ADVERTISEMENT

ಪ್ರಜ್ವಲ್‌ ರೇವಣ್ಣ ಮೇಲ್ಮನವಿ: ಆಕ್ಷೇಪಣೆ ಸಲ್ಲಿಸಲು ಹೈಕೋರ್ಟ್‌ ಕಾಲಾವಕಾಶ

ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 23:30 IST
Last Updated 28 ಅಕ್ಟೋಬರ್ 2025, 23:30 IST
ಪ್ರಜ್ವಲ್‌ ರೇವಣ್ಣ
ಪ್ರಜ್ವಲ್‌ ರೇವಣ್ಣ   

ಬೆಂಗಳೂರು: ಮನೆಗೆಲಸದ ಮಧ್ಯವಯಸ್ಕ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ ದುಷ್ಕೃತ್ಯದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಜೀವಾವಧಿ ಕಠಿಣ ಜೈಲು ಶಿಕ್ಷೆ ರದ್ದುಗೊಳಿಸುವಂತೆ ಕೋರಿ ಹಾಸನ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಎರಡು ವಾರ ಕಾಲಾವಕಾಶ ನೀಡಿದೆ. 

‘ನನ್ನ ವಿರುದ್ಧ, ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರ ತೀರ್ಪು ಪ್ರಶ್ನಿಸಿ ಪ್ರಜ್ವಲ್‌ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೆ.ಎಸ್.ಮುದಗಲ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಪರ ಹಾಜರಿದ್ದ ವಿಶೇಷ ಪ್ರಾಸಿಕ್ಯೂಟರ್ ರವಿವರ್ಮ ಕುಮಾರ್‌, ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. 

ADVERTISEMENT

ಪ್ರಜ್ವಲ್‌ ಪರ ಹಾಜರಾಗಿದ್ದ ಸುಪ್ರೀಂ ಕೋರ್ಟ್‌ನ ಪದಾಂಕಿತ ಹಿರಿಯ ವಕೀಲ ಸಿದ್ಧಾರ್ಥ್‌ ಲೂಥ್ರಾ ಅವರು ಇದಕ್ಕೆ ಸಮ್ಮತಿಸಿದರು. ಉಭಯ ಪಕ್ಷಗಾರರ ವಾದ ಆಲಿಸಿದ ನ್ಯಾಯಪೀಠ ಆಕ್ಷೇಪಣೆ ಸಲ್ಲಿಸಲು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ವಿಚಾರಣೆಯನ್ನು ನವೆಂಬರ್‌ 13ಕ್ಕೆ ಮುಂದೂಡಿತು.

ಮೇಲ್ಮನವಿ: ‘ರಾಜಕೀಯ ದುರುದ್ದೇಶದಿಂದ ಮಹಿಳೆಯನ್ನು ಅಸ್ತ್ರವನ್ನಾಗಿಸಿ ನನ್ನ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಸಂತ್ರಸ್ತೆ 2023ರಲ್ಲಿ ಫಾರ್ಮ್ ಹೌಸ್‌ನಲ್ಲಿನ ನಮ್ಮ ಗೃಹಪ್ರವೇಶದಲ್ಲಿ ಪಾಲ್ಗೊಂಡಿದ್ದಾರೆ. ನಾನು ಅತ್ಯಾಚಾರ ಎಸಗಿದ್ದೇನೆ ಎನ್ನುವುದಾದರೆ ಆಕೆ ನಮ್ಮ ಗೃಹಪ್ರವೇಶಕ್ಕೆ ಹೇಗೆ ತಾನೇ ಬರುತ್ತಿದ್ದರು’ ಎಂದು ಮೇಲ್ಮನವಿಯಲ್ಲಿ ಪ್ರಶ್ನಿಸಿರುವ ಪ್ರಜ್ವಲ್‌ ರೇವಣ್ಣ, ‘ವಿಚಾರಣಾ ನ್ಯಾಯಾಲಯದ ತೀರ್ಪು ಮಿಥ್ಯಾದೇಶ, ಕಾನೂನುಬಾಹಿರ, ಪ್ರಕರಣದ ದಾಖಲೆಗಳಲ್ಲಿರುವ ವಾಸ್ತವಾಂಶಗಳಿಗೆ ವಿರುದ್ಧವಾದ ನಿಲುವುಗಳಿಂದ ಕೂಡಿದ್ದು ಇದನ್ನು ರದ್ದುಗೊಳಿಸಬೇಕು’ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.