ್ಯ ದೊರೆತದ್ದೇ ವಿಡಿಯೊದಿಂದ. ಪ್ರಜ್ವಲ್ ಮಾಡಿಕೊಂಡಿದ್ದ ವಿಡಿಯೊದಲ್ಲಿ ಕಂಡಿದ್ದ ಶಿಶ್ನದ ಗಾತ್ರ, ಬಣ್ಣ, ಆಕಾರ ನಿಮಿರುವಿಕೆಯ ಸಾಮರ್ಥ್ಯ ಇತ್ಯಾದಿ... ಅಗತ್ಯ ಸಕಲಾಂಶಗಳನ್ನು ವಿಡಿಯೊದಲ್ಲಿ ಸೆರೆ ಹಿಡಿದಿದ್ದ ಚಿತ್ರದೊಂದಿಗೆ ಹೋಲಿಕೆ ಮಾಡಿದಾಗ ಅದು ಪ್ರಜ್ವಲ್‌ದೇ ಶಿಶ್ನ ಮತ್ತು ದುಷ್ಕೃತ್ಯ ಎಂಬ ನೈಜತೆ ಹೊರಹೊಮ್ಮಿರುವುದು ತನಿಖೆಯ ವಿಶೇಷ. ಈ ಅಂಶವನ್ನು ತೀರ್ಪಿನ 345ನೇ ಪುಟದಿಂದ ವಿಸ್ತೃತವಾಗಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.